ಹಾವೇರಿ, (ಜೂನ್ 26): ವಯಸ್ಸಾದರೂ ಮದುವೆಗೆ (marriage,) ಕನ್ಯೆ (bride )ಸಿಗದ್ದರಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ನಡೆದಿದೆ. ಅವಿನಾಶ ಚಾವಡಿ (29) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಡ್ರೈವರ್ ಕೆಲಸ ಮಾಡಿಕೊಂಡಿದ್ದ ಅವಿನಾಶ ಚಾವಡಿ, ಮದುವೆಗಾಗಿ ಕನ್ಯೆ ಹುಡುಕುತ್ತಿದ್ದರು. ಆದರೆ, ಇದುವರೆಗೆ ಎಲ್ಲಿಯೂ ಕನ್ಯೆ ಸಿಕ್ಕಿರಲಿಲ್ಲ. ಅದು ಬೇರೆ ತನ್ನ ಸ್ನೇಹಿತರಿಗೆಲ್ಲರಿಗೂ ವಿವಾಹವಾಗಿದ್ದು, ತನಗೆ ಹೆಣ್ಣು ಸಿಗುತ್ತಿಲ್ವಲ್ಲ ಎಂದು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚೆನ್ನಾಗಿ ದುಡಿಯುತ್ತೇನೆ. ನನಗೆ ವಯಸ್ಸಾದರೂ ಮದುವೆಯಾಗಲು ಇದುವರೆಗೂ ಯಾವುದೇ ಹೆಣ್ಣು ಸಿಗುತ್ತಿಲ್ಲ. ನಮ್ಮೂರಿನಲ್ಲಿರುವ ನನ್ನ ವಯಸ್ಸಿನ ಎಲ್ಲರಿಗೂ ಮದುವೆಯಾಗಿದೆ ಎಂದು ಮಗ ಅವಿನಾಶ ನೊಂದುಕೊಂಡಿದ್ದ. ಮಂಗಳವಾರ ಮಧ್ಯಾಹ್ನ ಮನೆಯಲ್ಲೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಾಯಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಯುಡಿಆರ್ (ಅಸಹಜ ಸಾವು) ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸುಪಾರಿ ಕೊಟ್ಟವನನ್ನೇ ಕೊಂದರು: ಶಿಗ್ಗಾಂವಿ ಗುತ್ತಿಗೆದಾರನ ಹತ್ಯೆ ಹಿಂದೆ ರಾಸಲೀಲೆ, ವಿಡಿಯೋ ಫೋಟೋಗಳು
ಹಾವೇರಿ ಜಿಲ್ಲೆಯಲ್ಲಿ ಈ ರೀತಿ ಅಂದರೆ ಹೆಣ್ಣು ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮೊದಲಲ್ಲ. ಈ ಹಿಂದೆ 2023ರಲ್ಲೂ ಸಹ ವ್ಯಕ್ತಿಯೋರ್ವ ಮದುವೆಯಾಗಲು ಕನ್ಯೆ ಸಿಗುತ್ತಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ.ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ ಮಂಜುನಾಥ ನಾಗನೂರು ಎನ್ನುವ ರೈತ, ಹೆಣ್ಣು ಸಿಗದಿದ್ದಕ್ಕೆ ಎರಡು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. 7-8 ವರ್ಷಗಳಿಂದ ಕನ್ಯೆ ಹುಡುಕುತ್ತಿದ್ದ ರೈತ ಮಂಜುನಾಥ ಎಂಬವರಿಗೆ ಯಾರೊಬ್ಬರೂ ಕನ್ಯೆ ನೀಡಲು ಒಪ್ಪುತ್ತಿರಲಿಲ್ಲ. ನನ್ನಿಂದ ತಂದೆ ತಾಯಿಗೆ ತೊಂದರೆ ಆಗುತ್ತಿದೆ ಎಂದು ಹೇಳಿ ಜೀವನದಲ್ಲಿ ಜಿಗುಪ್ಸೆಗೊಂಡು ಜಮೀನಿನಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಾವೇರಿ ಜಿಲ್ಲೆಯ ಒಂದೇ ಹೆಣ್ಣಿನ ಸಮಸ್ಯೆ ಇಲ್ಲ. ಹಲವು ಜಿಲ್ಲೆಗಳಲ್ಲಿ ಯುವಕರು ಮದುವೆ ಮಾಡಿಕೊಳ್ಳಲು ಕನ್ಯೆ ಹುಡುಕಲು ಹರಸಾಹಸಪಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ರೈತ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಹೀಗಾಗಿ ಕಂಕಣ ಭಾಗ್ಯಕ್ಕಾಗಿ ಹೆಣ್ಣು ಸಿಗಲೆಂದು ಹರಕೆ ಹೊತ್ತು 15 ಜನ ಯುವಕರು ಮಲೈ ಮಹದೇಶ್ವರ ಬೆಟ್ಟಕ್ಕೆ ಹರಕೆ ಹೊತ್ತಿದ್ದರು.
ಇದನ್ನೂ ಓದಿ: ಹಾವೇರಿ: ಕನ್ಯೆ ಸಿಗದಿದ್ದಕ್ಕೆ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ
ಚಳಿಗಾಲದ ಅಧಿವೇಶನದಲ್ಲೂ ಪ್ರಸ್ತಾಪ
ಅಷ್ಟೇ ಅಲ್ಲದೇ ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎನ್ನವು ವಿಚಾರ ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶದಲ್ಲೂ ಪ್ರಸ್ತಾಪವಾಗಿತ್ತು. ರೈತರ ಮಕ್ಕಳಿಗೆ ನೌಕರಿ ಇಲ್ಲ ಅಂದ್ರೆ ಯಾರು ಕೂಡ ಕನ್ಯೆ ಕೊಡಲು ಮುಂದೆ ಬರುತ್ತಿಲ್ಲ, ಇದು ಸತ್ಯವಾದ ಮಾತು ಎಂದು ಶಾಸಕರು ಹೇಳಿದ್ದರು. ರೈತರ ಕಷ್ಟಕ್ಕೆ ಸರ್ಕಾರ ಧಾವಿಸಬೇಕು, ಇವತ್ತಿನ ದಿನಗಳಲ್ಲಿ ರೈತರ ಮಕ್ಕಳಿಗೆ ಯಾರು ಕೂಡ ಹೆಣ್ಣನ್ನು ಕೊಡುತ್ತಿಲ್ಲ. ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಕೆಲಸ ಆಗಬೇಕು ಎಂದು ಸದನದಲ್ಲಿ ಚರ್ಚೆಯಾಗಿತ್ತು.
ರೈತರನ್ನು ಅನ್ನದಾತ, ದೇಶದ ಬೆನ್ನೆಲುಬು ಎಂದು ಗೌರವದಿಂದ ಕರೆಯುತ್ತಾರೆ. ಆದ್ರೆ, ಈ ನಡುವೆ ಆ ಗೌರವ ಕಡಿಮೆಯಾಗುತ್ತಿದೆ. ರೈತರೆಂದರೆ ಸಾಕು ಬಡವರು, ಆರ್ಥಿಕವಾಗಿ ಹಿಂದೂಳಿದವರು ಮತ್ತು ಹತಾಶೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವವರು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಪ್ರಸಕ್ತ ರೈತರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ನನ್ನ ಮಗಳನ್ನ ದೊಡ್ಡ ಮನೆಗೆ ಕೊಡಬೇಕು, ದೊಡ್ಡ ಬ್ಯುಸಿನೆಸ್ ಮ್ಯಾನ್ ಗೆ ಕೊಡಬೇಕು ಇಲ್ಲ ಸರ್ಕಾರಿ ನೌಕರನಿಗೆ ಕೊಡಬೇಕು ಎನ್ನುವುದು ಹಲವು ಹೆಣ್ಣು ಮಕ್ಕಳ ಪೋಷಕರಲ್ಲಿದೆ. ಇದರಿಂದ ಜಮೀನು ಮಾಡಿಕೊಂಡು ಜೀವನ ಮಾಡುತ್ತಿದ್ದಾನೆಂದರೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ.
Published On – 5:03 pm, Thu, 26 June 25