ಫರಿದಾಬಾದ್‌ನಲ್ಲಿ ಮನೆಕೆಲಸದಾಕೆಯ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫರಿದಾಬಾದ್: ಮನೆ ಕೆಲಸದಾಕೆಯ ಮೇಲೆ ಮಹಿಳೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ಹರ್ಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಈ ಬಗ್ಗೆ ಮನೆ ಕೆಲಸದಾಕೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ವಾರ ಈ ಘಟನೆ ನಡೆದಿದ್ದು, ಈ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ.
ಫರಿದಾಬಾದ್‌ನ ಸೆಕ್ಟರ್ 17ರ ಮನೆಯೊಂದರಲ್ಲಿ ಜೂನ್ 17ರ ಬೆಳಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಮನೆ ಕೆಲಸದಾಕೆಯನ್ನು ಶ್ಯಾಮದೇವಿ ದೇವಿ ಎಂದು ಗುರುತಿಸಲಾಗಿದೆ. ಹಾಗೆಯೇ ಹಲ್ಲೆ ಮಾಡಿದ ಮಹಿಳೆಯನ್ನು ದೀಪಾಲಿ ದೇವಿ ಎಂದು ಗುರುತಿಸಲಾಗಿದೆ.
ದೃಶ್ಯ ಸಿಸಿಟಿವಿಯಲ್ಲಿ ಸೆರೆ:
ಸಿಸಿಟಿವಿಯಲ್ಲಿ ರೆಕಾರ್ಡ್ ಆದ ದೃಶ್ಯಾವಳಿಯಲ್ಲಿ ಮನೆ ಕೆಲಸದಾಕೆ ಅದೇ ಮನೆಯ ಸದಸ್ಯರೊಬ್ಬರಲ್ಲಿ ಮಾತನಾಡುತ್ತಾ ನಿಂತಿದ್ದ ವೇಳೆ ಮನೆಯ ಮಹಡಿಯ ಮೆಟ್ಟಿಲುಗಳಿಂದ ಕೆಳಗಿಳಿದು ಬಂದ ದೀಪಾಲಿ ಜೈನ್ ಆಕೆಯ ಕೆನ್ನೆಗೆ ಬಾರಿಸಿ ಹಲ್ಲೆ ಮಾಡಿದ್ದಾರೆ. ಒಂದೇ ಸಮನೇ ಆರು ಬಾರಿ ಆಕೆ ಶ್ಯಾಮ ದೇವಿ ಮೇಲೆ ಹಲ್ಲೆ ಮಾಡಿದ್ದಾಳೆ. ಕೂಡಲೇ ಮನೆ ಮಂದಿಯೆಲ್ಲಾ ಅಲ್ಲಿ ಬಂದು ಸೇರಿದ್ದು, ಆಕೆಯನ್ನು ತಡೆಯುವ ಯತ್ನ ಮಾಡಿದ್ದಾರೆ. ಆದರೂ ಆ ಮಹಿಳೆ ಕೆಲಸದಾಕೆಯ ಮೇಲೆ ಮತ್ತೆ ಹಲ್ಲೆ ಮಾಡಿದ್ದಾಳೆ.
ಕೈಯಿಂದ ಹಲ್ಲೆ ಮಾಡಿದ್ದು, ಮಾತ್ರವಲ್ಲದೇ ಅಲ್ಲೇ ಇದ್ದ ಮಾಪ್‌ನಿಂದಲೂ ಆಕೆ ಹಲ್ಲೆ ಮಾಡಲು ಮುಂದಾಗಿದ್ದಾಳೆ. ಆದರೆ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಆಕೆ ಅದನ್ನು ಅಲ್ಲೇ ಕೈ ಬಿಟ್ಟಿದ್ದಾಳೆ. ಇದಾದ ನಂತರವೂ ಆಕೆ ಶ್ಯಾಮದೇವಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಈ ವೇಳೆ ಕುಟುಂಬದ ಇತರ ಸದಸ್ಯರು ಬಂದು ಮಹಿಳೆಯನ್ನು ಅಲ್ಲಿಂದ ಎಳೆದೊಯ್ದಿದ್ದಾರೆ.
ಕೆಲಸದಾಕೆಯ ಶ್ಯಾಮಳ ದೂರಿನ ಪ್ರಕಾರ ದೀಪಾಲಿ ಜೈನ್ ಯಾವುದೇ ಕಾರಣವಿಲ್ಲದೇ ಕೆಲಸದಾಕೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಕಾರಣವಿಲ್ಲದೇ ಹಲ್ಲೆ ಮಾಡಿದ್ದಾಗ ಮನೆಕೆಲಸದಾಕೆಯ ಆರೋಪ
ಮನೆಯ ವಾಹನದ ಚಾಲಕ ಬಂದು 10ರಿಂದ 12 ಬಾರಿ ಮನೆಯ ಕಾಲಿಂಗ್ ಬೆಲ್ ಬಡಿದಿದ್ದಾನೆ. ಈ ವೇಳೆ ಕೂಡಲೇ ಅಲ್ಲಿಗೆ ಹೋದ ನಾನು ಬಾಗಿಲು ತೆಗೆದಿದ್ದೇನೆ. ಇದೇ ವೇಳೆ ಅಲ್ಲಿಗೆ ಬಂದ ದೀಪಾಲಿ ನನಗೆ ಥಳಿಸಲು ಆರಂಭಿಸಿದ್ದಾಳೆ. ನಾನು ಮಾಡಿದ ತಪ್ಪು ಏನು ಎಂದು ಹೇಳದೆಯೇ ಆಕೆ ಥಳಿಸಿದ್ದು, ಇದರಿಂದ ನನ್ನ ಮೂಗಿನಲ್ಲಿ ರಕ್ತ ಬಂದಿದ್ದು, ನನ್ನ ಕೆನ್ನೆಗಳು ಊದಿಕೊಂಡಿವೆ. ಹಾಗೆಯೇ ನನ್ನ ತಲೆಗೂ ನೋವಾಗಿದೆ ಎಂದು ಆಕೆ ಹೇಳಿದ್ದಾಳೆ. ಅಲ್ಲದೇ ಆಕೆಯ ಜಾತಿಯನ್ನು ಕೂಡ ಉಲ್ಲೇಖಿಸಿ ಆಕೆ ನಿಂದಿಸಿದ್ದಾಳೆ ಎಂದು ಮನೆಕೆಲಸದಾಕೆ ದೂರು ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ಈ ಕುಟುಂಬಕ್ಕಾಗಿ ತಾನು ಕೆಲಸ ಮಾಡುತ್ತಿರುವುದಾಗಿ ಮಹಿಳೆ ಹೇಳಿದ್ದಾರೆ. ಇದಕ್ಕೂ ಮೊದಲು ತನ್ನೊಂದಿಗೆ ಆ ಮಹಿಳೆ ಇದೇ ರೀತಿ ವರ್ತಿಸಿದ್ದಾಗಿ ಅವರು ಹೇಳಿದ್ದಾರೆ.
ನಾನು ಕೆಲಸ ಮಾಡುವ ವೇಳೆ ನನ್ನ ಮಕ್ಕಳು ಹೊರಭಾಗದಲ್ಲಿ ಆಟವಾಡುತ್ತಿರುತ್ತಾರೆ. ಅವರು ನನ್ನ ಮಕ್ಕಳನ್ನು ಆಟವಾಡುವುದಕ್ಕೂ ಬಿಡುತ್ತಿರಲಿಲ್ಲ, ಅವರು ಅಲ್ಲಿ ಗಲಾಟೆ ಮಾಡಿ ಅವ್ಯವಸ್ಥೆ ಮಾಡುತ್ತಾರೆ ಎಂದು ಆಕೆ ದೂರುತಿದ್ದರು. ನನ್ನ ಮಕ್ಕಳು ಅಲ್ಲಿ ಯಾವುದೇ ಗಲಾಟೆ ಮಾಡದೇ ಅವರಷ್ಟಕ್ಕೆ ಅವರೇ ಆಟವಾಡುತ್ತಿದ್ದರು. ಆದರೆ ಅವರು ನಮಗೆ ಕೊಲೆ ಮಾಡುವುದಾಗಿ ಹೇಳಿ ಬೆದರಿಸುತ್ತಿದ್ದಾರೆ ಎಂದು ಶ್ಯಾಮ ದೂರಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ಯಾಮ ದೇವಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗೆಯೇ ದೀಪಾಲಿ ಜೈನ್ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಸಹಾಯಕ ಪೊಲೀಸ್ ಕಮೀಷನರ್ ವಿನೋದ್ ಕುಮಾರ್ ಹೇಳಿದ್ದಾರೆ.