ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮಕ್ಕಳ ಧರ್ಮದ ಬಗ್ಗೆ ಗೌರಿ ಖಾನ್ ಅವರ ಹಳೆಯ ಮಾತುಗಳು ಈಗ ವೈರಲ್ ಆಗಿವೆ.
ಶಾರುಖ್ ಖಾನ್ (Shahrukh Khan) ಹಾಗೂ ಪತ್ನಿ ಗೌರಿ ಖಾನ್ (Gauri Khan) ಅವರದ್ದು ಅಂತರ್ಧರ್ಮಿಯ ಮದುವೆ(interfaith marriage). ಆರಂಭದಲ್ಲಿ ಈ ಜೋಡಿಯೂ ಸಾಕಷ್ಟು ತೊಂದರೆಗಳನ್ನು ಈ ಕಾರಣಕ್ಕೆ ಎದುರಿಸಿದ್ದರು. ಆದರೆ ಧರ್ಮವನ್ನು ಮೀರಿ ಪ್ರೀತಿ ಗೆದ್ದಿದೆ ಎಂಬುದಕ್ಕೆ ಮೂರು ದಶಕಗಳಿಗೂ ಅಧಿಕ ಕಾಲ ಯಾವುದೇ ವಿರಸವಿಲ್ಲದೇ ಸಾಗಿದ ಇವರ ದಾಂಪತ್ಯ ಜೀವನವೇ ಸಾಕ್ಷಿ. ಅಪ್ಪ ಮುಸ್ಲಿಂ ಅಮ್ಮ ಹಿಂದೂ. ಹೀಗಿರುವಾಗ ಈ ಸ್ಟಾರ್‌ಗಳ ಮಕ್ಕಳು ಯಾವ ಧರ್ಮವನ್ನು ಪಾಲಿಸುತ್ತಾರೆ ಎಂಬುದು ಅನೇಕರ ಕುತೂಹಲ. ತಮ್ಮ ಮಕ್ಕಳ ಧರ್ಮದ ಆಯ್ಕೆಯಲ್ಲಿ ಇವರ ಪ್ರಭಾವ ಇದ್ಯಾ ತಮ್ಮ ಮಕ್ಕಳ ಈ ಆಯ್ಕೆಯ ಬಗ್ಗೆ ಇವರು ಏನು ಹೇಳುತ್ತಾರೆ ಎಂಬ ಬಗ್ಗೆ ಶಾರುಖ ಪತ್ನಿ ಗೌರಿ ಖಾನ್ ಅವರು ಮಾತನಾಡಿರುವ ಹಳೆ ವೀಡಿಯೋವೊಂದು ಈಗ ವೈರಲ್ ಆಗುತ್ತಿದೆ. ಕಾಫಿ ವಿತ್ ಕರಣ್ (Koffee with Karan)ಶೋದಲ್ಲಿ ಶಾರುಖ್ ಪತ್ನಿ ಗೌರಿ ಖಾನ್ ಮಾತನಾಡಿರುವ ದೃಶ್ಯದ ತುಣುಕು ಇದಾಗಿದೆ.
ಕಾಪಿ ವಿತ್ ಕರಣ್ ಶೋ(Koffee with Karan show)ವೀಡಿಯೋ ವೈರಲ್
ಈ ವೀಡಿಯೋದಲ್ಲಿ ಗೌರಿ ಖಾನ್ ತನ್ನ ಧಾರ್ಮಿಕ ನಂಬಿಕೆ, ತನ್ನ ಮಗ ಆರ್ಯನ್‌ನ ಧಾರ್ಮಿಕ ಗುರುತು ಮತ್ತು ಬಾಲಿವುಡ್ ಅತಿದೊಡ್ಡ ತಾರೆಯಾದ ಶಾರುಖ್ ಖಾನ್ ಜೊತೆ ತನ್ನ ಮದುವೆಯ ಬಗ್ಗೆ, ಪರಸ್ಪರ ಗೌರವದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ. ಈ ಶೋದಲ್ಲಿ ಗೌರಿ ಖಾನ್ ಸುಸೇನ್ ಖಾನ್(Sussanne Khan)(ಹೃತಿಕ್ ರೋಷನ್ ಮಾಜಿ ಪತ್ನಿ) ಜೊತೆಗೆ ಕಾಣಿಸಿಕೊಂಡಿದ್ದು, ತಮ್ಮಕುಟುಂಬದಲ್ಲಿನ ಧರ್ಮದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ. ತಮ್ಮ ಮಗ ಆರ್ಯನ್ ಯಾವಾಗಲೂ ಶಾರುಖ್ ಖಾನ್ ಅವರ ನಂಬಿಕೆಯೊಂದಿಗೆ ಬಲವಾಗಿ ಗುರುತಿಸಿಕೊಂಡಿದ್ದಾನೆ ಎಂದು ಗೌರಿ ಈ ಶೋದಲ್ಲಿ ಬಹಿರಂಗಪಡಿಸಿದ್ದಾರೆ.
ಆರ್ಯನ್ ಮಾತಿಗೆ ಅಚ್ಚರಿಗೊಳ್ಳುವ ಗೌರಿ ತಾಯಿ
ಆರ್ಯನ್ ಅಪ್ಪ ಶಾರುಖ್ ಖಾನ್ ಅವರನ್ನು ತುಂಬಾ ಪ್ರೀತಿಸುತ್ತಾನೆ ಹಾಗೆಯೇ ಅವನು ತಂದೆಯ ಧರ್ಮವನ್ನು ಅದೇ ರೀತಿ ಅನುಸರಿಸುತ್ತಾನೆ. ಆರ್ಯನ್ ಯಾವಾಗಲೂ ‘ನಾನು ಮುಸ್ಲಿಂ’ ಎಂದು ಹೇಳುತ್ತಾನೆ. ಇದು ಆಗಾಗ್ಗೆ ನನ್ನ ತಾಯಿಯನ್ನು ಆಶ್ಚರ್ಯಗೊಳಿಸುತ್ತದೆ ಮತ್ತು ಅವರು ಹೇಗೆ ಪ್ರತಿಕ್ರಿಯಿಸಬೇಕೆಂದು ಗೊಂದಲಕ್ಕೊಳಗಾಗುತ್ತಾರೆ ಆದರೆ ಇದು ಅವರು ಕುಟುಂಬವಾಗಿ ಸ್ವೀಕರಿಸಿದ ವಾಸ್ತವ ಇದು ಎಂಬುದನ್ನು ಒಪ್ಪಿಕೊಂಡರು ಎಂದು ಗೌರಿಖಾನ್ ಹೇಳಿದ್ದಾರೆ. ತಮ್ಮ ಅಂತರ್ಧರ್ಮೀಯ ವಿವಾಹದಲ್ಲಿ ಪರಸ್ಪರ ಗೌರವದ ಮಹತ್ವ ಎಷ್ಟು ಮಹತ್ವದ ಪಾತ್ರ ವಹಿಸಿದೆ ಎಂಬುದನ್ನು ಒತ್ತಿ ಹೇಳಿದರು. ಅಲ್ಲದೇ ಧರ್ಮದ ವಿಚಾರದಲ್ಲಿ ತಮ್ಮ ಮನೆಯಲ್ಲಿ ಸ್ಪಷ್ಟವಾದ ಸಮತೋಲನವಿದೆ ಎಂದು ಅವರು ಹೇಳಿದ್ದಾರೆ. ಅವರು ಶಾರುಖ್ ಖಾನ್ ಅವರ ಧರ್ಮವನ್ನು ಆಳವಾಗಿ ಗೌರವಿಸುತ್ತೇನೆ ಹೀಗಾಗಿ ಮತಾಂತರಗೊಳ್ಳುವ ಅಗತ್ಯ ಎಂದಿಗೂ ಬರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಡ್ಯಾನ್ಸ್ ಪ್ಲಸ್‌ನಲ್ಲಿ(Dance Plus) ಧರ್ಮದ ಬಗ್ಗೆ ಮಾತನಾಡಿದ್ದ ಶಾರುಖ್
ಮನೆಯ ಪ್ರತಿಯೊಬ್ಬರೂ ತಮ್ಮದೇ ಆದ ಸ್ವಂತ ಧರ್ಮವನ್ನು ಅನುಸರಿಸುತ್ತಾರೆ. ಶಾರುಖ್ ಕೂಡ ಯಾವಾಗಲೂ ನನ್ನ ನಂಬಿಕೆಗಳಿಗೆ ಸಮಾನ ಗೌರವವನ್ನು ತೋರಿಸಿದ್ದಾರೆ ಎಂದು ಗೌರಿ ಖಾನ್ ಹೇಳಿದ್ದಾರೆ. ಕೆಲವು ವರ್ಷಗಳ ಹಿಂದೆ, ಡ್ಯಾನ್ಸ್ ಪ್ಲಸ್ 5 ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾರುಖ್ ಖಾನ್ ತಾನು ಮತ್ತು ಗೌರಿ ಖಾನ್ ತಮ್ಮ ಕುಟುಂಬದಲ್ಲಿ ಧರ್ಮವನ್ನು ಹೇಗೆ ನೋಡುತ್ತೇವೆ ಎಂಬುದರ ಕುರಿತು ಒಂದು ಹೃದಯಸ್ಪರ್ಶಿ ಮಾತುಗಳಲ್ಲಿ ಹೇಳಿಕೊಂಡಿದ್ದರು.
ಮಗಳ ಧರ್ಮದ ಪ್ರಶ್ನೆಗೆ ಶಾರುಖ್ ಹೇಳಿದ್ದೇನು?
ತಾನು ಮುಸ್ಲಿಂ ಮತ್ತು ಗೌರಿ ಹಿಂದೂ ಆಗಿದ್ದರೂ ಸಹ, ಅವರು ಎಂದಿಗೂ ಧರ್ಮ ತಮ್ಮನ್ನು ವಿಭಜಿಸುವ ರೇಖೆಯನ್ನಾಗಿ ಮಾಡಿಲ್ಲ ಹಾಗೂ ತಮ್ಮ ಮಕ್ಕಳನ್ನು ಧರ್ಮದ ಬದಲಾಗಿ ರಾಷ್ಟ್ರೀಯ ಗುರುತಿನ ಪುಜ್ಞೆಯೊಂದಿಗೆ ಬೆಳೆಸಿದ್ದಾರೆ ಎಂದರು. ಒಮ್ಮೆ ತಮ್ಮ ಮಗಳು ಶಾಲಾ ತರಗತಿಗೆ ತಮ್ಮ ಧರ್ಮದ ಬಗ್ಗೆ ಕೇಳಿದ ಕ್ಷಣವನ್ನು ಅವರು ನೆನಪಿಸಿಕೊಂಡರು. ಅವರ ಉತ್ತರ ಸರಳವಾದರೂ ಪ್ರಬಲವಾಗಿತ್ತು: ಮಗಳು ಹೀಗೆ ಕೇಳಿದಾಗ, ನಾವು ಭಾರತೀಯರು. ನಮಗೆ ಧರ್ಮವಿಲ್ಲ ಎಂದು ಹೇಳಿದ್ದಾಗಿ ಶಾರುಖ್ ಖಾನ್ ಆ ಶೋದಲ್ಲಿ ಹೇಳಿಕೊಂಡಿದ್ದಾರೆ.
1991ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದ ಶಾರುಖ್ ಗೌರಿ
ಅಕ್ಟೋಬರ್ 25, 1991 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾರುಖ್ ಖಾನ್ ಮತ್ತು ಗೌರಿ ಖಾನ್‌ಗೆ, ಆರ್ಯನ್, ಸುಹಾನಾ ಮತ್ತು ಅಬ್‌ರಾಮ್ (Aryan Khan Suhana Khan and AbRam)ಎಂಬ ಮೂವರು ಮಕ್ಕಳಿದ್ದಾರೆ. ಇನ್ನು ಶಾರುಖ್ ಖಾನ್ ಸಿನಿಮಾ ಬಗ್ಗೆ ಹೇಳುವುದಾದರೆ, ಶಾರುಖ್ ಖಾನ್ ಮುಂದಿನ ಆ್ಯಕ್ಷನ್-ಥಿಲ್ಲರ್ ಚಿತ್ರ ಕಿಂಗ್‌ನಲ್ಲಿ(action-thriller King) ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ಅವರು ತಮ್ಮ ಮಗಳು ಸುಹಾನಾ ಖಾನ್ ಜೊತೆ ನಟಿಸಲಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದ ಮತ್ತು ಸಿದ್ಯಾರ್ಥ್ ಆನಂದ್ ಮತ್ತು ರೆಡ್ ಚಿಲ್ಲೀಸ್ ಎಂಟರ್ಟೈನ್ಮಂಟ್ ನಿರ್ಮಿಸಿರುವ ಈ ಸಿನಿಮಾವೂ ದೊಡ್ಡ ಪರದೆಯ ಮೇಲೆ ಸುಹಾನಾ ಅವರ ಚೊಚ್ಚಲ ಸಿನಿಮಾವಾಗಿರಲಿದೆ.