ಬೆಂಗಳೂರು (ಜೂ.23): ಕೊಡಗು, ಕರಾವಳಿ, ಮಲೆನಾಡು ಸೇರಿ ರಾಜ್ಯದ ಕೆಲವೆಡೆ ಭಾನುವಾರವೂ ಮಳೆಯಾಯಿತು. ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯ ವೇಳೆ ಸುರಿದ ಮಳೆಯಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಶೃಂಗೇರಿ ಸುತ್ತಮುತ್ತ ಉತ್ತಮ ಮಳೆಯಾದ ಕಾರಣ ತುಂಗಾನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ತುಂಗಾ ನದಿಯ ತೀರದಲ್ಲಿರುವ ಕಪ್ಪೆ ಶಂಕರ ದೇಗುಲ ಮತ್ತೆ ಮುಳುಗಡೆಯಾಗಿದೆ. ಮಳೆ ಸುರಿಯುತ್ತಿರುವುದರಿಂದ ನೆಮ್ಮಾರು, ಸಾಲ್ಮರ, ತನಿಕೋಡು ಸೇರಿದಂತೆ ವಿವಿಧೆಡೆ ಗುಡ್ಡ ಕುಸಿತ, ಭೂಕುಸಿತ ಮುಂದುವರಿದಿದೆ.

ಕೊಡಗಿನ ಕೆಲವೆಡೆ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಯಾದಗಿರಿ ಜಿಲ್ಲೆ ಬಸವಸಾಗರ ಜಲಾಶಯದ 14 ಕ್ರಸ್ಟ್‌ಗೇಟ್‌ಗಳ ಮೂಲಕ 42,820 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇನ್ನು ಕರಾವಳಿಯಲ್ಲಿ ಜೂ.23ರಿಂದ ಜೂ.29ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ದಾವಣಗೆರೆಯಲ್ಲಿ ಮಧ್ಯಾಹ್ನದ ಬಳಿಕ ಉತ್ತಮ ಮಳೆ ಆಗಿದೆ.

ನಿಲ್ಲದ ಗುಡ್ಡಕುಸಿತ: ಶೃಂಗೇರಿ ತಾಲೂಕಿನಾದ್ಯಂತ ಬುಧವಾರ ಮಳೆಯ ಅಬ್ಬರ ಕಡಿಮೆಯಾಗಿತ್ತು. ಕೆಲ ಹೊತ್ತು ಬಿಸಿಲ ವಾತಾವರಣ, ಸಾದಾರಣ ಮಳೆ ಇತ್ತು. ಆದರೆ ಆಗಾಗ ಸುರಿಯುತ್ತಿರವ ಮಳೆಯಿಂದ ಗುಡ್ಡ ಕುಸಿತ, ಭೂಕುಸಿತ ಮುಂದುವರಿದಿದೆ. ಕೆಲದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಶೃಂಗೇರಿ ಮಂಗಳೂರು ಸಂಪರ್ಕ ರಾ.ಹೆ ನೆಮ್ಮಾರು ಸಾಲ್ಮರ ಬಳಿ ಗುಡ್ಡ ಕುಸಿದಿದ್ದು ರಸ್ತೆ ಸಂಚಾರ ಅಪಾಯದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರಾತ್ರಿ ಸಂಚಾರ ಬಂದ್ ಮಾಡಿ ಜಿಲ್ಲಾಡಳಿತ ಜೂನ್ 17 ರಿಂದ 20 ರವರೆಗೆ ದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 7 ರಿಂದ ಬುಧವಾರ ಬೆಳಿಗ್ಗೆ 8 ರವರೆಗೆ ಶೃಂಗೇರಿ ಮಂಗಳೂರು ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಬಸ್ ಸೇರಿದಂತೆ ಖಾಸಗಿ ವಾಹನ ಸಂಚಾರ ಇರಲಿಲ್ಲ.

ಬೆಳಿಗ್ಗೆ ಮಂಗಳೂರು ಕಡೆ ಹೋಗುವ ಬಸ್ ಸಂಚಾರ, ಸಂಜೆ ಮಂಗಳೂರು ಕಡೆಯಿಂದ ಬರುವ ಬಸ್ ಗಳು ಸಂಚರಿಸದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ನೆಮ್ಮಾರಿನಲ್ಲಿ ಖಾಸಗಿ ವಾಹನ, ಲಾರಿಗಳು ಮಂಗಳವಾರ ಸಂಜೆಯಿಂದ ಬುಧವಾರ ಬೆಳಗಿನವರೆಗೂ ಸಾಲುಗಟ್ಟಿ ನಿಂತಿತ್ತು. ಗುಡ್ಡ ಸಂಪೂರ್ಣವಾಗಿ ಹಂತಹಂತವಾಗಿ ಕುಸಿಯುತ್ತಿದ್ದು, ಬೃಹತ್ ಮರಗಳು ಗುಡ್ಡದ ಮೇಲೆ ಇದ್ದು, ರಸ್ತೆಯ ಮೇಲೆ ಬೀಳುವ ಹಂತದಲ್ಲಿದೆ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಜೆಸಿಬಿಯಿಂದ ಗುಡ್ಡ ಕೊರೆಯಲಾಗಿತ್ತು.

ಜನವಸತಿ ಪ್ರದೇಶವಾದ ಸಾಲ್ಮರ ಬಳಿ ಗುಡ್ಡದ ಮೇಲೆ ಕೆಲ ಮನೆಗಳಿದ್ದು ಗುಡ್ಡ ಕುಸಿಯುತ್ತಿರುವುದರಿಂದ ಮನೆಗಳು ಅಪಾಯದ ಸ್ಥಿತಿಯಲ್ಲಿದೆ. ಸಮೀಪದಲ್ಲಿ ತುಂಗಾ ನದಿಯಿದ್ದು, ಅಲ್ಲಿಯೂ ತಡೆಬೇಲಿ, ತಡೆಗೋಡೆ ಇಲ್ಲದಿರುವುದರಿಂದ ಈ ಪ್ರದೇಶದಲ್ಲಿ ಸಂಚಾರ ಇನ್ನಷ್ಟು ಅಪಾಯಕಾರಿಯಾಗಿದೆ. ಸಾಧಾರಣ ಮಳೆ ಮುಂದುವರಿದಿದೆ.

Source link
ಕೊಡಗು, ಮಲೆನಾಡಿನಲ್ಲಿ ಮಳೆ: 1 ವಾರ ಕರಾವಳಿಗೆ ಯೆಲ್ಲೋ ಅಲರ್ಟ್