ಡಿಸೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಬಗ್ಗೆ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಗೋಕಾಕ ನಗರದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿದರು.
ಬೆಳಗಾವಿ (ಜೂ.30): ಡಿಸೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಬಗ್ಗೆ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಗೋಕಾಕ ನಗರದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿದರು. ದೆಹಲಿಯಲ್ಲಿ ವರಿಷ್ಠರು ಇದ್ದಾರೆ ಎಲ್ಲಾ ನೋಡ್ತಾರೆ. ಕ್ರಾಂತಿ ಮಾಡೋದು ಬಿಡುವುದು ವರಿಷ್ಠರ ಕೈಯಲ್ಲಿ ಇದೆ. ನಾವು ಅದರಲ್ಲಿ ಒಂದು ಪಾರ್ಟ್ ಅಷ್ಟೇ ಎಂದರು. ರಾಜಣ್ಣ ಬಹಳಷ್ಟು ಸಲ ಈ ರೀತಿ ಹೇಳಿಕೆ ನೀಡಿದ್ದಾರೆ. ಕಾದು ನೋಡೋಣ ಅಷ್ಟೇ, ಈಗ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂದರು. ತಮಗೆ ಜವಾಬ್ದಾರಿ ಸಿಗುತ್ತೆ ಎನ್ನುವ ಚರ್ಚೆ ವಿಚಾರಕ್ಕೆ, ಅದೇಲ್ಲ ವರಿಷ್ಠರಿಗೆ ಬಿಟ್ಟಿದ್ದು. ಕಾಯಬೇಕು ಅಷ್ಟೇ ನಾವು. ಕೆಪಿಸಿಸಿ ಹುದ್ದೆ ಸಿಗುವ ಬಗ್ಗೆ ಬಹಳಷ್ಟು ಟ್ರೆಂಡ್ ಆಗುತ್ತಿದೆ ಎಂದು ಸಚಿವರು ತಿಳಿಸಿದರು.
ಭಾರಿ ಬದಲಾವಣೆ ಇಲ್ಲ: ಮಾಧ್ಯಮಗಳು ಹೇಳಿದಂತೆ ವರ್ಷಾಂತ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಭಾರೀ ಬದಲಾವಣೆಯೇನೂ ಆಗುವುದಿಲ್ಲ. ಆದರೆ, ಸಚಿವರ ಬದಲಾವಣೆ ಆಗಲಿದೆ ಎಂದು ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೀವು (ಮಾಧ್ಯಮ) ಹೇಳಿದಂತೆ ಭಾರಿ ಬದಲಾವಣೆ ಆಗುವುದಿಲ್ಲ, ಸಚಿವರ ಬದಲಾವಣೆಯಾಗಬಹುದು. ವರಿಷ್ಠರು ಎಲ್ಲವನ್ನೂ ಗಮನಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಶಾಸಕರದ್ದು ಕೇವಲ ವರ್ಗಾವಣೆ, ಅನುದಾನ ಸಮಸ್ಯೆ ಮಾತ್ರ ಇರುವುದಿಲ್ಲ, ಪ್ರತಿ ಕ್ಷೇತ್ರದಲ್ಲೂ ಬೇರೆ ಬೇರೆ ಸಮಸ್ಯೆ ಇರುತ್ತದೆ. ಪ್ರತಿ ಸಮಸ್ಯೆಯನ್ನು ಬೇರೆ ಬೇರೆ ರೀತಿ ನಿಭಾಯಿಸಬೇಕಾಗುತ್ತದೆ ಎಂದರು.
ಬಿಜೆಪಿ ಅಧ್ಯಕ್ಷರ ಬದಲಾವಣೆ ನೋಡಿಕೊಂಡು ರಾಜ್ಯ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಫಾರ್ಮುಲಾ ಬೇರೆ, ನಮ್ಮ ಫಾರ್ಮುಲಾ ಬೇರೆ. ಅವರ ತತ್ವ, ಸಿದ್ಧಾಂತ ಬೇರೆ, ಬಿಜೆಪಿಗೂ ನಮಗೂ ಬಹಳ ವ್ಯತ್ಯಾಸವಿದೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡೆಸಿಯೇ ಇಲ್ಲ. ಪ್ರಯತ್ನ ನಡೆಸಿದ್ದರೆ ಮುಂದುವರೆಸಬಹುದು. ನಾನು ಎಲ್ಲಿದ್ದೆನೋ, ಅಲ್ಲೇ ಇದ್ದೇನೆ. ನಮ್ಮನ್ನು ಪುಶ್ ಮಾಡುವವರು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಭೇಟಿಯಲ್ಲಿ ವಿಶೇಷವೇನೂ ಇಲ್ಲ. ಮುಖ್ಯಮಂತ್ರಿಗಳ ಜೊತೆ ದೆಹಲಿಗೆ ಹೋಗಿದ್ದೆವು, ರಾಷ್ಟ್ರಪತಿಗಳನ್ನು ಭೇಟಿ ಮಾಡಲಾಯಿತು. ದೆಹಲಿಗೆ ಹೋದ ವೇಳೆ ವರಿಷ್ಠರನ್ನು ಭೇಟಿ ಮಾಡುವುದು ಸಾಮಾನ್ಯ, ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಎಂದರು.
ಜಲಸಂಪನ್ಮೂಲ ಅನುದಾನ ತಾರತಮ್ಯ ಸಿಎಂ ಗಮನಕ್ಕಿದೆ: ಜಲಸಂಪನ್ಮೂಲ ಇಲಾಖೆಯಿಂದ ಅನುದಾನ ಸಿಗುತ್ತಿಲ್ಲ, ಆಯ್ದ ಶಾಸಕರಿಗೆ ಮಾತ್ರ ಹೆಚ್ಚು ಅನುದಾನ ಸಿಗುತ್ತಿದೆ ಎಂದು ಶಾಸಕರು ಆರೋಪ ಮಾಡಿರುವ ವಿಷಯ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ. ಈ ಬಗ್ಗೆ ಸಿದ್ದರಾಮಯ್ಯ ಈ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಇದೇ ವೇಳೆ ಸತೀಶ್ ಜಾರಕಿಹೊಳಿ ತಿಳಿಸಿದರು. ಜಲಸಂಪನ್ಮೂಲ ಇಲಾಖೆಯಿಂದ ಅನುದಾನ ದೊರೆಯುತ್ತಿಲ್ಲ, ತಮ್ಮ ಕ್ಷೇತ್ರದ ಬಸವೇಶ್ವರ ನೀರಾವರಿ ಯೋಜನೆ ಬಗ್ಗೆ ಹತ್ತಾರು ಬಾರಿ ಹೇಳಿದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಏನೂ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ರಾಜು ಕಾಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲಿನಿಂದ ನೀರಾವರಿ ಸಮಸ್ಯೆ ಬಗ್ಗೆ ಅವರು ಹೇಳುತ್ತಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಅನುದಾನದ ಕೊರತೆ ಇಲ್ಲ. ಇಲಾಖೆಗೆ ಈ ವರ್ಷ 26 ಸಾವಿರ ಕೋಟಿ ನೀಡಲಾಗಿದೆ. ಅದೇ ರೀತಿ ಬಾಕಿ ಬಿಲ್ಗಳು ಕೂಡ ಇವೆ. ಯಾವ ಸರ್ಕಾರ ಬಂದರೂ ಮೂರು ವರ್ಷದಷ್ಟು ಬಿಲ್ ಬಾಕಿ ಇದ್ದೇ ಇರುತ್ತವೆ ಎಂದರು.