ಡ್ಯಾನ್ಸ್ ಕಾರ್ಯಕ್ರಮದ ಹೆಸರಲ್ಲಿ ವಂಚನೆ
ಬೆಂಗಳೂರು, ಜೂನ್ 23: ತಮ್ಮ ಮಕ್ಕಳು ದೊಡ್ಡ ಸ್ಟೇಜ್ ಮೇಲೆ ಕಾಣಿಸಿಕೊಳ್ಳಬೇಕು ಅನ್ನೋದು ಎಲ್ಲಾ ಪೋಷಕರ ಆಸೆಯಾಗಿರುತ್ತೆ. ಆದರೆ ಪೋಷಕರ ಕನಸುಗಳೆ ಹಣ ಮಾಡುವವರಿಗೆ ಬಂಡವಾಳವಾಗಿದೆ. ವೇದಿಕೆ ಮೇಲೆ ಡ್ಯಾನ್ಸ್ (Dance) ಮಾಡಲು ಅವಕಾಶ ಕೊಡುವುದಾಗಿ ಸಾವಿರಾರು ರೂ ಹಣ ಪಡೆದ ಓರ್ವ ಮಹಿಳೆ (woman), ಅವಕಾಶ ಕೊಡದೆ ಯಾಮಾರಿಸಿರುವಂತಹ ಘಟನೆ ನಡೆದಿದೆ. ತಡರಾತ್ರಿ ಬೆಂಗಳೂರಿನ ಟೌನ್ಹಾಲ್ ಮುಂದೆ ಹೈಡ್ರಾಮಾವೇ ನಡೆಯಿತು.
ಅಷ್ಟಕ್ಕೂ ಇಲ್ಲಿ ಆಗಿದ್ದಿಷ್ಟೇ, ಹೀನಾ ಜೈನ್ ಎಂಬ ಮಹಿಳೆ ನಿತ್ಯಾಂಗನ ಅಕಾಡೆಮಿ ಹೆಸರಿನಲ್ಲಿ ಡ್ಯಾನ್ಸ್ ಈವೆಂಟ್ ನಡೆಸುತ್ತಿದ್ದಾರೆ. ಈ ಬಾರಿ ಬಿಗ್ಗೆಸ್ಟ್ ತಾಂಡವ ನೃತ್ಯ ಹೆಸರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಟೌನ್ ಹಾಲ್‌ನಲ್ಲಿ ಭಾನುವಾರ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟಿ ಜಯಪ್ರದಾರನ್ನ ಕರೆಸಲಾಗಿತ್ತು. ನೀವು ಜಯಪ್ರದಾ ಎದುರಲ್ಲಿ ಡ್ಯಾನ್ಸ್ ಮಾಡುತ್ತೀರಿ, ಅವರಿಂದ ಅವಾರ್ಡ್ ಕೊಡಿಸುತ್ತೇವೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಕೊಟ್ಟಿದ್ದರು.
ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮತ್ತಿಬ್ಬರು ಸಾವು: ಒಂದೇ ತಿಂಗಳಲ್ಲಿ 12 ಜನ ಬಲಿ
ಇದನ್ನೂ ಓದಿ
ಇದನ್ನ ನಂಬಿದ ಡ್ಯಾನ್ಸ್ ಅಕಾಡೆಮಿಯವರು 50ರಿಂದ 60 ಸಾವಿರ ರೂ ಹಣ ಕೊಟ್ಟು ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಆದರೆ ಭಾನುವಾರ (ಜೂನ್ 22) ಬೆಳಗ್ಗೆ 6 ಗಂಟೆಗೆ ಡ್ಯಾನ್ಸ್ ಮಾಡಲು ಬಂದ ಮಕ್ಕಳು ರಾತ್ರಿ ಹನ್ನೆರಡು ಗಂಟೆ ಆದರೂ ಕುಳಿತಲ್ಲೆ ಕುಳಿತಿದ್ದರು. ಡ್ಯಾನ್ಸ್ ಮಾಡಿಸುವುದು ಬಿಡಿ, ಊಟವನ್ನೂ ಕೊಟ್ಟಿಲ್ವಂತೆ. ಹಾಗೇ ಕಾರ್ಯಕ್ರಮವನ್ನೂ ಮುಗಿಸಿಬಿಟ್ಟಿದ್ದರು. ಇದ್ರಿಂದ ರೊಚ್ಚಿಗೆದ್ದ ಪೋಷಕರು ಮತ್ತು ಡ್ಯಾನ್ಸ್ ಟೀಚರ್ಸ್ ಕಾರ್ಯಕ್ರಮ ಆಯೋಜಕಿ ಹೀನಾ ಜೈನ್‌ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣ ಖಾಲಿಯಾಗಿದೆ ಎಂಬ ಹೀನಾ ಜೈನ್
ಜಯಪ್ರದಾ ಎದುರು ಡ್ಯಾನ್ಸ್ ಮಾಡಬೇಕು ಅಂತ ಮಕ್ಕಳು ತಾಂಡವ ನೃತ್ಯದ ವೇಶ ತೊಟ್ಟು ರಾತ್ರಿ 12 ರ ವರೆಗೂ ಕಾದು ಸುಸ್ತಾಗಿದ್ದರು. ಪೋಷಕರ ತರಾಟೆ ಬಳಿಕ ಮಾತನಾಡಿದ ಹೀನಾ ಜೈನ್, ಸಮಯದ ಅಭಾವದ ಸಬೂಬು ನೀಡಿದ್ದಾರೆ. ಅಷ್ಟೇ ಅಲ್ಲ, ಹಣ ಖಾಲಿಯಾಗಿದೆ. ಒಂದು ತಿಂಗಳು ಸಮಯ ಕೊಡಿ, ವಾಪಸ್ ಕೊಡುತ್ತೇನೆ ಅಂತಾ ಪೋಷಕರಿಗೆ ಮನವೊಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್ನಲ್ಲಿ ಸಿಲಿಕಾನ್ ಸಿಟಿ ಕೂಲ್ ಕೂಲ್
ಪೋಷಕರು ಮತ್ತು ಮಕ್ಕಳ ಕನಸನ್ನ ಈಕೆ ಬ್ಯುಸಿನೆಸ್ ಮಾಡಿಕೊಂಡರೆ, ಹಣ ಕೊಟ್ಟೊರು ನಿರಾಸೆಯಿಂದ ಮನೆ ಕಡೆ ಸಾಗಿದ್ದಾರೆ. ಹಣ ವಾಪಸ್ ಕೊಡದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಏನೇ ಆಗಲಿ, ನಮ್ಮ ಕನಸು ಈಡೇರಿಲ್ಲ. ಮಕ್ಕಳಾದರೂ ಸಾಧನೆ ಮಾಡಲಿ ಅಂತಾ ಎಷ್ಟು ಖರ್ಚಾದರೂ ಮಾಡಲು ತಯಾರಾಗುವ ಪೋಷಕರನ್ನೇ ಹೀಗೆ ಸಂಕಷ್ಟಕ್ಕೆ ಸಿಲುಕಿಸುವುದು ಎಷ್ಟು ಸರಿ.
ವರದಿ: ವಿಕಾಸ್, ಟಿವಿ9, ಬೆಂಗಳೂರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.