ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಸಿನಿಮಾ ಮುರಿದ ದಾಖಲೆಗಳು ಅವೆಷ್ಟೊ. ಕಳೆದ ವರ್ಷ ಬಿಡುಗಡೆ ಆಗಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ‘ಪುಷ್ಪ 2’. ‘ಪುಷ್ಪ 2’ ಬಿಡುಗಡೆ ಬಳಿಕ ಬಾಕ್ಸ್ ಆಫೀಸ್ನ ಹಲವು ದಾಖಲೆಗಳು ದೂಳಿಪಟವಾದವು. ದೊಡ್ಡ ಪರದೆಯಲ್ಲಿ ದಾಖಲೆಗಳನ್ನು ಮುರಿದು ಹಾಕಿರುವ ‘ಪುಷ್ಪ 2’ ಈಗ ಟಿವಿಯಲ್ಲೂ ಹವಾ ಎಬ್ಬಿಸಿದ್ದು, ಅಲ್ಲೂ ಸಹ ಬಾಲಿವುಡ್ಡಿಗರು ಈ ಹಿಂದೆ ಮಾಡಿದ್ದ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾದ ಹಿಂದಿ ಆವೃತ್ತಿ, ಇತ್ತೀಚೆಗಷ್ಟೆ ಟಿವಿಯಲ್ಲಿ ಪ್ರಸಾರವಾಯ್ತು. ಸುಕುಮಾರ್ ನಿರ್ದೇಶನದ ಈ ಸಿನಿಮಾ ಈ ಹಿಂದಿನ ದಾಖಲೆಗಳನ್ನು ಮುರಿದು ದಾಖಲೆಯ 5.1 ಟಿವಿಆರ್ ರೇಟಿಂಗ್ ಪಡೆದುಕೊಂಡಿದೆ. ಸಂಖ್ಯೆಗಳ ಪ್ರಕಾರ 5.4 ಕೋಟಿ ವೀಕ್ಷಣೆಯನ್ನು ಸಿನಿಮಾ ಪಡೆದುಕೊಂಡಿದೆ. ಆ ಮೂಲಕ ಉತ್ತರ ಭಾರತದ ಟಿವಿ ಲೋಕದಲ್ಲಿಯೂ ದಾಖಲೆ ಸೃಷ್ಟಿಸಿದೆ.
ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾಗಳಾದ ಶಾರುಖ್ ಖಾನ್ ನಟನೆಯ ‘ಪಠಾಣ್’, ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾಗಳು ಸಹ ಇಷ್ಟು ದೊಡ್ಡ ಸಂಖ್ಯೆಯ ವೀವ್ಸ್ ಅನ್ನು ಟಿವಿಯಲ್ಲಿ ಪಡೆದುಕೊಂಡಿಲ್ಲ. ಇದೀಗ ‘ಪುಷ್ಪ 2’ ಸಿನಿಮಾ ದಾಖಲೆ ಬರೆದಿದೆ. ಉತ್ತರ ಭಾರತದ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದ್ದ ದಕ್ಷಿಣ ಭಾರತದ ಸಿನಿಮಾಗಳು ‘ಪುಷ್ಪ 2’ ಸಿನಿಮಾ ಈಗ ಟಿವಿ ಲೋಕದಲ್ಲಿಯೂ ಹಲ್ಚಲ್ ಎಬ್ಬಿಸಿವೆ.
ಇದನ್ನೂ ಓದಿ:‘ಫಾದರ್ಸ್ ಡೇ’ ದಿನ ಅಲ್ಲು ಅರ್ಜುನ್ಗೆ ಮಕ್ಕಳಿಂದ ಸರ್ಪ್ರೈಸ್; ಭಾವುಕರಾದ ನಟ
‘ಪುಷ್ಪ 2’ ಸಿನಿಮಾ ಕಳೆದ ವರ್ಷ ಡಿಸೆಂಬರ್ 05 ರಂದು ಬಿಡುಗಡೆ ಆಗಿತ್ತು. ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿತು. 1800 ಕೋಟಿಗೂ ಹೆಚ್ಚಿನ ಮೊತ್ತವನ್ನು ಬಾಕ್ಸ್ ಆಫೀಸ್ನಲ್ಲಿ ಕಲೆ ಹಾಕಿತು ‘ಪುಷ್ಪ 2’. ಬಹು ವರ್ಷಗಳಿಂದಲೂ ಇದ್ದ ‘ಬಾಹುಬಲಿ’, ‘ಕೆಜಿಎಫ್ 2’ ದಾಖಲೆಗಳನ್ನು ‘ಪುಷ್ಪ 2’ ಸಿನಿಮಾ ಮುರಿದು ಹಾಕಿತು. ಭಾರತದಲ್ಲಿ ಮಾತ್ರವೇ ಅಲ್ಲದೆ, ಜಪಾನ್, ಚೀನಾ, ರಷ್ಯಾ ಇನ್ನೂ ಕೆಲವು ದೇಶಗಳಲ್ಲಿ ಸಹ ‘ಪುಷ್ಪ 2’ ಸಿನಿಮಾ ದಾಖಲೆಗಳನ್ನು ಬರೆದಿದೆ.
ಅಲ್ಲು ಅರ್ಜುನ್ ಇದೀಗ ಅಟ್ಲಿ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಹಾಲಿವುಡ್ನ ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ ಮಾದರಿಯ ಸಿನಿಮಾ ಇದಾಗಿದ್ದು, ಅಂತರಿಕ್ಷದ ಯಾವುದೋ ಲೋಕದಲ್ಲಿ ನಡೆಯುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಕಲಾನಿಧಿಮಾರನ್ ಅವರು ಸಿನಿಮಾಕ್ಕೆ ಬಂಡವಾಳ ತೊಡಗಿಸಿದ್ದಾರೆ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ಸಂಸ್ಥೆಗಳೊಂದಿಗೆ ನಿರ್ಮಾಣ ಸಂಸ್ಥೆ ಒಪ್ಪಂದ ಮಾಡಿಕೊಂಡಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ