ಶಾಸಕ ಬಿ.ಆರ್. ಪಾಟೀಲ್ ಅವರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸಮಸ್ಯೆಗಳಿದ್ದರೆ ಸಿಎಂ ಬಳಿ ಚರ್ಚಿಸಬೇಕಿತ್ತು ಎಂದು ಅವರು ಹೇಳಿದರು.
ಕಲಬುರಗಿ (ಜೂ.25) ಶಾಸಕ ಬಿ.ಆರ್.ಪಾಟೀಲ್ ಅವರ ಬಹಿರಂಗ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಅವರಿಗೆ ಸಮಸ್ಯೆಗಳಿದ್ದರೆ ಸಿಎಂ ಬಳಿ ಚರ್ಚಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರ ಜತೆ ಮಾತನಾಡುವ ವೇಳೆ, ಬಿ.ಆರ್.ಪಾಟೀಲ್ ಅವರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಅವರು ಹಿರಿಯರು. ಅವರ ಹೋರಾಟ ಮನೋಭಾವ ಹಾಗೂ ಸಿದ್ಧಾಂತಗಳ ಬಗ್ಗೆ ಗೌರವವಿದೆ. ಏನಾದರೂ ಸಮಸ್ಯೆಗಳಿದ್ದರೆ ಸಿಎಂ, ಡಿಸಿಎಂ ಹಾಗೂ ಖರ್ಗೆ ಸಾಹೇಬರ ಬಳಿ ಚರ್ಚಿಸಬೇಕಿತ್ತು. ಹೀಗೆ ಬಹಿರಂಗವಾಗಿ ಹೇಳುವುದರಿಂದ ಸರ್ಕಾರಕ್ಕೆ ಮುಜುಗರವಾಗತ್ತದೆ’ ಎಂದರು.
‘ಈಗ ಸಿಎಂ ಪಾಟೀಲ್ ಅವರನ್ನು ಮಾತುಕತೆಗೆ ಕರೆದಿದ್ದಾರೆ. ಅಲ್ಲಿ ಏನು ಚರ್ಚೆ ನಡೆಯುತ್ತದೆಯೋ ನೋಡೋಣ’ ಎಂದರು. ಶಾಸಕ ರಾಜು ಕಾಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದ ಪ್ರತಿಯೊಬ್ಬ ಶಾಸಕರು ಹೆಚ್ಚಿನ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ನಿರೀಕ್ಷೆ ಮಾಡುತ್ತಾರೆ. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಫೋನ್‌ನಲ್ಲಿ ನಡೆದ ಸಂಭಾಷಣೆಯಲ್ಲಿ ಅಧಿಕಾರಿ ಸ್ಪಷ್ಟವಾಗಿ ಪಾಟೀಲ್ ಅವರ ಆರೋಪಗಳನ್ನು ಅಲ್ಲಗಳೆದು ಅಂತಹ ಯಾವುದಾದರೂ ಲೋಪ ಆಗಿದ್ದಕ್ಕೆ ಆಧಾರ ಕೊಟ್ಟರೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಅದನ್ನು ಹಿರಿಯರಾದ ಪಾಟೀಲರು ಸಿಎಂ ಅವರ ಬಳಿ ಚರ್ಚಿಸಬೇಕಿತ್ತು.
ಎನ್‌ಡಿಎ ಅಲ್ಲ, ನೋ ಡಾಟಾ ಅವೈಲೇಬಲ್ ಸರ್ಕಾರ:
ತಮ್ಮ ಅಮೆರಿಕ ಪ್ರವಾಸಕ್ಕೆ ಕೇಂದ್ರ ಅನುಮತಿ ನಿರಾಕರಿಸಿದ್ದು ರಾಜಕೀಯ ಕಾರಣವೇ ಎಂಬ ಪ್ರಶ್ನೆಗೆ, ರಾಜಕೀಯವಲ್ಲದೆ ಮತ್ತೇನು? ಕೇಂದ್ರ ಸರ್ಕಾರದ ಅನುಮತಿ ನಿರಾಕರಣೆಯಿಂದಾಗಿ ರಾಜ್ಯಕ್ಕೆ ಬರಬೇಕಿದ್ದ ನಿರೀಕ್ಷಿತ 15,000 ಕೋಟಿ ರೂ.ಬಂಡವಾಳ ನಿಂತು ಹೋಗಿದೆ. ಜೊತೆಗೆ, ಕನಿಷ್ಠ ಮೂರು ಸಾವಿರ ಜನರಿಗೆ ಉದ್ಯೋಗ ಕೈತಪ್ಪಿದೆ. ಈ ಹಿಂದೆ ನಾನು ಹಾಗೂ ಸಚಿವ ಎಂ.ಬಿ.ಪಾಟೀಲ್ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದರಿಂದ 32,000 ಕೋಟಿ ರೂ. ಬಂಡವಾಳ ಹೂಡಿಕೆಯ ಒಪ್ಪಂದವಾಗಿದ್ದು, ಸುಮಾರು 21,000 ಕೋಟಿಗೂ ಅಧಿಕ ಬಂಡವಾಳ ಹೂಡಲಾಗಿತ್ತು. ಇದರಿಂದ 18,000 ರಿಂದ 20,000 ಜನರಿಗೆ ಉದ್ಯೋಗ ದೊರಕಿತ್ತು ಎಂದು ನೆನಪಿಸಿಕೊಂಡರು.
ಕೇಂದ್ರ ವಿದೇಶಾಂಗ ಸಚಿವರಿಗೆ ಅನುಮತಿ ನಿರಾಕರಣೆಗೆ ವಿವರಣೆ ನೀಡುವಂತೆ ಪತ್ರ ಬರೆಯಲಾಗಿದೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ. ಅವರು ನಮ್ಮ ಯಾವ ಪತ್ರಕ್ಕೂ ಉತ್ತರ ಕೊಟ್ಟಿಲ್ಲ. ಕೇಂದ್ರದಲ್ಲಿರುವುದು ಎನ್‌ಡಿಎ ಸರ್ಕಾರವಲ್ಲ, ನೋ ಡಾಟಾ ಅವೈಲೇಬಲ್ ಸರ್ಕಾರ ಎಂದು ಟೀಕಿಸಿದರು. ಈಗ ಅಮೆರಿಕಗೆ ಹೋಗಬಹುದೇ ಎಂದು ಕೇಳಲಾದ ಪ್ರಶ್ನೆಗೆ, ಟ್ರೇನ್ ಹೋದ ಮೇಲೆ ಟಿಕೇಟ್ ತಗೊಂಡು ಪ್ರಯೋಜನವೇನು? ಎಂದರು.