ಗ್ಲಾಸ್ ಬಾಟಲಿ ಆರೋಗ್ಯಕ್ಕೆ ಒಳ್ಳೆಯದು ಅಂತ ನಾವೆಲ್ಲ ತಿಳಿದ್ಕೊಂಡಿದ್ದೇವೆ. ಆದ್ರೆ ಸಂಶೋಧಕರು ಶಾಕ್ ನೀಡಿದ್ದಾರೆ. ಗ್ಲಾಸ್ ಬಾಟಲಿ ನಿಮ್ಮ ಆರೋಗ್ಯ ಹಾಳು ಮಾಡುತ್ತೆ ಅಂತ ಮತ್ತೊಂದಿಷ್ಟು ಟೆನ್ಷನ್ ನೀಡಿದ್ದಾರೆ.
ಪ್ಲಾಸ್ಟಿಕ್ (Plastic) ಆರೋಗ್ಯಕ್ಕೆ ಅಪಾಯಕಾರಿ, ಗ್ಲಾಸ್ ಬಾಟಲಿ ಅತ್ಯುತ್ತಮ ಆಯ್ಕೆ ಅಂತಾನೇ ನಾವೆಲ್ಲ ನಂಬಿದ್ದೇವೆ. ಗ್ಲಾಸ್ ಬಾಟಲಿಗಳು ಪರಿಸರ ಸ್ನೇಹಿ, ಆರೋಗ್ಯಕ್ಕೆ ಉತ್ತಮ ಅಂತ ನಂಬಲಾಗಿದೆ. ಅಡುಗೆ ಮನೆಯಲ್ಲಿ ಪ್ಲಾಸ್ಟಿಕ್ ಕಂಟೆನರ್ ಜಾಗವನ್ನು ಈಗ ಗ್ಲಾಸ್ ಗಳು ಪಡೆಯುತ್ತಿವೆ. ಆದ್ರೆ ನಾವು ನಂಬಿರೋ ಗ್ಲಾಸ್ ಕೂಡ ನಮ್ಮ ಆರೋಗ್ಯ ಹಾಳು ಮಾಡತ್ತೆ ಅಂದ್ರೆ ನಂಬ್ತೀರಾ? ಪ್ಲಾಸ್ಟಿಕ್ ಬಳಸ್ಬೇಡಿ, ನಾನ್ ಸ್ಟಿಕ್ ಬಳಸ್ಬೇಡಿ ಅಂದಾಯ್ತು ಈಗ ಗಾಜಿನ ಸುದ್ದಿಗೆ ಬಂದ್ರಾ ಅಂತ ಕೇಳ್ಬೇಡಿ. ಇದನ್ನು ನಾವು ಹೇಳ್ತಿಲ್ಲ. ಫ್ರಾನ್ಸ್ನ ಆಹಾರ ಸುರಕ್ಷತಾ ಸಂಸ್ಥೆ ANSES ನಡೆಸಿದ ಹೊಸ ಸಂಶೋಧನೆ ನಮ್ಮ ನಂಬಿಕೆಯ ಅಡಿಪಾಯವನ್ನು ಅಲುಗಾಡಿಸಿದೆ.
ಹೊಸ ಸ್ಟಡಿಯಲ್ಲಿ ಆಘಾತಕಾರಿ ಸತ್ಯ ಹೊರಬಿದ್ದಿದೆ. ನೆಚ್ಚಿನ ಗಾಜಿನ ಬಾಟಲಿ (glass bottle)ಗಳು ಪ್ಲಾಸ್ಟಿಕ್ಗಿಂತ ಹೆಚ್ಚು ಮೈಕ್ರೋಪ್ಲಾಸ್ಟಿಕ್ ಕಣಗಳಿಂದ ಕಲುಷಿತಗೊಳ್ಬಹುದು ಅಂತ ಅಧ್ಯಯನ ಹೇಳಿದೆ. ವಿಜ್ಞಾನಿಗಳು ಕೂಡ, ಗಾಜಿನ ಬಾಟಲಿ ಪ್ಲಾಸ್ಟಿಕ್ ಬಾಟಲಿಗಿಂತ ಹೆಚ್ಚು ಸ್ವಚ್ಛವಾಗಿರುತ್ವೆ ಅಂತ ನಂಬಿದ್ರು. ಆದ್ರೆ ಅಧ್ಯಯನದ ವರದಿ ಶಾಕ್ ನೀಡಿದೆ. ಕೋಲ್ಡ್ ಡ್ರಿಂಕ್ಸ್, ನಿಂಬೆ ಪಾನಕ, ಐಸ್ ಟೀ ಮತ್ತು ಬಿಯರ್ನಂತಹ ದ್ರವ ಇರುವ ಗಾಜಿನ ಬಾಟಲಿಗಳಲ್ಲಿ ಪ್ರತಿ ಲೀಟರ್ಗೆ ಸರಾಸರಿ 100 ಮೈಕ್ರೋಪ್ಲಾಸ್ಟಿಕ್ ಕಣಗಳು ಕಂಡುಬಂದಿವೆ. ಅಚ್ಚರಿ ಅಂದ್ರೆ ಈ ಸಂಖ್ಯೆ ಪ್ಲಾಸ್ಟಿಕ್ ಅಥವಾ ಲೋಹದ ಪಾತ್ರೆಗಳಲ್ಲಿ ಕಂಡುಬರುವ ಕಣಗಳಿಗಿಂತ 50 ಪಟ್ಟು ಹೆಚ್ಚು.
ಮುಚ್ಚಳವೇ ಇಲ್ಲ ವಿಲನ್ ?: ಗ್ಲಾಸ್ ಬಾಟಲಿಯಲ್ಲಿ ಪ್ಲಾಸ್ಟಿಕ್ ಕಣ ಕಾಣಿಸಿಕೊಳ್ಳಲು ಅದ್ರ ಮುಚ್ಚಳ ಕಾರಣ ಇರ್ಬಹುದು ಎಂದು ಸಂಶೋಧಕರು ಸಂಶಯ ವ್ಯಕ್ತಪಡಿಸಿದ್ದಾರೆ. ಪಾನೀಯದಲ್ಲಿ ಕಂಡು ಬಂದ ಪ್ಲಾಸ್ಟಿಕ್ ಹೊಸ ಭಾಗದ ಬಣ್ಣವನ್ನು ಹೋಲುತ್ತಿತ್ತು. ಮುಚ್ಚಳಕ್ಕೆ ಹಾಕುವ ಬಣ್ಣ ಪಾನೀಯ ಸೇರಿ ಅಪಾಯವನ್ನುಂಟು ಮಾಡ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಹೆಚ್ಚು ಕಲುಷಿತವಾದ ಪಾನೀಯ ಯಾವ್ದು? : ಸಂಶೋಧನೆ ಪ್ರಕಾರ, ಬಿಯರ್ ಬಾಟಲಿಗಳು ಹೆಚ್ಚು ಮೈಕ್ರೋಪ್ಲಾಸ್ಟಿಕ್ಗಳನ್ನು ಹೊಂದಿವೆ. ಪ್ರತಿ ಲೀಟರ್ಗೆ ಸರಾಸರಿ 60 ಕಣಗಳು ಕಾಣಿಸಿಕೊಂಡಿವೆ. ಇದರ ನಂತ್ರ ನಿಂಬೆ ಪಾನಕದಲ್ಲಿ ಸುಮಾರು ಶೇಕಡಾ 40ರಷ್ಟು ಮೈಕ್ರೋಪ್ಲಾಸ್ಟಿಕ್ಗಳು ಕಂಡುಬಂದಿವೆ. ಆಶ್ಚರ್ಯಕರ ವಿಷಯವೆಂದರೆ ಸೋಡಾ ನೀರಿನಲ್ಲಿನ ಮೈಕ್ರೋಪ್ಲಾಸ್ಟಿಕ್ಗಳ ಮಟ್ಟವು ತುಂಬಾ ಕಡಿಮೆ ಇದೆ. ಗಾಜಿನ ಬಾಟಲಿಗಳು ಪ್ರತಿ ಲೀಟರ್ಗೆ ಸುಮಾರು 4.5 ಕಣಗಳನ್ನು ಹೊಂದಿದ್ದರೆ, ಪ್ಲಾಸ್ಟಿಕ್ ಬಾಟಲಿಗಳು ಕೇವಲ 1.6 ಕಣಗಳನ್ನು ಹೊಂದಿದ್ದವು ಎಂದು ಸಂಶೋಧಕರು ಹೇಳಿದ್ದಾರೆ. ಬೆಳಕಿಗೆ ಬಂದ ಮತ್ತೊಂದು ಕುತೂಹಲಕಾರಿ ವಿಷಯವೆಂದ್ರೆ ವೈನ್ ಬಾಟಲಿಗಳು ಇತರ ಗಾಜಿನ ಬಾಟಲಿಗಳಿಗಿಂತ ಕಡಿಮೆ ಕಲುಷಿತವಾಗಿವೆ. ಏಕೆಂದರೆ ಅವು ಲೋಹದ ಮುಚ್ಚಳಗಳ ಬದಲಿಗೆ ಕಾರ್ಕ್ ಸ್ಟಾಪರ್ಗಳನ್ನು ಹೊಂದಿರುತ್ವೆ.
ಸಮಸ್ಯೆಗೆ ಪರಿಹಾರವೇನು? : ಬಾಟಲಿ ಮುಚ್ಚಳದ ಮೇಲೆ ಅನುಮಾನವಿದೆ. ಆದ್ರೆ ಯಾವುದರಿಂದ ಎನ್ನುವ ಸ್ಪಷ್ಟ ಉತ್ತರ ವಿಜ್ಞಾನಿಗಳಿಗೆ ಸಿಕ್ಕಿಲ್ಲ. ಸದ್ಯದ ಪರಿಹಾರ ಅಂದ್ರೆ ಮುಚ್ಚಳಗಳನ್ನು ಸಂಪೂರ್ಣವಾಗಿ ತೊಳೆದು ಎಥೆನಾಲ್-ನೀರಿನ ದ್ರಾವಣದಿಂದ ಸ್ವಚ್ಛಗೊಳಿಸುವ ಮೂಲಕ ಅವುಗಳಲ್ಲಿರುವ ಮೈಕ್ರೋಪ್ಲಾಸ್ಟಿಕ್ ಕಣಗಳ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
ಮೈಕ್ರೋಪ್ಲಾಸ್ಟಿಕ್ ಹೆಚ್ಚಳದ ಭಯ : ವಿಶ್ವದಾದ್ಯಂತ ಮೈಕ್ರೋಪ್ಲಾಸ್ಟಿಕ್ ಸಂಖ್ಯೆ ಹೆಚ್ಚಾಗಿದೆ. 1950 ರ ದಶಕದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯು 1.5 ಮಿಲಿಯನ್ ಟನ್ಗಳಷ್ಟಿತ್ತು. 2022 ರಲ್ಲಿ 400.3 ಮಿಲಿಯನ್ ಟನ್ಗಳಿಗೆ ಏರಿದೆ. 5 ಮಿಲಿಮೀಟರ್ಗಿಂತ ಚಿಕ್ಕದಾದ ಪ್ಲಾಸ್ಟಿಕ್ನ ತುಂಡುಗಳಾದ ಮೈಕ್ರೋಪ್ಲಾಸ್ಟಿಕ್ಗಳು ಈಗ ವಿಶ್ವದ ಆಳವಾದ ಸಾಗರದಿಂದ ಮೌಂಟ್ ಎವರೆಸ್ಟ್ವರೆಗೆ ಎಲ್ಲೆಡೆ ಕಂಡುಬರುತ್ತವೆ. ಅವು ಮಾನವನ ಮಿದುಳು ಮತ್ತು ಸಮುದ್ರ ಜೀವಿಗಳ ಹೊಟ್ಟೆಯಲ್ಲಿಯೂ ಕಂಡುಬಂದಿವೆ.