Headlines

ಏರೋಸ್ಪೇಸ್ ಪಾರ್ಕ್‌ಗೆ 3 ಹಳ್ಳಿಗಳ 495 ಎಕ್ಕರೆ ಭೂಸ್ವಾಧೀನ ರದ್ದು: ಎಂಬಿ ಪಾಟೀಲ್ | Karnataka Government Drops Land Acquisition For 495 Acres In Devanahalli Villages For Aerospace Park Rav

ಏರೋಸ್ಪೇಸ್ ಪಾರ್ಕ್‌ಗೆ 3 ಹಳ್ಳಿಗಳ 495 ಎಕ್ಕರೆ ಭೂಸ್ವಾಧೀನ ರದ್ದು: ಎಂಬಿ ಪಾಟೀಲ್ | Karnataka Government Drops Land Acquisition For 495 Acres In Devanahalli Villages For Aerospace Park Rav



ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಉದ್ದೇಶಿತ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ಗಾಗಿ ಮೂರು ಗ್ರಾಮಗಳ 495 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲಾಗಿದೆ. 

(ಬೆಂಗಳೂರು ಜೂ.25): ಉದ್ದೇಶಿತ ಹೈಟೆಕ್‌ ಡಿಫೆನ್ಸ್‌ ಮತ್ತು ಏರೋಸ್ಪೇಸ್‌ ಪಾರ್ಕ್‌ ಅಭಿವೃದ್ಧಿಗಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿನ 495 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್‌ ಅವರು, ಹೈಟೆಕ್‌ ಡಿಫೆನ್ಸ್‌ ಮತ್ತು ಏರೋಸ್ಪೇಸ್‌ ಪಾರ್ಕ್‌ ಅಭಿವೃದ್ಧಿಗಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಗೆ ಸೇರಿದ 13 ಗ್ರಾಮಗಳ 1,777 ಎಕರೆ 2 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 2021ರ ಆ.27ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ, 2022ರ ಫೆ.15ರಂದು ಆದೇಶಿಸಲಾಗಿದೆ. ಆದರೆ, ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿ ಗ್ರಾಮಗಳ ಗ್ರಾಮಸ್ಥರು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಈ ಕಾರಣದಿಂದಾಗಿ ಗ್ರಾಮಸ್ಥರ ಹಿತದೃಷ್ಟಿ ಮತ್ತು ಬೇಡಿಕೆಯಂತೆ ಆ ಗ್ರಾಮಗಳ ಭೂಮಿ ಸ್ವಾಧೀನದಿಂದ ಕೈಬಿಡಲಾಗಿದೆ ಎಂದು ಹೇಳಿದರು.

ಹೈಟೆಕ್‌ ಡಿಫೆನ್ಸ್‌ ಮತ್ತು ಏರೋಸ್ಪೇಸ್‌ ಪಾರ್ಕ್‌ಗಾಗಿ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ 1,777.2 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿಗಳಲ್ಲಿನ ನೀರಾವರಿ, ಕೃಷಿ ಮತ್ತು ಜನವಸತಿಗಳನ್ನು ಪರಿಗಣಿಸಿ ಭೂಸ್ವಾಧೀನದಿಂದ ಆ ಹಳ್ಳಿಗಳಿಗೆ ಸೇರಿದ ಕ್ರಮವಾಗಿ 231.23 ಎಕರೆ, 185.18 ಎಕರೆ ಮತ್ತು 78.21 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ.

ಉಳಿದ 10 ಗ್ರಾಮಗಳಾದ ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮುದ್ದೇನಹಳ್ಳಿ ಮತ್ತು ಹಾಡ್ಯಾಳ ವ್ಯಾಪ್ತಿಯ 1,232 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಭೂಮಿ ನೀಡಲಿರುವ ರೈತರಿಗೆ ಜಿಲ್ಲಾಧಿಕಾರಿ ಸೂಕ್ತ ಪರಿಹಾರ ಮೊತ್ತ ನಿಗದಿ ಪಡಿಸಲಿದ್ದಾರೆ. ಅಲ್ಲದೆ, ಸಂತ್ರಸ್ತ ರೈತರು ಆಸಕ್ತಿ ವ್ಯಕ್ತಪಡಿಸಿದರೆ 1 ಎಕರೆ ಭೂಮಿಯಲ್ಲಿ 10,771 ಚದರ ಅಡಿ ಅಭಿವೃದ್ಧಿಗೊಳಿಸಿದ ಭೂಮಿ ಪಡೆಯಲು ಅವಕಾಶ ನೀಡಲಾಗುತ್ತದೆ. ಆ ಜಾಗವನ್ನು ರೈತರು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂದು ವಿವರಿಸಿದರು.

ಕೆ.ಎಚ್‌. ಮುನಿಯಪ್ಪ ಮಾತನಾಡಿ, ರೈತರು ಸರ್ಕಾರದ ತೀರ್ಮಾನ ಗೌರವಿಸಿ ಪ್ರತಿಭಟನೆ ಕೈಬಿಡಬೇಕು. ರಾಜ್ಯದಲ್ಲಿ ಎಲ್ಲಿಯೂ ಜಮೀನನ್ನು ಸ್ವಾಧೀನದಿಂದ ಕೈಬಿಟ್ಟ ನಿದರ್ಶನವಿಲ್ಲ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲ್ ಅವರು ರೈತರ ಪರವಾದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ್‌, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಧಾ ಇತರರಿದ್ದರು.



Source link

Leave a Reply

Your email address will not be published. Required fields are marked *