ನವದೆಹಲಿ, ಜೂನ್ 27: ಪೋಸ್ಟ್ ಆಫೀಸ್ ಅನ್ನು ನಿಯಮಿತವಾಗಿ ಬಳಸುವ ಜನರಿಗೆ ಸಮಾಧಾನ ತರುವ ಸುದ್ದಿ ಇದು. ಅಂಚೆ ಕಚೇರಿಯ ಕೌಂಟರ್ಗಳಲ್ಲಿ ಡಿಜಿಟಲ್ ಪೇಮೆಂಟ್ ಸೌಲಭ್ಯ ಆರಂಭವಾಗುತ್ತಿದೆ. ಇದರೊಂದಿಗೆ ಅಂಚೆ ಕಚೇರಿಯೂ ಯುಪಿಐ ನೆಟ್ವರ್ಕ್ಗೆ ಸೇರ್ಪಡೆಯಾದಂತಾಗಿದೆ. ಹೊಸ ಐಟಿ ಸಿಸ್ಟಂ ಅಪ್ಲಿಕೇಶನ್ ಅನ್ನು ಸ್ಥಾಪಿಸಿರುವುದರಿಂದ ಇದು ಸಾಧ್ಯವಾಗಿದೆ.
ಯುಪಿಐ ಸಿಸ್ಟಂಗೆ ಜೋಡಿತವಾಗದೇ ಇದ್ದರಿಂದ ಅಂಚೆ ಕಚೇರಿಯಲ್ಲಿ ಡಿಜಿಟಲ್ ಪೇಮೆಂಟ್ ಸ್ವೀಕೃತವಾಗಿರಲಿಲ್ಲ. ಈಗ ಹೊಸ ತಂತ್ರಜ್ಞಾನ ಅಳವಡಿಕೆ ಆಗುತ್ತಿದೆ.
‘ಅಂಚೆ ಇಲಾಖೆಯು ತನ್ನ ಐಟಿ ಇನ್ಫ್ರಾಸ್ಟ್ರಕ್ಚರ್ ಅನ್ನು ಅಳವಡಿಸುತ್ತಿದೆ. ಡೈನಮಿಕ್ ಕ್ಯುಆರ್ ಕೋಡ್ನೊಂದಿಗೆ ಟ್ರಾನ್ಸಾಕ್ಷನ್ ನಡೆಸಲು ಸಾಧ್ಯವಾಗಿಸುವ ಹೊಸ ಅಪ್ಲಿಕೇಶನ್ಗಳನ್ನು ಇದು ಒಳಗೊಂಡಿರುತ್ತದೆ. ಈ ಅಪ್ಲಿಕೇಶನ್ಗಳಿರುವ ಇನ್ಫ್ರಾಸ್ಟ್ರಕ್ಚರ್ ಅನ್ನು ಎಲ್ಲಾ ಅಂಚೆ ಕಚೇರಿಗಳಲ್ಲಿ 2025ರ ಆಗಸ್ಟ್ನೊಳಗೆ ಅಳವಡಿಸುವ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಪಿಟಿಐ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಭಾರತದಲ್ಲಿ ಫ್ರಿಡ್ಜ್, ವಾಷಿಂಗ್ ಮೆಷೀನ್ ಬ್ಯುಸಿನೆಸ್ ತೊರೆದ ಪ್ಯಾನಸನಿಕ್; ಏನು ಕಾರಣ? ಈಗಿರುವ ಫ್ರಿಡ್ಜ್ಗಳಿಗೆ ಸರ್ವಿಸ್ ನಿಲ್ಲುತ್ತಾ?
ಕರ್ನಾಟಕದಲ್ಲಿ ಮೊದಲ ಪ್ರಯೋಗ ಅಳವಡಿಕೆ…
ಅಂಚೆ ಇಲಾಖೆಯ ಕರ್ನಾಟಕ ಸರ್ಕಲ್ನಲ್ಲಿ ಅದರ ಹೊಸ ಐಟಿ ಇನ್ಫ್ರಾಸ್ಟ್ರಕ್ಚರ್ ಅನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಮೈಸೂರು ಮುಖ್ಯ ಅಂಚೆ ಕಚೇರಿ, ಬಾಗಲಕೋಟೆ ಮುಖ್ಯ ಕಚೇರಿ ಹಾಗೂ ಅವುಗಳ ಅಡಿಯಲ್ಲಿ ಬರುವ ಅಂಚೆ ಕಚೇರಿಗಳಲ್ಲಿ ಕ್ಯುಆರ್ ಕೋಡ್ ಆಧಾರಿತವಾಗಿ ಮೇಲ್ ಮತ್ತು ಪಾರ್ಸಲ್ ಬುಕಿಂಗ್ ಸರ್ವಿಸ್ ಅನ್ನು ನಡೆಸಲಾಗುತ್ತಿದೆ.
ಮೊದಲಿಗೆ ಅಂಚೆ ಕಚೇರಿಗಳ ಪಿಒಎಸ್ ಕೌಂಟರ್ಗಳಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಸಾಧ್ಯವಾಗುವಂತೆ ಸ್ಟಾಟಿಕ್ ಕ್ಯುಆರ್ ಕೋಡ್ ಅನ್ನು ಅಳವಡಿಸಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆ ಮತ್ತು ಗ್ರಾಹಕರಿಗೆ ಅನನುಕೂಲ ಆಗಿದ್ದರಿಂದ ಈ ವಿಧಾನವನ್ನು ಕೈಬಿಟ್ಟು ಈಗ ಹೊಸ ವ್ಯವಸ್ಥೆ ತರಲಾಗಿದೆ.
ಇದನ್ನೂ ಓದಿ: ಸೈಬರ್ ವಂಚನೆ ತಪ್ಪಿಸಲು ಟೆಲಿಕಾಂ ಇಲಾಖೆ ಹೊಸ ಕ್ರಮ; ಮೊಬೈಲ್ ಐಡಿ ಪರಿಶೀಲನೆಗೆ ಪ್ರತ್ಯೇಕ ಪ್ಲಾಟ್ಫಾರ್ಮ್?
ದೇಶಾದ್ಯಂತ ಒಂದೂವರೆ ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳಿದ್ದು ಎಲ್ಲ ಕಡೆಗೂ ಹೊಸ ಐಟಿ ಇನ್ಫ್ರಾಸ್ಟ್ರಕ್ಚರ್ ಅಳವಡಿಸಲಾಗುತ್ತಿದೆ. ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಪೋಸ್ಟ್, ಪಾರ್ಸಲ್ ಇತ್ಯಾದಿ ಮೇಲ್ ಪ್ರಾಡಕ್ಟ್ಗಳನ್ನು ಕಳುಹಿಸುವುದು ಬಹಳ ಸುಲಭವಾಗುತ್ತದೆ. ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್ಗಳಿಗೂ ಕೂಡ ಯುಪಿಐ ಮೂಲಕ ಹಣ ಪಾವತಿಸಲು ಅವಕಾಶ ನೀಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ