ತಮ್ಮ ಮುಂದಿನ ಸ್ಪರ್ಧೆಯ ಕ್ಷೇತ್ರ ತಿಳಿಸಿದ ನಿಖಿಲ್ ಕುಮಾರಸ್ವಾಮಿ – ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದರು. | Nikhil Kumaraswamy Reveals The Next Constituency

ತಮ್ಮ ಮುಂದಿನ ಸ್ಪರ್ಧೆಯ ಕ್ಷೇತ್ರ ತಿಳಿಸಿದ ನಿಖಿಲ್ ಕುಮಾರಸ್ವಾಮಿ – ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದರು. | Nikhil Kumaraswamy Reveals The Next Constituency



ಇದು ನಮ್ಮ ಸ್ವಂತ ಕ್ಷೇತ್ರ, ನೀವು ಬೆಳೆಸಿದ ಮನೆ ಮಕ್ಕಳು ನಾವು. ನಮ್ಮನ್ನು ಪ್ರೀತಿಯಿಂದ ಅರಸಿದ್ದೀರಿ, ಬೆಳೆಸಿದ್ದೀರಿ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದರು.

ರಾಮನಗರ : ಚುನಾವಣೆಗೆ ನಿಲ್ಲುವ ಸಮಯ ಬಂದರೆ ರಾಮನಗರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಇಲ್ಲಿಂದ ನಾನು ಪಲಾಯನ ಮಾಡುವುದಿಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಇದು ನಮ್ಮ ಸ್ವಂತ ಕ್ಷೇತ್ರ, ನೀವು ಬೆಳೆಸಿದ ಮನೆ ಮಕ್ಕಳು ನಾವು. ನಮ್ಮನ್ನು ಪ್ರೀತಿಯಿಂದ ಅರಸಿದ್ದೀರಿ, ಬೆಳೆಸಿದ್ದೀರಿ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದರು.ಚುನಾವಣೆಗಳಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ. ಆದರೆ, ಕ್ಷೇತ್ರದ ಜನರ ಬಾಂಧವ್ಯ ಮುಖ್ಯವೆಂದು ಸ್ಪರ್ಧಿಸಿ ನಾನು ಮೂರು ಚುನಾವಣೆಗಳಲ್ಲು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾದೆ.

ನನ್ನ ಸೋಲಿನ ಒಳ ಮರ್ಮ ರಾಜ್ಯ ದ ಜನರಿಗೆ ಗೊತ್ತಿಲ್ಲ. ನನ್ನ ಮೂರು ಸೋಲುಗಳು ನನಗೆ ರಾಜಕೀಯವಾಗಿ ಪರಿಪಕ್ವತೆಯನ್ನು ಕಲಿಸಿವೆ. ಈ ಸೋಲುಗಳಿಂದ ಕುಗ್ಗದೆ ಮತ್ತೆ ಅವಕಾಶ ಸಿಕ್ಕರೆ ರಾಮನಗರ ಕ್ಷೇತ್ರದಿಂದಲೇ ಸ್ವರ್ಧೆ ಮಾಡುತ್ತೇನೆ. ಈ ಬಗ್ಗೆ ಯಾರಿಗೂ ಸಂದೇಹ ಬೇಡ. ನನ್ನಿಂದ ಏನಾದರು ತಪ್ಪಾಗಿದ್ದರೆ ಮನ್ನಿಸಿ ಎಂದು ಕ್ಷಮೆಯಾಚನೆ ಮಾಡಿದರು.

ಈ ಕ್ಷೇತ್ರದ ಜನರು ಕುಮಾರಸ್ವಾಮಿ ಅವರನ್ನು ಹೆಗಲ ಮೇಲೆ ಹೊತ್ತು ಗೆಲ್ಲಿಸಿದ್ದೀರಿ. ನಾನು ಪಲಾಯನ ಮಾಡದೆ ನನ್ನ ಕುಟುಂಬದ ಮೇಲಿರುವ ನಿಮ್ಮ ಋಣವನ್ನು ತೀರಿಸುತ್ತೇನೆ. ನಾನು ರಾಜ್ಯಾಧ್ಯಕ್ಷನಾಗಲು ಈ ಕಾರ್ಯಕ್ರಮ ಎನ್ನುತ್ತಿದ್ದಾರೆ. ಆದರೆ ಯಾವುದೇ ಹುದ್ದೆಯ ಆಸೆ ನನಗಿಲ್ಲ. ನಾಡಿನ ಜನರು ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ನಿರ್ಧಾರ ಮಾಡಿದ್ದಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಜನತಾದಳ ಸ್ಥಾಪನೆಯಾಗಿದ್ದು ಹೋರಾಟದ ಹಿನ್ನೆಲೆಯಲ್ಲಿ, ಜನತೆ ಅಂದಿನಿಂದಲೂ ನಮ್ಮ ಜೊತೆ ಇದ್ದಾರೆ. ನಾನು ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮ ಮಾಡುತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಜನರೊಂದಿಗೆ ಜನತಾದಳ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ನಮ್ಮ ಪಕ್ಷದ ಕಾರ್ಯಕರ್ತರು ಸದೃಢವಾಗಬೇಕು. ಗ್ರಾಪಂನಿಂದ ಆರಂಭವಾಗಿ ಎಲ್ಲಾ ಹಂತದಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲ್ಲಬೇಕು. ಹೊಸ ಆಲೋಚನೆಗಳನ್ನು ಹೊಂದಿರುವ ಯುವಜನರು ರಾಜಕೀಯಕ್ಕೆ ಬರಬೇಕು. ಜನರೊಂದಿಗೆ ಜನತಾದಳದ ಪ್ರತಿನಿಧಿಗಳಾಗಿ ಕಾರ್ಯಕರ್ತರು ನಿಲ್ಲಬೇಕು ಎಂಬುದೇ ನಮ್ಮ ಗುರಿ ಎಂದು ತಿಳಿಸಿದರು.

ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಏನುಮಾಡಿದ್ದಾರೆ ಎಂಬುದಾಗಿ ಪ್ರತಿ ಪಕ್ಷದವರು ಆರೋಪ ಮಾಡುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ತಂಬಾಕು ಬೆಳೆಗಾರರು, ರೇಷ್ಮೆ ಬೆಳೆಗಾರರು, ಕೊಬ್ಬರಿ ಬೆಲೆ, ಮಾವು ಬೆಳೆಗೆ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಮೂಲಕ ನ್ಯಾಯ ಕೊಡಿಸಿದ್ದಾರೆ. ಇದು ಡಿಕೆ ಸಹೋದರರಿಂದ ಸಾಧ್ಯನಾ ಎಂದು ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್, ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ದಿಶಾ ಸಮಿತಿ ಸದಸ್ಯ ವಿ. ನರಸಿಂಹಮೂರ್ತಿ, ಜೆಡಿಎಸ್ ರಾಜ್ಯ ವಕ್ತಾರ ಬಿ. ಉಮೇಶ್. ಮುಖಂಡರಾದ ಜಿ.ಟಿ. ಕೃಷ್ಣ, ಶಿವಸ್ವಾಮಿ, ಚಂದ್ರಯ್ಯ, ಹೋಟಲ್ ಉಮೇಶ್, ನಗರಸಭಾ ಸದಸ್ಯರಾದ ಆರ್.ಎ. ಮಂಜುನಾಥ್, ಮಹಾಲಕ್ಷ್ಮಿ ಗೂಳಿಗೌಡ, ಮಂಜುಳಾ, ಶಿವಸ್ವಾಮಿ(ಅಪ್ಪಿ) ಗ್ಯಾಬ್ರಿಯಲ್, ಪಾದರಹಳ್ಳಿ ಚಂದ್ರಶೇಖರ್, ಎ. ರವಿ ಉಪಸ್ಥಿತರಿದ್ದರು.

ರಾಮನ ಹೆಸರು ಅಳಿಸಿದ ಕಾಂಗ್ರೆಸ್ ಧೂಳಿಪಟವಾಗಲಿದೆ

ರಾಮನಗರ: ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿ ರಾಮನ ಹೆಸರು ಅಳಿಸುವ ಕೆಲಸ ಮಾಡಿರುವ ಕಾಂಗ್ರೆಸ್ ಪಕ್ಷ ಧೂಳಿಪಟವಾಗಲಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮಾಜಿ ಸಿಎಂ ಕೆಂಗಲ್ ಹನುಮಂತಯ್ಯನವರು ರಾಮನಗರ ಎಂದು ಹೆಸರು ಇಟ್ಟಿದ್ದರು. ಕುಮಾರಸ್ವಾಮಿರವರು ರಾಮನಗರ ಜಿಲ್ಲೆ ಮಾಡಿದರು. ಆದರೆ, ಕಾಂಗ್ರೆಸ್‌ನವರು ರಾಮನಗರ ಜಿಲ್ಲೆಯ ಅಸ್ಮಿತೆಯನ್ನು ಅಳಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ಹೆಸರು ಬದಲಾವಣೆ ಮಾಡುವುದರಿಂದ ಅಭಿವೃದ್ಧಿ ಆಗಲ್ಲ. ಕೆಂಗಲ್ ಹನುಮಂತಯ್ಯ ಅವರ ಕಟ್ಟಿದ ರಾಮನಗರ ಹೆಸರನ್ನು ಕಾಂಗ್ರೆಸ್ ಅಳಿಸಿದೆ. ಆದರೆ ರಾಮನಗರ ಜನರ ಹೃದಯದಲ್ಲಿ ರಾಮನಗರ ಶಾಶ್ವತವಾಗಿ ಉಳಿದಿದೆ ಮಿಸ್ಟರ್ ಡಿ.ಕೆ. ಶಿವಕುಮಾರ್ ಎಂದು ಟಾಂಗ್ ನೀಡಿದರು.

ಕಾವೇರಿಗೆ ಆರತಿ ಮಾಡುತ್ತಿರುವುದು ಸ್ವಾಗತ ಮಾಡುತ್ತೇನೆ, ಅದು ನಮ್ಮ ಸಂಸ್ಕೃತಿ. ಆದರೆ ಅದಕ್ಕೆ ಕೋಟಿ, ಕೋಟಿ ಹಣ ಖರ್ಚು ಮಾಡುವುದರಿಂದ ಜನ ಸಾಮಾನ್ಯರಿಗೆ ಕಷ್ಟ. ಈ ಹಣವನ್ನ ಕಾಂಗ್ರೆಸ್ ಕೊಡುತ್ತಾ.? ಜನರ ಹಣದಿಂದ ಖರ್ಚು ಮಾಡುತ್ತಾರೆ.

– ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ಜೆಡಿಎಸ್ ಯುವ ಘಟಕ.



Source link

Leave a Reply

Your email address will not be published. Required fields are marked *