ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಕದನ ವಿರಾಮ ಒಪ್ಪಂದವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಆದರೆ, ಇರಾನ್ ಈ ಹೇಳಿಕೆಯನ್ನು ತಿರಸ್ಕರಿಸಿದೆ. ಕತಾರ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಪ್ರಸ್ತಾವನೆಗೆ ಒಪ್ಪಿಕೊಂಡಿದೆ ಎಂಬ ವರದಿಗಳನ್ನು ಇರಾನ್ ನಿರಾಕರಿಸಿದೆ.
ವಾಷಿಂಗ್ಟನ್/ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವೆ ಕಳೆದ 12 ದಿನಗಳಿಂದ ನಡೆಯುತ್ತಿರುವ ಯುದ್ಧದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಇರಾನ್ ಈ ಹೇಳಿಕೆಯನ್ನು ತಿರಸ್ಕರಿಸಿ, ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದೆ. ಈ ಮಧ್ಯೆ, ಅಮೆರಿಕವೂ ಇರಾನ್ ಮೇಲೆ ದಾಳಿ ನಡೆಸಿದ್ದು, ಇರಾನ್ ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಂಡು ಹಲವು ಸ್ಥಳಗಳ ಮೇಲೆ ದಾಳಿ ಮಾಡಿದೆ.
ಕದನ ವಿರಾಮ ಒಪ್ಪಂದ ಇಲ್ಲ: ಇರಾನ್
: ಇರಾನ್ ವಿದೇಶಾಂಗ ಸಚಿವ ಸಯೀದ್ ಅಬ್ಬಾಸ್ ಅರಘ್ಚಿ, ಯಾವುದೇ ಕದನ ವಿರಾಮ ಒಪ್ಪಂದವಾಗಿಲ್ಲ. ಇಸ್ರೇಲ್ ತನ್ನ ಆಕ್ರಮಣವನ್ನು ಟೆಹ್ರಾನ್ ಸಮಯ ಬೆಳಿಗ್ಗೆ 4 ಗಂಟೆಗೆ ನಿಲ್ಲಿಸಬೇಕು. ಅದರ ನಂತರವೇ ನಾವು ಪ್ರತಿಕ್ರಿಯೆಯನ್ನು ಮುಂದುವರಿಸುವುದಿಲ್ಲ. ಕದನ ವಿರಾಮದ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳುತ್ತೇವೆ, ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್‌ನ ಈ ಹೇಳಿಕೆಯು ಟ್ರಂಪ್‌ರ ಘೋಷಣೆಗೆ ವಿರುದ್ಧವಾಗಿದ್ದು, ಜಾಗತಿಕ ರಾಜಕೀಯದಲ್ಲಿ ಗೊಂದಲ ಸೃಷ್ಟಿಸಿದೆ.
ಟ್ರಂಪ್ ಉಲ್ಟಾ:
ಈ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ‘ಇದು ವರ್ಷಗಟ್ಟಲೆ ನಡೆಯಬಹುದಾದ ಮತ್ತು ಮಧ್ಯಪ್ರಾಚ್ಯವನ್ನು ನಾಶಪಡಿಸಬಹುದಾದ ಯುದ್ಧ. ಆದರೆ, ಅದು ಸಂಭವಿಸಲಿಲ್ಲ ಮತ್ತು ಎಂದಿಗೂ ಸಂಭವಿಸುವುದಿಲ್ಲ! ದೇವರು ಇಸ್ರೇಲ್, ಇರಾನ್, ಮಧ್ಯಪ್ರಾಚ್ಯ, ಅಮೆರಿಕ ಮತ್ತು ಇಡೀ ಜಗತ್ತನ್ನು ಆಶೀರ್ವದಿಸಲಿ! ಎಂದು ಹೇಳಿದ್ದಾರೆ. ಆದರೆ, ಇರಾನ್‌ನ ತೀಕ್ಷ್ಣ ಪ್ರತಿಕ್ರಿಯೆಯಿಂದ ಟ್ರಂಪ್‌ರ ಹೇಳಿಕೆಯ ವಿಶ್ವಾಸಾರ್ಹತೆ ಪ್ರಶ್ನೆಗೊಳಗಾಗಿದೆ.
ಕದನ ವಿರಾಮಕ್ಕೆ ಕತಾರ್ ಮಧ್ಯೆಸ್ಥಿಕೆ:
ರಾಯಿಟರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಅಮೆರಿಕ ಬೆಂಬಲಿತ ಕತಾರ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್‌ನೊಂದಿಗಿನ ಯುದ್ಧ ತಡೆಯಲು ಕದನ ವಿರಾಮ ಪ್ರಸ್ತಾವನೆಗೆ ಟೆಹ್ರಾನ್ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಆದರೆ, ಇರಾನ್‌ನ ಇತ್ತೀಚಿನ ಹೇಳಿಕೆಯು ಈ ವರದಿಯನ್ನು ಸಹ ಸಂಶಯಕ್ಕೀಡು ಮಾಡಿದೆ. ಒಟ್ತಾರೆ ಈ ಘಟನೆಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಜಾಗತಿಕ ಸಮುದಾಯವು ಈ ಬಿಕ್ಕಟ್ಟಿನ ಮುಂದಿನ ಹೆಜ್ಜೆಯನ್ನು ಎದುರುನೋಡುತ್ತಿದೆ.