ಬಾಲಿವುಡ್ನಲ್ಲಿ (Bollywood) ಮೂರು ಖಾನ್ಗಳ ಹವಾ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಇಲ್ಲದೆ ಬಾಲಿವುಡ್ಡೆ ಇಲ್ಲ ಎಂಬಂಥಾ ಸ್ಥಿತಿ ಇಂದಲ್ಲ ಕೆಲ ದಶಕಗಳಿಂದಲೂ ಇದೆ. ಸುಮಾರು 30 ವರ್ಷಗಳಿಂದಲೂ ಸಹ ಬಾಲಿವುಡ್ ಅನ್ನು ಆಳುತ್ತಾ ಬಂದಿದ್ದಾರೆ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಆಮಿರ್ ಖಾನ್. ಸಲ್ಮಾನ್, ಶಾರುಖ್ ಇದ್ದಾರೆಂದರೆ ಸಾಕು ಸಿನಿಮಾ ಸುಲಭವಾಗಿ ನೂರಾರು ಕೋಟಿ ಗಳಿಕೆ ಮಾಡಿಬಿಡುತ್ತದೆ. ಸಿನಿಮಾ ತುಸುವೇ ಚೆನ್ನಾಗಿದ್ದರೂ ಸಾವಿರ ಕೋಟಿ ಗಳಿಕೆ ದಾಟುತ್ತದೆ.
ಆದರೆ ಈ ಮೂವರ ಒಂದು ವಿಶೇಷತೆಯೆಂದರೆ ಈ ಮೂವರು ಒಟ್ಟಿಗೆ ಒಂದೇ ಸಿನಿಮಾನಲ್ಲಿ ಈ ವರೆಗೆ ನಟಿಸಿಲ್ಲ. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಕೆಲವಾರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಪರಸ್ಪರರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಅವರುಗಳು ‘ಅಂದಾಜ್ ಅಪ್ನ ಅಪ್ನ’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದು, ಆ ಸಿನಿಮಾ ಕಲ್ಟ್ ಸಿನಿಮಾ ಎನಿಸಿಕೊಂಡಿದೆ. ಆದರೆ ಈ ವರೆಗೆ ಶಾರುಖ್ ಖಾನ್ ಮತ್ತು ಆಮಿರ್ ಖಾನ್ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಿಲ್ಲ. ಆದರೆ ಈಗ ಆ ಸಮಯ ಬಂದಂತಿದೆ.
ಶಾರುಖ್, ಸಲ್ಮಾನ್ ಹಾಗೂ ಆಮಿರ್ ಅನ್ನು ಒಂದೇ ಸಿನಿಮಾನಲ್ಲಿ ನಟಿಸುವಂತೆ ಮಾಡಬೇಕೆಂದರೆ ಅದು ಸಾಮಾನ್ಯ ಕೆಲಸವಲ್ಲ, ಆ ಕೆಲಸ ಮಾಡುವವಷ್ಟರಲ್ಲಿ ನಿರ್ಮಾಪಕರ ಮನೆ, ಆಸ್ತಿ ಮಾರಾಟವಾಗಿ ಬೆತ್ತಲಾಗಿ ನಿಲ್ಲಬೇಕಾಗುತ್ತದೆ ಎಂದು ಹಿಂದೊಮ್ಮೆ ತಮಾಷೆಯಾಗಿ ಶಾರುಖ್ ಖಾನ್ ಹೇಳಿದ್ದರು. ಆದರೆ ಈಗದು ನಿಜವಾಗುವಂತಿದೆ. ಸ್ವತಃ ಶಾರುಖ್, ಸಲ್ಮಾನ್ ಹಾಗೂ ಆಮಿರ್ ಅವರುಗಳೇ ಒಟ್ಟಿಗೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರಂತೆ.
ಇದನ್ನೂ ಓದಿ:‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ: ಲೈವ್ ಇಲ್ಲಿ ವೀಕ್ಷಿಸಿ
ಈ ಬಗ್ಗೆ ಆಮಿರ್ ಖಾನ್, ಸಂದರ್ಶನವೊಂದರಲ್ಲಿ ಮಾತನಾಡಿದ್ದು, ‘ಶಾರುಖ್, ಸಲ್ಮಾನ್ ಹಾಗೂ ನಾನು ಒಟ್ಟಿಗೆ ನಟಿಸಬೇಕು, ಇದು ನಮ್ಮ ಆಸೆ. ಆದರೆ ಸರಿಯಾದ ಚಿತ್ರಕತೆ, ಸರಿಯಾದ ಸಮಯವೊಂದು ಕೂಡಿಬಂದರೆ ನಾವು ಒಟ್ಟಿಗೆ ನಟಿಸಲಿದ್ದೇವೆ’ ಎಂದಿದ್ದಾರೆ. ಶಾರುಖ್-ಸಲ್ಮಾನ್, ಪರಸ್ಪರರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುತ್ತಾರೆ. ಆದರೆ ಆಮಿರ್ ಖಾನ್, ಯಾರ ಸಿನಿಮಾಗಳಲ್ಲಿಯೂ ಅತಿಥಿ ಪಾತ್ರಗಳಲ್ಲಿ ನಟಿಸುವುದಿಲ್ಲ. ಆದರೆ ಇದೀಗ ಅವರು ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು, ಇನ್ನು ಮುಂದೆ ಶಾರುಖ್-ಸಲ್ಮಾನ್ ಸಿನಿಮಾನಲ್ಲಿಯೂ ನಟಿಸುವ ಸಾಧ್ಯತೆ ಇದೆ.
ಇದರ ಜೊತೆಗೆ ಆಮಿರ್ ಖಾನ್ ಅವರು ಸಲ್ಮಾನ್ ಖಾನ್ ಜೊತೆಗೆ ‘ಅಂದಾಜ್ ಅಪ್ನ ಅಪ್ನ 2’ ಸಿನಿಮಾನಲ್ಲಿ ನಟಿಸಲಿರುವುದಾಗಿ ಖಾತ್ರಿ ಪಡಿಸಿದ್ದಾರೆ. ‘ನಿರ್ದೇಶಕ ರಾಜ್ ಸಂತೋಷಿ ‘ಅಂದಾಜ್ ಅಪ್ನ ಅಪ್ನ 2’ ಸಿನಿಮಾದ ಚಿತ್ರಕತೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರಕತೆ ಚೆನ್ನಾಗಿ ಮೂಡಿ ಬಂದರೆ, ಇಬ್ಬರಿಗೂ ಒಪ್ಪಿಗೆ ಆದರೆ ಖಂಡಿತ ನಟಿಸುತ್ತೇವೆ’ ಎಂದಿದ್ದಾರೆ ಆಮಿರ್ ಖಾನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ