ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 4 ನೇ ದಿನದಂದು ಅವರು ಈ ಸಾಧನೆ ಮಾಡಿದರು.
ಲೀಡ್ಸ್ (ಜೂ.23): ಭಾರತದ ಟೆಸ್ಟ್ ತಂಡದ ಉಪನಾಯಕ ಹಾಗೂ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೆಸ್ಟ್ ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ವಿಶ್ವದ ಕೇವಲ 2ನೇ ವಿಕೆಟ್ ಕೀಪರ್ ಎನ್ನುವ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅವರು ಜಿಂಬಾಬ್ವೆಯ ದಿಗ್ಗಜ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹಾಗೂ ಆರ್‌ಸಿಬಿ ಕೋಚ್ ಆಗಿರುವ ಆಂಡಿ ಫ್ಲವರ್ ಜೊತೆ ಸೇರಿದ್ದಾರೆ. 2ನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಕೇವಲ 129 ಎಸೆತಗಳಲ್ಲಿ ಶತಕ ಸಿಡಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ 134 ಎಸೆತಗಳಲ್ಲಿ ಶತಕ ಸಿಡಿಸಿದ್ದರೆ, 2ನೇ ಇನ್ನಿಂಗ್ಸ್‌ನಲ್ಲಿ ಅವರು ಆಡಿದ ಆಟ ಇನ್ನಷ್ಟು ಪ್ರಬುದ್ಧವಾಗಿತ್ತು. ನಾಯಕ ಶುಭ್‌ಮನ್ ಗಿಲ್ ಅವರ ವಿಕೆಟ್‌ಅನ್ನು ಕಳೆದುಕೊಂಡು ಭಾರತ ಸಂಕಷ್ಟದಲ್ಲಿದ್ದ ವೇಳೆ ರಿಷಬ್ ಪಂತ್, ಕೆಎಲ್ ರಾಹುಲ್ ಜೊತೆಗೂಡಿ ಭಾರೀ ಜೊತೆಯಾಟವಾಡಿದರು. ಕೆಎಲ್ ರಾಹುಲ್ ಕೂಡ ಶತಕ ಬಾರಿಸುವುದರೊಂದಿಗೆ ಭಾರತ ಮತ್ತೊಮ್ಮೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು.
ಆಧುನಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ರಿಷಬ್ ಪಂತ್ ಅತ್ಯಂತ ಅಪಾಯಕಾರಿ ಹಾಗೂ ಎಂಟರ್‌ಟೇನ್‌ಮೆಂಟ್ ನೀಡುವ ಆಟಗಾರ ಎನ್ನುವುದಕ್ಕೆ ಟೆಸ್ಟ್‌ನ ಅವಳಿ ಶತಕಗಳು ಕಾರಣವಾಗಿದೆ. ಅದಲ್ಲದೆ, ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ.
ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ನೋಡುವುದಾದರೆ, ವಿಜಯ್ ಹಾರೆ, ಸುನೀಲ್ ಗವಾಸ್ಕರ್ (3 ಬಾರಿ), ರಾಹುಲ್ ದ್ರಾವಿಡ್(2), ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮ ಇದ್ದಾರೆ. ಈ ಪಟ್ಟಿಗೆ ರಿಷಭ್ ಪಂತ್ ಹೊಸ ಎಂಟ್ರಿ ಆಗಿದ್ದಾರೆ.
140 ಎಸೆತಗಳಲ್ಲಿ 118 ರನ್ ಬಾರಿಸಿದ್ದಾಗ, ಇನ್ನಿಂಗ್ಸ್‌ನ 72ನೇ ಓವರ್‌ನಲ್ಲಿ ಶೋಯೆಬ್ ಬಶೀರ್‌ಗೆ ಪಂತ್ ವಿಕೆಟ್ ಒಪ್ಪಿಸಿದರು. ಶತಕದ ಗಡಿ ದಾಟಿದ ಬಳಿಕ ಬಿರುಸಾಗಿ ಬ್ಯಾಟಿಂಗ್ ಮಾಡಿದ್ದ ಪಂತ್, ಜೋ ರೂಟ್ ಎಸೆದ ಒಂದೇ ಓವರ್‌ನಲ್ಲಿ 19 ರನ್ ಬಾರಿಸಿದ್ದರು. ಔಟ್ ಆಗುವ ಮುನ್ನ ಭಾರತಕ್ಕೆ ಉತ್ತಮ ಲೀಡ್ ತಂದುಕೊಟ್ಟು ತಂಡದ ಸ್ಥಿತಿ ಸುಧಾರಿಸಿದ್ದರು.