ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ಕೋರಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ. ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಮತ್ತು ಸರ್ಕಾರದ ನಡುವಿನ ವಾದ-ಪ್ರತಿವಾದಗಳು ಮುಂದುವರೆದಿವೆ.
ಬೆಂಗಳೂರು (ಜೂ.24): ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ಕೋರಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ಮಾಡಲಾಯಿತು. ಆದರೆ, ಮೇಲ್ಮನವಿ ಅರ್ಜಿಗಳ ಆಕ್ಷೇಪಣೆಗೆ ಅವಕಾಶ ಮಾಡಿಕೊಡುವ ಹಿನ್ನೆಲೆಯಲ್ಲಿ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಲಾಗಿದೆ.
ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಗಳ ಪರ ಹಿರಿಯವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, ಬೈಕ್ ಕೂಡಾ ಮೊಟಾರ್ ಕ್ಯಾಬ್ ಆಗಿರುವುದರಿಂದ ಅನುಮತಿ ನೀಡಬೇಕು. ಮೋಟಾರ್ ಕ್ಯಾಬ್ ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶವಿದೆ. ರಾಜ್ಯಸರ್ಕಾರ ಬೈಕ್ ಟ್ಯಾಕ್ಸಿಗಳನ್ನು ನಿರ್ಬಂಧಿಸುವಂತಿಲ್ಲ. ಬೈಕ್ ಅನ್ನು ಸಂಚಾರಿ ವಾಹನವಾಗಿ ನೋಂದಾಯಿಸಬಹುದು. ಲಕ್ಷಾಂತರ ಜನರಿಗೆ ಬೈಕ್ ಟ್ಯಾಕ್ಸಿ ಉದ್ಯೋಗ ಒದಗಿಸಿದೆ. ಲಕ್ಷಾಂತರ ಜನರು ಬೈಕ್ ಟ್ಯಾಕ್ಸಿ ಸೇವೆ ಬಯಸುತ್ತಿದ್ದಾರೆ. ಗ್ರಹಾಂ ಬೆಲ್ ದೂರವಾಣಿ ಕಂಡುಹಿಡಿದಾಗ ಪ್ರಯೋಜನವಿಲ್ಲದ್ದು ಎಂದಿದ್ದರು. ಇದನ್ನೂ ರಾಜ್ಯ ಸರ್ಕಾರ ಹಾಗೆಯೇ ಪರಿಗಣಿಸುತ್ತಿದೆ. ಜನರ ಸಂಚಾರವನ್ನು ಸರ್ಕಾರ ತಡೆಹಿಡಿಯಲಾಗದು. ಅಗ್ಗವಾದ, ಸುಲಭವಾದ ವ್ಯವಸ್ಥೆಯನ್ನು ಜನ ಬಯಸುತ್ತಾರೆ. ಈಗಾಗಲೇ 22 ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ಇದೆ ಎಂದು ವಾದ ಮಂಡಿಸಿದರು.
ಬೈಕ್ ಟ್ಯಾಕ್ಸಿ ಪರ ವಕೀಲರ ವಾದಕ್ಕೆ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿ, 11 ರಾಜ್ಯಗಳಲ್ಲಿ ಮಾತ್ರ ಸೀಮಿತ ಸಂಖ್ಯೆ ಬೈಕ್‌ಗಳಿಗೆ ಅವಕಾಶ ನೀಡಲಾಗಿದೆ. ಬೈಕ್ ಟ್ಯಾಕ್ಸಿಯಾಗಿ ಸಂಚರಿಸಲು ಅನುಮತಿ ನೀಡಿಲ್ಲವೆಂದು ವಾದ ಮಂಡಿಸಿದರು.
ಬೈಕ್ ಟ್ಯಾಕ್ಸಿ ನಿಷೇಧ ಪ್ರಶ್ನಿಸಿ ಮೇಲ್ಮನವಿ ವಿಚಾರದ ಬಗ್ಗೆ ಗ್ರಾಹಕರ ಪರ ಅರ್ಜಿ ಸಲ್ಲಿಸಿರುವ ವಕೀಲೆ ವೈಷಾಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹೈಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿ ವಿಚಾರಣೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.
ಒಬ್ಬ ಗ್ರಾಹಕ ತಾನು ಯಾವ ವಾಹನದಲ್ಲಿ ಹೋಗಬೇಕು ಅನ್ನೋದು ಆತನ ಆಯ್ಕೆ. ಅದನ್ನ ಸರ್ಕಾರ ಹೇಗೆ ನಿರ್ಧಾರ ಮಾಡುತ್ತದೆ. ಬೈಕ್ ಟ್ಯಾಕ್ಸಿ ಇಂದ ಹಲವರಿಗೆ ಸಹಾಯ ಆಗ್ತಿದೆ. ಕಡಿಮೆ ಹಣ, ಸಮಯ ಉಳಿಯುತ್ತಿದೆ. ದೂರದ ಪ್ರಯಾಣಕ್ಕೆ ಆಟೋ, ಕಾರು ಆದರೆ 600-700 ತಗೋತಾರೆ. ಆದರೆ ಬೈಕ್ ಟ್ಯಾಕ್ಸಿಯಲ್ಲಿ ಕಡಿಮೆ ದರದಲ್ಲೇ ಪ್ರಯಾಣ ಮಾಡಬಹುದು. ಬೈಕ್ ಟ್ಯಾಕ್ಸಿಯಿಂದ ಸಾರ್ವಜನಿಕರಿಗೆ ಸಾಕಷ್ಟು ಸಹಾಯ ಆಗ್ತಿದೆ. ಹೀಗಾಗಿ ಅವಕಾಶ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ನಾಳೆ ಹೈಕೋರ್ಟ್ ವಿಚಾರಣೆ ಮುಂದೂಡಿದೆ. ನಾಳೆ ಏನಾಗುತ್ತೆ ಅನ್ನೋದನ್ನ ನೋಡಬೇಕು ಎಂದು ವಕೀಲೆ ವೈಶಾಲಿ ಹೇಳಿದರು.