ಬೆಂಗಳೂರು, ಜೂನ್ 29: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಪ್ರಬಲಗೊಂಡಂತೆ ಜಗತ್ತಿನಲ್ಲಿ ಮನುಷ್ಯರಿಗೆ ಕೆಲಸ ಇಲ್ಲದಂತಾಗುತ್ತದೆ ಎನ್ನುವ ಭಯ ಆವರಿಸತೊಡಗಿದೆ. ಅಂಥ ಸ್ಥಿತಿ ಬರಲು ಸಾಕಷ್ಟು ವರ್ಷಗಳಾಗಬಹುದು. ಆದರೆ, ಸದ್ಯೋಭವಿಷ್ಯದಲ್ಲಿ ವಿಶ್ವದ ಉದ್ಯೋಗ ಮಾರುಕಟ್ಟೆ ಹೇಗಿರಲಿದೆ? ಯಾವ್ಯಾವ ಉದ್ಯೋಗಗಳಿಗೆ ಕುತ್ತು ಬರುತ್ತದೆ, ಯಾವ್ಯಾವ ಉದ್ಯೋಗಗಳಿಗೆ ಬೇಡಿಕೆ ಬರಲಿದೆ ಎನ್ನುವ ಪ್ರಶ್ನೆ ಇದೆ. ಝಿರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಅವರ ಪ್ರಕಾರ ಮುಂದಿನ 10 ವರ್ಷದಲ್ಲಿ ಕಾಲೇಜು ಡಿಗ್ರಿಗಳು ನಿರರ್ಥಕ ಎನಿಸುತ್ತವೆ. ಜೀವನಪರ್ಯಂತ ಕಲಿಯುತ್ತಾ ಇರುವುದು ಅನಿವಾರ್ಯ ಆಗುತ್ತೆ ಎಂದಿದ್ದಾರೆ.
2030ರೊಳಗೆ 9.2 ಕೋಟಿ ಉದ್ಯೋಗಗಳು ಇಲ್ಲವಾಗುತ್ತವೆ. 17 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಬಹುದು ಎಂದು ವರ್ಲ್ಡ್ ಎಕನಾಮಿಕ್ ಫೋರಂ ಪ್ರಕಟಿಸಿದ ಭವಿಷ್ಯದ ಉದ್ಯೋಗಗಳ ವರದಿ 2025ಯಲ್ಲಿ (Future of Jobs Report 2025) ಬಂದ ಕೆಲ ಅಂಶಗಳನ್ನು ಉಲ್ಲೇಖಿಸಿ ನಿಖಿಲ್ ಕಾಮತ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ವಿಶ್ಲೇಷಣೆ ಮಾಡಿದ್ದಾರೆ.
Such an interesting question: “What jobs will be relevant in 10 years?”
Personally, I think the days of 4-year college courses are over, lifelong learning is the new norm, for everyone… pic.twitter.com/sk3m7vfjR4— Nikhil Kamath (@nikhilkamathcio) June 26, 2025
17 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆಯಾದರೂ ಯಾರು ನಿರಂತರವಾಗಿ ಕೌಶಲ್ಯ ವೃದ್ಧಿಸಿಕೊಳ್ಳುತ್ತಿರುತ್ತಾರೋ ಅವರಿಗೆ ಅವುಗಳ ಅವಕಾಶ ಸಿಗುತ್ತದೆ ಎಂದು ಹೇಳಿದ ನಿಖಿಲ್ ಕಾಮತ್, ಕೃಷಿ, ಡಿಜಿಟಲ್ ಎಕನಾಮಿ, ಡೆಲಿವರಿ, ಎಐ, ಡಾಟಾ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಉದ್ಯೋಗಗಳು ಹೆಚ್ಚಲಿವೆ ಎಂದಿದ್ದಾರೆ.
ಇದನ್ನೂ ಓದಿ: ಕಡಿಮೆ ಹಣದುಬ್ಬರ, ಹೆಚ್ಚು ಉದ್ಯೋಗ, ಉತ್ತಮ ರಫ್ತು: ಉತ್ತಮ ಮುನ್ನಡೆಯಲ್ಲಿ ಭಾರತದ ಆರ್ಥಿಕತೆ
ಅಂದರೆ, ಕೃಷಿ ಕಾರ್ಮಿಕರು ಅಥವಾ ರೈತರು, ಡೆಲಿವರಿ ಡ್ರೈವರ್ಗಳು, ಕಟ್ಟಡ ಕಾರ್ಮಿಕರು, ಸೇಲ್ಸ್ ಮಾಡುವವರು, ಆಹಾರ ಸಂಸ್ಕರಣೆ ಕಾರ್ಮಿಕರಿಗೆ ಬೇಡಿಕೆ ಇರುತ್ತದೆ. ನರ್ಸ್, ಸಾಮಾಜಿಕ ಕಾರ್ಮಿಕರು, ಪರ್ಸನಲ್ ಕೇರ್ ಸಹಾಯಕರು, ಫಿನ್ಟೆಕ್ ಎಂಜಿನಿಯರ್ಸ್, ಮೆಷಿನ್ ಲರ್ನಿಂಗ್ ಪರಿಣಿತರು, ಸಾಫ್ಟ್ವೇರ್ ಡೆವಲಪ್ಮರ್ಗಳಿಗೆ ಉದ್ಯೋಗಾವಕಾಶ ಬಹಳ ಹೆಚ್ಚಲಿದೆ ಎಂದು ಡಬ್ಲ್ಯುಇಎಫ್ನ ಈ ವರದಿಯಲ್ಲಿ ಹೇಳಲಾಗಿದೆ.
ಬೇಡಿಕೆ ಕಡಿಮೆ ಆಗುವ ಉದ್ಯೋಗಗಳು…
ಆಟೊಮೇಶನ್ ಮತ್ತು ಡಿಜಿಟೈಸೇಶನ್ ಬಹಳ ವೇಗವಾಗಿ ಹೆಚ್ಚುತ್ತಿರುವ ಕಾರಣಕ್ಕೆ ಕ್ಲರ್ಕ್, ಸೆಕ್ರೆಟರಿ, ಕ್ಯಾಷಿಯರ್ಸ್, ಬ್ಯಾಂಕ್ ಟೆಲ್ಲರ್ಸ್, ಡಾಟಾ ಎಂಟ್ರಿ, ಆಡಳಿತ ಸಹಾಯಕರು ಇತ್ಯಾದಿ ಕೆಲಸಗಳು ಕಡಿಮೆಗೊಳ್ಳಲಿವೆ ಎಂದು ವರದಿಯನ್ನು ಉಲ್ಲೇಖಿಸಿ ನಿಖಿಲ್ ಕಾಮತ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅತ್ಯಂತ ವೇಗವಾಗಿ ವೃದ್ಧಿಯಾಗುತ್ತಿರುವ ಭಾರತದ ಬ್ರ್ಯಾಂಡ್ ಅದಾನಿ: ವಾರ್ಷಿಕ ಶೇ 82ರ ಬೆಳವಣಿಗೆ!
ಇನ್ಫೋಸಿಸ್ ನಾರಾಯಣಮೂರ್ತಿ ಹೇಳುವುದಿದು…
ಎಐನಿಂದ ಮನುಷ್ಯನಿಗೆ ಉದ್ಯೋಗವೇ ಇರುವುದಿಲ್ಲ ಎನ್ನುವ ವಾದವನ್ನು ಎನ್ ಆರ್ ನಾರಾಯಣಮೂರ್ತಿ ತಳ್ಳಿಹಾಕುತ್ತಾರೆ. ಎಐನಿಂದ ಹಲವು ಉದ್ಯೋಗಗಳು ನಶಿಸುತ್ತವಾದರೂ ಅನೇಕ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಹೊಸ ಮಾದರಿಯ ಕೆಲಸಗಳು ನಿರ್ಮಾಣ ಆಗುತ್ತವೆ. ಹಿಂದೆ ಕಂಪ್ಯೂಟರ್ ಬಂದಾಗ ಎಲ್ಲರಿಗೂ ಕೆಲಸ ಹೋಗುತ್ತೆ ಎನ್ನುತ್ತಿದ್ದರು. ಆದರೆ, ಉದ್ಯೋಗ ಹೆಚ್ಚಾಯಿತು. ಎಐ ವಿಚಾರದಲ್ಲೂ ಹೀಗೇ ಆಗುತ್ತೆ ಎಂದು ನಾರಾಯಣಮೂರ್ತಿ ಇತ್ತೀಚೆಗೆ ಹೇಳಿದ್ದರು.
ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಕೂಡ ಇದೇ ಅಭಿಪ್ರಾಯ ಅನುಮೋದಿಸಿದ್ದಾರೆ. ಎಐ ಎನ್ನುವುದು ಮನುಷ್ಯರ ಕೆಲಸಗಳನ್ನು ಬಲಪಡಿಸುತ್ತದೆ ಎಂಬುದು ಅವರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ