ದುಡ್ಡು ಕೊಡಿ, ಮನೆ ಪಡಿ-ಇದು ಕಾಂಗ್ರೆಸ್ ಹೊಸ ಘೋಷವಾಕ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು.
ಹುಬ್ಬಳ್ಳಿ (ಜೂ.23): ದುಡ್ಡು ಕೊಡಿ, ಮನೆ ಪಡಿ-ಇದು ಕಾಂಗ್ರೆಸ್ ಹೊಸ ಘೋಷವಾಕ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ಶಾಸಕ ಬಿ.ಆರ್.ಪಾಟೀಲ ಅವರು ವಸತಿ ಇಲಾಖೆಯಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂಬ ಹೇಳಿಕೆ ಕುರಿತಂತೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಶಾಸಕ ಬಿ.ಆರ್.ಪಾಟೀಲ, ಬಸವರಾಜ ರಾಯರಡ್ಡಿ ಅವರು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಪಾಟೀಲ ಅವರ ಬಳಿ ಅದಕ್ಕೆ ಸಂಬಂಧಿಸಿದ ದಾಖಲೆಗಳು ಇರುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳುವ ತಾಕತ್ತು ಆ ಪಕ್ಷದವರಿಗಿಲ್ಲ ಎಂದು ವ್ಯಂಗ್ಯವಾಡಿದರು. 6 ತಿಂಗಳ ನಂತರ ಮುಖ್ಯಮಂತ್ರಿ ಸ್ಥಾನದಲ್ಲಿ ತಾವು ಇರುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಅನಿಸಿದೆ. ಹೀಗಾಗಿ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದ ಮೇಲೆ ಸಿದ್ದರಮಯ್ಯ ಅವರಿಗೆ ಹಿಡಿತ ಇಲ್ಲ ಎಂದು ಟೀಕಿಸಿದರು.
ವಸತಿ ಯೋಜನೆ ಮನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರ 2019ರಲ್ಲಿ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಈ ಆದೇಶ ಇದ್ದರೆ ಸಿಎಂ ಕೂಡಲೇ ಬಿಡುಗಡೆ ಮಾಡಲಿ ಎಂದು ಸಿಎಂಗೆ ಸವಾಲು ಹಾಕಿದರು. ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಬಾರದು ಎಂದು ಕುಂದಾಪುರ ಪೊಲೀಸರು ಚಕ್ರವರ್ತಿ ಸೂಲಿಬೆಲೆ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ನೀಡಿದ ಪೊಲೀಸ್ ಅಧಿಕಾರಿಗೆ ಬುದ್ಧಿ ಇಲ್ಲವೇ? ಇದು ಅಸಹಿಷ್ಣುತೆಯ ಪರಮಾವಧಿ ಎಂದರು.
ಲಾಡ್ ಅವರದ್ದು ಬಾಲಿಶ ಮಾತು: ಸಚಿವ ಸಂತೋಷ ಲಾಡ್ ಮಾತೆತ್ತಿದರೆ ಬರೀ ಒಬಾಮಾ, ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ಆಧಾರವಿಲ್ಲದೆ ಮಾತನಾಡುತ್ತಾರೆ. ಅವರ ಇಲಾಖೆ ಹಗರಣ ಹೊರ ಬಂದ ಮೇಲೆ, ಮಂತ್ರಿ ಪದವಿ ಉಳಿಸಿಕೊಳ್ಳಲು ಮೋದಿ ಅವರಿಗೆ ಬೈಯುತ್ತಿದ್ದಾರೆ. ಬಾಲಿಶವಾಗಿ ಮಾತನಾಡುತ್ತಿದ್ದು, ಅವರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದರು.
2019ರ ಅಧಿಸೂಚನೆಯಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ, ಚಾಲಕ ಕಂ ನಿರ್ವಾಹಕ ಸೇರಿ 2814 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಆದರೆ, ಒಂದು ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿರುವುದು ತಪ್ಪು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕರೆ ಮಾಡಿ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.