ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಶಾಸಕ ಬಿ.ಆರ್.ಪಾಟೀಲ್ ಅವರು ಈ ಬಗ್ಗೆ ನಿಖರ ಮಾಹಿತಿ ನೀಡಲಿ ಎಂದು ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಕೊಪ್ಪಳ (ಜೂ.23): ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಶಾಸಕ ಬಿ.ಆರ್.ಪಾಟೀಲ್ ಅವರು ಈ ಬಗ್ಗೆ ನಿಖರ ಮಾಹಿತಿ ನೀಡಲಿ ಎಂದು ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ಕೊಪ್ಪಳದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿ.ಆರ್.ಪಾಟೀಲ್ ಆರೋಪ ಕುರಿತು ಪ್ರತಿಕ್ರಿಯಿಸಿ, ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಸಂಬಂಧಪಟ್ಟ ಸಚಿವರಿಗೆ ಅವರು ಮಾಹಿತಿ ನೀಡಲಿ. ಖಂಡಿತವಾಗಿಯೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ತಪ್ಪು ಯಾರೇ ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಆನೆಗೊಂದಿ ಭಾಗದಲ್ಲಿ ಡ್ರಗ್ಸ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ಪರಿಗಣಿಸಿ, ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ಹಾಗೂ ಅಕ್ರಮ ಮದ್ಯ ಜೋರಾಗಿದ್ದರೆ ಕ್ರಮ ವಹಿಸಲು ಪೊಲೀಸರಿಗೆ ಸೂಚಿಸುತ್ತೇನೆ ಎಂದರು. ಅಕ್ರಮ ಗಣಿಗಾರಿಕೆ ಕುರಿತು ಹಿರಿಯರಾದ ಎಚ್.ಕೆ.ಪಾಟೀಲ್ ಅವರು ಕಳಕಳಿಯಿಂದ ಸರ್ಕಾರಕ್ಕೆ ಪತ್ರ ಬರೆದು ಸಲಹೆ ನೀಡಿದ್ದಾರೆ. ಅದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಗಣಿ ಅಕ್ರಮದಲ್ಲಿ ಸುಮಾರು ಒಂದೂವರೆ ಲಕ್ಷ ಕೋಟಿ ರುಪಾಯಿ ಸಂಪತ್ತಿನ ಅಕ್ರಮವಾಗಿದೆ.
ಇದೆಲ್ಲವನ್ನು ವಶಕ್ಕೆ ತೆಗೆದುಕೊಳ್ಳಬೇಕು ಎನ್ನುವುದು ಅವರ ಕಳಕಳಿ. ಆದರೆ, ಗಣಿ ಅಕ್ರಮದ ಕುರಿತು ತಕ್ಷಣ ಕ್ರಮ ವಹಿಸಲು ಸಾಧ್ಯವಿಲ್ಲ. 200-300 ಪ್ರಕರಣಗಳು ನ್ಯಾಯಾಲಯದಲ್ಲಿಯೇ ಇವೆ. ನ್ಯಾಯಾಲಯದಲ್ಲಿ ಇರುವ ಪ್ರಕರಣಗಳಲ್ಲಿ ಸರ್ಕಾರ ಏನು ಮಾಡಲೂ ಆಗುವುದಿಲ್ಲ. ಆದರೂ ಸರ್ಕಾರ ಮುತುವರ್ಜಿ ವಹಿಸಿ ಸಚಿವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದರು. ಪೊಲೀಸ್ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವುದು ನಮಗೂ ಗೊತ್ತಿದೆ. ಪಿಎಸ್‌ಐ ಹಗರಣದಿಂದ ನೇಮಕಾತಿ ಪ್ರಕ್ರಿಯೆಗೆ ದೊಡ್ಡ ಸಮಸ್ಯೆಯಾಯಿತು. ಈಗ ಅದೆಲ್ಲವೂ ಸರಿಯಾಗುತ್ತಿದೆ ಎಂದರು.
‘ಕೋಮು ಸೂಕ್ಷ್ಮ ಪ್ರದೇಶ’ ಬಿಂಬಿಸಲು ಕಾರ್ಯಪಡೆ ಅಲ್ಲ: ಕರಾವಳಿ ಭಾಗದಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳ ಆಧಾರದಲ್ಲಿ ಕೋಮು ಸಂಘರ್ಷಗಳ ತಡೆಗಾಗಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಯಾವುದೇ ಜಿಲ್ಲೆಯನ್ನು ಕೋಮುಸೂಕ್ಷ್ಮ ಪ್ರದೇಶ ಎಂದು ಬಿಂಬಿಸಲು ನಾವು ಈ ಕಾರ್ಯಪಡೆ ರಚಿಸಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.ವಿಶೇಷ ಕಾರ್ಯಪಡೆಗೆ ಉಡುಪಿ ಜಿಲ್ಲೆಯ ಸೇರ್ಪಡೆ ವಿರೋಧಿಸಿ ಶಾಸಕ ಯಶ್ಪಾಲ್ ಸುವರ್ಣ ಅವರ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ಪಡೆಯ ಉಪಯೋಗ ಆಗದಿರುವಂತೆ ನೋಡಿಕೊಳ್ಳಿ ಎಂದು ಸಾರ್ವಜನಿಕರಿಗೂ ನಾನು ಮನವಿ ಮಾಡಿದ್ದೇನೆ. ಕೋಮುವಾದಕ್ಕೆ ಸಂಬಂಧಪಟ್ಟ ಘಟನೆ ನಡೆಯದಿದ್ದಲ್ಲಿ ಈ ಕಾರ್ಯಪಡೆ ಅಗತ್ಯ ಬರುವುದಿಲ್ಲ. ಇದರ ಅಗತ್ಯ ಬರದಿದ್ದಲ್ಲಿ ಕೋಮುವಾದ ಸಂಪೂರ್ಣ ಹೋಗಿದೆ ಎಂಬ ಅರ್ಥವೇ ಬರುತ್ತದೆ ಎಂದರು.
ಈ ಕಾರ್ಯಪಡೆಯಿಂದ ಜಿಲ್ಲೆಯ ಘನತೆಗೆ ಧಕ್ಕೆ ಬರುವ ಪ್ರಮೇಯವೇ ಇಲ್ಲ. ನಕ್ಸಲರ ನಿಗ್ರಹಕ್ಕಾಗಿ ಕಾರ್ಕಳ ಭಾಗದಲ್ಲಿ ಎಎನ್‌ಎಫ್ ಮುಖ್ಯ ಕಚೇರಿ ಮಾಡಿದ್ದೆವು. ಎಎನ್‌ಎಫ್‌ನಿಂದ ಉಡುಪಿಯ ಘನತೆ ಕಡಿಮೆ ಆಗಿದೆಯಾ ಎಂದು ಪ್ರಶ್ನಿಸಿದ ಅವರು, ನಕ್ಸಲರಿಂದ ಬಹಳಷ್ಟು ಜನರ ಹತ್ಯೆ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಉಡುಪಿಯಲ್ಲಿ ಎಎನ್‌ಎಫ್ ಕಚೇರಿ ಆರಂಭಿಸಿದ್ದೆವು. ಇದರಿಂದ ಉಡುಪಿ ಜನಸಮುದಾಯದ ಘನತೆಗೆ ಧಕ್ಕೆ ಆಗಿಲ್ಲ ಎಂದರು.ಕಮಿಷನರ್ ಅವರು ಕಾರ್ಯಪಡೆಯ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ನೋಡಿಕೊಳ್ತಾರೆ. ಐಜಿ ಅವರು ಮೂರು ಜಿಲ್ಲೆಗಳನ್ನು ನಿರ್ವಹಣೆ ಮಾಡುತ್ತಾರೆ. ಏನಾದರೂ ಸಮಸ್ಯೆಯಾದರೆ ಈ ಕಾರ್ಯಪಡೆ ಕಾರ್ಯಾಚರಣೆ ಮಾಡಲಿದೆ ಎಂದು ಹೇಳಿದರು.