ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 471 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಬೇಕಿತ್ತು.
ಆದರೆ ಟೀಮ್ ಇಂಡಿಯಾ ಫೀಲ್ಡರ್ಗಳು ಮಾಡಿದ ತಪ್ಪುಗಳೇ ಭಾರತ ತಂಡದ ಪಾಲಿಗೆ ದುಬಾರಿಯಾಯಿತು. ಏಕೆಂದರೆ ಈ ಮ್ಯಾಚ್ನಲ್ಲಿ ಭಾರತೀಯ ಫೀಲ್ಡರ್ಗಳು ಚೆಲ್ಲಿರುವುದು ಬರೋಬ್ಬರಿ 5 ಕ್ಯಾಚ್ಗಳನ್ನು ಎಂದರೆ ನಂಬಲೇಬೇಕು. ಇದು ಕಳೆದ ಐದು ವರ್ಷಗಳಲ್ಲಿ ಟೀಮ್ ಇಂಡಿಯಾದ ಇನಿಂಗ್ಸ್ವೊಂದರಲ್ಲಿ ಕಂಡು ಬಂದ ಅತ್ಯಧಿಕ ಕ್ಯಾಚ್ ಡ್ರಾಪ್.
ಈ ಐದು ಕ್ಯಾಚ್ಗಳಲ್ಲಿ ಮೂರು ಕ್ಯಾಚ್ಗಳನ್ನು ಕೈ ಬಿಟ್ಟಿರುವುದು ಯುವ ಆಟಗಾರ ಯಶಸ್ವಿ ಜೈಸ್ವಾಲ್. ಮೊದಲ ದಿನದಾಟದ ಆರಂಭದಲ್ಲೇ ಬೆನ್ ಡಕೆಟ್ ಕ್ಯಾಚ್ ಕೈ ಬಿಟ್ಟಿದ್ದ ಜೈಸ್ವಾಲ್, ಆ ಬಳಿಕ ಒಲೀ ಪೋಪ್ ನೀಡಿದ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು. ಇದಾದ ಬಳಿಕ ಜಸ್ಪ್ರೀತ್ ಬುಮ್ರಾ ಓವರ್ನಲ್ಲಿ ಹ್ಯಾರಿ ಬ್ರೂಕ್ ನೀಡಿದ ಸುಲಭ ಕ್ಯಾಚ್ ಅನ್ನು ಸ್ಲಿಪ್ನಲ್ಲಿದ್ದ ಯಶಸ್ವಿ ಜೈಸ್ವಾಲ್ ಕೈ ಬಿಟ್ಟರು.
ಹೀಗೆ ಒಂದೇ ಇನಿಂಗ್ಸ್ನಲ್ಲಿ ಮೂರು ಕ್ಯಾಚ್ಗಳನ್ನು ಕೈಚೆಲ್ಲುವ ಮೂಲಕ ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾ ಪರ ಟೆಸ್ಟ್ ಇನಿಂಗ್ಸ್ವೊಂದರಲ್ಲಿ ಅತ್ಯಧಿಕ ಕ್ಯಾಚ್ ಬಿಟ್ಟ ಫೀಲ್ಡರ್ ಎಂಬ ಕಳಪೆ ದಾಖಲೆ ಬರೆದಿದ್ದಾರೆ. ಈ ಮೂಲಕ 23 ವರ್ಷದ ಯಶಸ್ವಿ ಭಾರತದ ಪರ ಟೆಸ್ಟ್ ಇನಿಂಗ್ಸ್ನಲ್ಲಿ ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾ ಆಟಗಾರರು ನೀಡಿದ ಜೀವದಾನದ ಸಂಪೂರ್ಣ ಲಾಭ ಪಡೆದ ಇಂಗ್ಲೆಂಡ್ ದಾಂಡಿಗರಾದ ಬೆನ್ ಡಕೆಟ್ 62 ರನ್ ಗಳಿಸಿದರೆ, ಒಲೀ ಪೋಪ್ 106 ರನ್ಗಳ ಶತಕ ಸಿಡಿಸಿದರು. ಇನ್ನು ಹ್ಯಾರಿ ಬ್ರೂಕ್ 99 ರನ್ಗಳ ಇನಿಂಗ್ಸ್ ಆಡಿದರು. ಈ ಮೂಲಕ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 465 ರನ್ಗಳಿಸುವಲ್ಲಿ ಯಶಸ್ವಿಯಾಗಿದೆ.