Headlines

ಒಳ ಮೀಸಲಾತಿ ಜಾರಿಗೆ ಮಾದಿಗ ಮುಖಂಡರ ಆಗ್ರಹಸರ್ಕಾರದ ವಿಳಂಬ ಧೋರಣೆ ಖಂಡಿಸಿ ಆ.1ರಂದು ಪ್ರತಿಭಟನೆ…

ಒಳ ಮೀಸಲಾತಿ ಜಾರಿಗೆ ಮಾದಿಗ ಮುಖಂಡರ ಆಗ್ರಹಸರ್ಕಾರದ ವಿಳಂಬ ಧೋರಣೆ ಖಂಡಿಸಿ ಆ.1ರಂದು ಪ್ರತಿಭಟನೆ…

ತುಮಕೂರು: ತಕ್ಷಣವೇ ಆಯೋಗದ ವರದಿ ಪಡೆದು ಬರುವ ಆಗಸ್ಟ್ 15ರೊಳಗೆ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಜಿಲ್ಲೆಯ ಮಾದಿಗ ಸಮುದಾಯದ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಆಗಸ್ಟ್ 15ರಿಂದ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಾದಿಗ ಸಮುದಾಯದ ಮುಖಂಡರು ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವುದು ಪರಿಶಿಷ್ಟ ಜಾತಿಯವರಲ್ಲಿ ಆತಂಕ ಸೃಷ್ಟಿಯಾಗಿದೆ. ಸರ್ಕಾರ ಕೂಡಲೇ ನಾಗಮೋಹನ್ ದಾಸ್ ವರದಿ ಪಡೆದು ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಆಗಸ್ಟ್ 1ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುತ್ತದೆ. ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಂದು ಮಾದಿಗ ಸಮುದಾಯದ ಸಾವಿರಾರು ಜನ ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.


ಒಳಮೀಸಲಾತಿ ಜಾರಿಯ ಒಂದೊAದು ದಿನದ ವಿಳಂಬವೂ ಪರಿಶಿಷ್ಟ ಜಾತಿಯವರು ಆಯುಷು ಕಳೆದುಕೊಳ್ಳುವಂತಾಗಿದೆ. ನಿರುದ್ಯೋಗಿಗಳ ವಯೋಮಿತಿ ಮೀರಿ ಉದ್ಯೋಗಾವಕಾಶ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಮಂಡಳಿಯ ನೇಮಕಾತಿಗಳಿಗಾಗಿ ಸುಮಾರು ಎರಡು ಲಕ್ಷ ಜನ ಒಳಮೀಸಲಾತಿಗಾಗಿ ಕಾಯುವಂತಾಗಿದೆ. ಈ ಸಮಸ್ಯೆಗೆ ಒಳಮೀಸಲಾತಿಯೊಂದೇ ಪರಿಹಾರವಾಗಿದೆ ಎಂದು ವೈ.ಹೆಚ್.ಹುಚ್ಚಯ್ಯ ಹೇಳಿದರು.
ಅತಿ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸಲು, ಅಸಮಾನತೆಯನ್ನು ಸರಿಪಡಿಸಲು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ಆಯಾ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಿ ಸರ್ವೋಚ್ಛ ನ್ಯಾಯಾಲಯವುದು 1.8.2024ರಂದು ಆದೇಶ ನೀಡಿತ್ತು. ಇದಾಗಿ ವರ್ಷವಾದರೂ ನಮ್ಮ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡದೆ ಸರ್ಕಾರ ವಿಳಂಬ ಮಾಡುತ್ತಿದೆ. ಸರ್ಕಾರಕ್ಕೆ ಎಚ್ಚರಿಕೆ, ಗಡುವು ನೀಡಲು ಇದೇ ಆಗಸ್ಟ್ 1ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. 15ರಿಂದ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದರು.


ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್‌ಕುಮಾರ್ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಯ ಭರವಸೆ ನೀಡಿದ್ದ ಕಾಂಗ್ರೆಸ್, ಸರ್ಕಾರ ಬಂದು ಎರಡು ವರ್ಷವಾದರೂ ನುಡಿದಂತೆ ನಡೆಯಲಿಲ್ಲ. ಸವೋಚ್ಛ ನ್ಯಾಯಾಲಯದ ಆದೇಶದ ನಂತರ ನಾಗಮೋಹನದಾಸ್ ಆಯೋಗ ರಚನೆ ಮಾಡಿ, ಎರಡು ತಿಂಗಳಲ್ಲಿ ಆಯೋಗ ವರದಿ ನೀಡಲು ಸೂಚಿಸಿತ್ತು. ಇದಾಗಿ ಆರು ತಿಂಗಳಾದರೂ ಸರ್ಕಾರ ಆಯೋಗದ ವರದಿ ಪಡೆದು ಒಳಮೀಸಲಾತಿ ಜಾರಿ ಮಾಡುವ ಕಾಳಜಿ ತೋರಿಲ್ಲ ಎಂದು ಆಪಾದಿಸಿದರು.
ಒಳಮೀಸಲಾತಿ ಜಾರಿ ವಿಳಂಬದಿAದಾಗಿ ನಮ್ಮ ಸಮುದಾಯದಲ್ಲಿ ತೀವ್ರ ಅಸಮಾಧಾನ ಹಾಗೂ ಆತಂಕ ಉಂಟಾಗಿದೆ. ವಿಳಂಬ ನೀತಿಯಿಂದ ನಮ್ಮ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು, ಮಹಿಳೆಯರು, ಒಟ್ಟಾಗಿ ಇಡೀ ಸಮುದಾಯ ತಮಗೆ ಸಿಗಬೇಕಾದ ನ್ಯಾಯಯುತ ಹಕ್ಕುಗಳಿಂದ ವಂಚಿತವಾಗುತ್ತಿದ್ದಾರೆ ಎಂದ ಅವರು, ಆಗಸ್ಟ್ 15ರೊಳಗೆ ಸರ್ಕಾರ ಒಳಮೀಸಲಾತಿ ಜಾರಿ ಮಾಡಲೇಬೇಕು. ತಪ್ಪಿದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡ ಪಾವಗಡ ಶ್ರೀರಾಮ್ ಮಾತನಾಡಿ, ಪರಿಶಿಷ್ಟ ಜಾತಿಯ ಒಳಮೀಸಲಾತಿ ಬೇಡಿಕೆ 35 ವರ್ಷಗಳ ಹೋರಾಟ. ಸುಪ್ರೀಂ ಕೋರ್ಟ್ ಆದೇಶದ ನಂತರ ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಹರಿಯಾಣ ರಾಜ್ಯಗಳು ಒಳಮೀಸಲಾತಿ ಜಾರಿಗೆ ತಂದಿವೆ. ಕರ್ನಾಟಕದಲ್ಲಿ ಇಲ್ಲಿನ ಕಾಂಗ್ರೆಸ್ ಸರ್ಕಾರ ಜಾರಿ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದು ಟೀಕಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್, ಅಧಿಕಾರದ ಎರಡು ವರ್ಷ ಮುಗಿದರೂ ಅನಗತ್ಯ ವಿಳಂಬ ಮಾಡುತ್ತಿದೆ. ಸರ್ಕಾರದ ಧೋರಣೆ ಖಂಡಿಸಿ ಆಗಸ್ಟ್ 1ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡುತ್ತೆವೆ. ಆಗಸ್ಟ್ 15ರ ಮಧ್ಯ ರಾತ್ರಿ ಪಂಜಿನ ಮೆರವಣಿಗೆ ಮಾಡಿ, ಮಾರನೇ ದಿನದಿಂದ ರಾಜ್ಯದೆಲ್ಲೆಡೆ ಅಸಹಕಾರ ಚಳವಳಿ ಶುರುಮಾಡುತ್ತೇವೆ. ಪ್ರವಾಸಕ್ಕೆ ಬರುವ ಸರ್ಕಾರದ ಮಂತ್ರಿಗಳಿಗೆ ಘೇರಾವ್ ಮಾಡುತ್ತೇವೆ ಎಂದು ಹೇಳಿದರು.
ಮುಖಂಡ ಪಿ.ಎನ್.ರಾಮಯ್ಯ, ಒಳಮೀಸಲಾತಿಗಾಗಿ 35 ವರ್ಷಗಳಿಂದ ಮಾದಿಗ ಸಮುದಾಯದವರು ವಿವಿಧ ಸ್ವರೂಪದ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಸರ್ಕಾರಗಳು ಹೋರಾಟದ ದಾರಿ ತಪ್ಪಿಸುವ ಕುತಂತ್ರವನ್ನೇ ಅನುಸರಿಸಿಕೊಂಡುಬರುತ್ತಿವೆ ಎಂದು ಆರೋಪಿಸಿದರು.
ಹೊಳಕಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೆಚ್.ಎ.ಆಂಜನಪ್ಪ, ಮುಖಂಡರಾದ ಹೊಸಕೋಟೆ ನಟರಾಜು, ಆಂಜನಮೂರ್ತಿ, ದಾಡಿ ವೆಂಕಟೇಶ್, ರಮೇಶ್, ಬಿ.ಜಿ.ಸಾಗರ್, ಲಕ್ಕೇನಹಳ್ಳಿ ದಾಸಪ್ಪ, ಸೋರೆಕುಂಟೆ ಯೋಗೀಶ್, ಲಕ್ಷಿö್ಮÃಪತಿ, ರಘು ದಾಸಲುಕುಂಟೆ, ಲಕ್ಷಿö್ಮÃನರಸಪ್ಪ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *