ಕರ್ನಾಟಕ ಲೇಖಕಿಯರ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಗರದಲ್ಲಿ ಸೂಕ್ತ ಜಾಗ ನೀಡಿ, ಇಲ್ಲವಾದರೆ, ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡದಲ್ಲಿ ಅರ್ಧ ಭಾಗ ನೀಡುವಂತೆ ಕನ್ನಡ ವಿಶ್ವವಿದ್ಯಾಲಯದ ನಿಕಟ ಪೂರ್ವ ಕುಲಪತಿ ಡಾ.ಮಲ್ಲಿಕಾ ಘಂಟಿ ಆಗ್ರಹಿಸಿದ್ದಾರೆ.
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಗರದಲ್ಲಿ ಸೂಕ್ತ ಜಾಗ ನೀಡಿ, ಇಲ್ಲವಾದರೆ, ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡದಲ್ಲಿ ಅರ್ಧ ಭಾಗ ನೀಡುವಂತೆ ಕನ್ನಡ ವಿಶ್ವವಿದ್ಯಾಲಯದ ನಿಕಟ ಪೂರ್ವ ಕುಲಪತಿ ಡಾ.ಮಲ್ಲಿಕಾ ಘಂಟಿ ಆಗ್ರಹಿಸಿದ್ದಾರೆ.
ಭಾನುವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಮಾತೃಶ್ರೀ ಶಂಕರಮ್ಮ ಪ. ಬಳಿಗಾರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಲೇಖಕಿಯರ ಸಂಘ ಸ್ಥಾಪನೆಯಾಗಿ 47 ವರ್ಷ ಕಳೆದರೂ ಬಾಡಿಗೆ ಕಟ್ಟಡದಲ್ಲಿ ಇರಬೇಕಾದ ಸ್ಥಿತಿ ಸಂಘಕ್ಕೆ ಇದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ದೊಡ್ಡ ಜಾಗ ನೀಡಿ, ಪ್ರತಿ ವರ್ಷ ಅನುದಾನ ನೀಡಲಾಗುತ್ತಿದೆ. ಲೇಖಕಿಯರ ಸಂಘಕ್ಕೆ ಸಣ್ಣ ಜಾಗ ನೀಡುವುದಕ್ಕೆ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರದಿಂದ ಸಾಧ್ಯವಾಗಿಲ್ಲ. ಸರ್ಕಾರಕ್ಕೆ ಜಾಗ ನೀಡುವ ಮನಸ್ಸು ಇಲ್ಲವೋ ಅಥವಾ ಸಂಘಕ್ಕೆ ಜಾಗ ಪಡೆಯುವ ಶಕ್ತಿ ಇಲ್ಲವೋ ಅರ್ಥವಾಗುತ್ತಿಲ್ಲ ಎಂದರು.
ಸರ್ಕಾರ ಈಗಲಾದರೂ ಲೇಖಕಿಯರ ಸಂಘಕ್ಕೆ ಜಾಗ ನೀಡಬೇಕು. ವರ್ಷಕ್ಕೆ ನಿರ್ಧಿಷ್ಟವಾದ ಅನುದಾನ ಮಂಜೂರು ಮಾಡಬೇಕು. ಹಾಗಾಗದಿದ್ದರೆ, ಅಷ್ಟು ದೊಡ್ಡ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದಲ್ಲಿ ಅರ್ಧ ಭಾಗವನ್ನು ಲೇಖಕಿಯರ ಸಂಘಕ್ಕೆ ನೀಡಬೇಕು. ಇದರಿಂದ ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬರುವ ಲೇಖಕಿಯರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಮತ್ತು ಕನ್ನಡಕ್ಕೆ ವಿಶಿಷ್ಟವಾದ ಶಕ್ತಿ ಇದೆ. ಶಕ್ತಿಯನ್ನು ಹೊರಗೆ ಹಾಕಿ. ಆಗ ಎಲ್ಲ ಸರ್ಕಾರವೂ ಎಚ್ಚರವಾಗಲಿದೆ. ಲೇಖಕಿರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಯನ್ನು ಅಡೆತಡೆ ಇಲ್ಲದೇ ನಡೆಸಿಕೊಂಡು ಹೋಗುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷೆ ಡಾ.ಎಚ್.ಎಲ್,ಪುಷ್ಪ ಮಾತನಾಡಿ, ರಾಜ್ಯ ಸರ್ಕಾರ ಸಂಘ ಸಂಸ್ಥೆಗಳಿಗೆ ನೀಡುವ ಅನುದಾನ ನಿಲ್ಲಿಸಿದೆ. ಅನುದಾನವೇ ಇಲ್ಲದ ಸಂದರ್ಭದಲ್ಲಿ ದತ್ತಿ ನಿಧಿಗಳ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ. ಜತೆಗೆ, ಸಂಘ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅನಿವಾರ್ಯವಾಗಿ ಇತಿಮಿತಿಯಲ್ಲಿ ನಡೆಸಬೇಕಾಗಲಿದೆ ಎಂದರು.
ಲೇಖಕಿಯರ ಸಂಘದಲ್ಲಿ ಮೊದಲ ಬಾರಿಗೆ ತಾಯಿ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನುಬಳಿಗಾರ್ ಹಾಗೂ ಸಹೋದರರು 5 ಲಕ್ಷ ರು. ಮೊತ್ತದ ದತ್ತಿ ಪ್ರಶಸ್ತಿ ಸ್ಥಾಪಿಸಿದ್ದಾರೆ ಎಂದು ತಿಳಿಸಿದರು.
ಡಾ.ಶಿವಗಂಗಾ ರುಮ್ಮ (ಗದ್ಯವಿಭಾಗ), ನಂದಿನಿ ಜಯರಾಮ್ ( ಸಂಕೀರ್ಣ) ಅವರುಗಳಿಗೆ ತಲಾ 10 ಸಾವಿರ ರು. ನಗದು ಪುರಸ್ಕರದೊಂದಿಗೆ ಮಾತೃಶ್ರೀ ಶಂಕರಮ್ಮ ಪ. ಬಳಿಗಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಗಂಗಮ್ಮ (ಅರುಂಧತಿ) ಬಳಿಗಾರ್, ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಸೇರಿದಂತೆ ಮೊದಲಾದವರಿದ್ದರು.