ಕಾಗೆ ಹೂಜಿಗೆ ಕಲ್ಲು ಹಾಕಿ ನೀರನ್ನು ಮೇಲಕ್ಕೆತ್ತಿ ಕುಡಿದಿರುವುದನ್ನು ಚಿಕ್ಕಮಕ್ಕಳು ಇರುವಾಗ ಕೇಳಿದ್ದೀರಿ, ಕೆಲ ವರ್ಷಗಳ ಹಿಂದೆ ರಿಯಲ್ ಆಗಿಯೇ ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿತ್ತು. ಆದರೆ ಇದೀಗ ಅತ್ಯಂತ ಕುತೂಹಲ ಎನ್ನುವಂಥ ಇನ್ನೊಂದು ವಿಡಿಯೋ ವೈರಲ್ ಆಗಿದೆ.
ಒಂದೊಂದು ಪ್ರಾಣಿ, ಪಕ್ಷಿಯಿಂದ ಒಂದೊಂದು ಗುಣ ಕಲಿಯಬೇಕು ಎನ್ನುವ ಮಾತಿಗೆ. ಕಾಗೆಯ ವಿಷಯಕ್ಕೆ ಬಂದರೆ ಅದು ಜಾಣ್ಮೆ ಎನ್ನಲಾಗುತ್ತದೆ. ಕೂಡಿ ಬಾಳುವುದಕ್ಕೂ ಕಾಗೆ ಫೇಮಸ್ಸು. ನೀವು ಏನೇ ಹಾಕಿದರೂ ಅದು ಉಳಿದ ಪಕ್ಷಿಗಳಂತೆ ಸಿಕ್ಕಿದ್ದೇ ಲಾಭ ಎಂದು ತಿನ್ನುವುದಿಲ್ಲ. ತನ್ನ ಬಳಗದವರನ್ನೆಲ್ಲಾ ಕರೆದು ತಿನ್ನುತ್ತದೆ. ಅಂಥ ನಿಷ್ಠಾವಂತ ಪಕ್ಷಿ ಕಾಗೆ. ಆದರೆ ಇದಕ್ಕೆ ಇನ್ನೊಂದು ಹೆಸರೇ ಜಾಣಕಾಗೆ ಎಂದು. ಚಿಕ್ಕ ವಯಸ್ಸಿನಲ್ಲಿ, ಹೂಜಿಯ ತಳದಲ್ಲಿ ಇದ್ದ ನೀರನ್ನು ಕಾಗೆಯೊಂದು ಕಲ್ಲು ಹಾಕಿ ಮೇಲೆ ಮೇಲೆ ತಂದು ಕುಡಿಯಿತು ಎಂದು ಓದಿದಾಗ ವ್ಹಾವ್ಹಾ ಎಂಥ ಅದ್ಭುತ ಕಲ್ಪನೆ ಎಂದುಕೊಂಡಿದ್ದಾಯ್ತು. ಆದರೆ ಕೆಲ ವರ್ಷಗಳ ಹಿಂದೆ ವೈರಲ್ ಆಗಿದ್ದ ವಿಡಿಯೋದಲ್ಲಿ ಕಾಗೆಯೊಂದು ನಿಜಕ್ಕೂ ಹಾಗೆಯೇ ಮಾಡಿತ್ತು. ಆದರೆ ಕಾಗೆಯ ಜಾಣ್ಮೆ ಅಲ್ಲಿಗೇ ಮುಗಿಯುವುದಿಲ್ಲ. ಅಂಗಳದಲ್ಲಿ ಹರಡಿಟ್ಟ ಹಪ್ಪಳವನ್ನು ಯಾರ ಕಣ್ಣಿಗೂ ಬೀಳದಂತೆ ಕಾಗೆ ಹಾರಿಸುತ್ತದೆ. ಕಾಗೆಯ ಜಾಣತನದ ಬಗ್ಗೆ ಇಸೋಪನ ಕತೆಗಳಲ್ಲೂ ಹೇಳಲಾಗಿದೆ. ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿ ಬರುತ್ತಾರೆ ಎಂದು ನಮ್ಮ ಹಿರಿಯರು ಇಂದಿಗೂ ನಂಬುತ್ತಾರೆ.
ಅವೆಲ್ಲವೂ ಸರಿ. ಈಗ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿದರೆ ನೀವು ಅಬ್ಬಬ್ಬಾ ಇದೇನು ಎಐ ವಿಡಿಯೋನಾ ಎನ್ನಬೇಕು. ಏಕೆಂದ್ರೆ ಕೃತಕ ಬುದ್ಧಿಮತ್ತೆ ಬಂದ ಮೇಲೆ ಯಾವುದು ರಿಯಲು, ಯಾವುದು ರೀಲು ಎನ್ನುವುದು ತಿಳಿಯುವುದೇ ಕಷ್ಟವಾಗಿದೆ. ಹಾಗೆಂದು ಇದು ಎಐ ಯ ವಿಡಿಯೋ ಅಲ್ಲ, ಬದಲಿಗೆ ನಿಜವಾಗಿರುವ ವಿಡಿಯೋ. ಕಾಗೆಯ ಬುದ್ಧಿಯನ್ನು ಈ ವಿಡಿಯೋ ನೋಡಿ ತಿಳಿದುಕೊಳ್ಳಬಹುದಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಕಾಗೆಗೆ ಕಾಯಿಯೊಂದು ಸಿಕ್ಕಿದೆ. ಅದನ್ನು ತುಂಡು ಮಾಡಲು ಅದಕ್ಕೆ ಸಾಧ್ಯವಾಗಲಿಲ್ಲ. ಅದನ್ನು ಅದು ಇಟ್ಟಿಗೆಯಿಂದ ತುಂಡು ಮಾಡಲು ನೋಡಿತು. ತನ್ನ ಬಲಿಷ್ಠವಾದ ಕೊಕ್ಕುಗಳಿಂದ ಇಟ್ಟಿಗೆಯನ್ನು ಅದರ ಮೇಲೆ ಇಟ್ಟಿತು. ಆದರೆ ಅದು ತುಂಡಾಗಲೇ ಇಲ್ಲ. ನಿಜಕ್ಕೂ ಕಾಗೆ ಅಷ್ಟು ಬಲಿಷ್ಠ ಇಟ್ಟಿಗೆ ಕೊಕ್ಕುಗಳಿಂದ ಎತ್ತಲು ಸಾಧ್ಯವೇ ಎನ್ನಿಸುವುದೂ ಉಂಟು.
ಕೊನೆಗೆ ಅದು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ, ಕಾಯಿಯನ್ನು ತೆಗೆದುಕೊಂಡು ಹೋಗಿ ರಸ್ತೆ ಮೇಲೆ ಇಟ್ಟಿತು. ಹಲವಾರು ಕಾರುಗಳು ರಸ್ತೆಯ ಮೇಲೆ ಹೋದರೂ ಆ ಕಾಯಿ ಒಡೆಯಲೇ ಇಲ್ಲ. ಆದರೆ ಕಾಗೆ ಮಾತ್ರ ಪ್ರಯತ್ನ ಬಿಡಲಿಲ್ಲ. ಕೊನೆಗೆ ಒಂದೆರಡು ಕಾರುಗಳು ಅದರ ಮೇಲೆ ಹೋಗಿ ಅದು ಒಡೆದು ಹೋಯಿತು. ಕೂಡಲೇ ಕಾಗೆ ಅದನ್ನು ತಂದು ತಿಂದಿತು. ಇದನ್ನು ನೋಡಿದರೆ ಅಬ್ಬಬ್ಬಾ ಅಸಾಧ್ಯ ಕಾಗೆ ಎನ್ನದೇ ಇರಲಾರಿರಿ.
ಅಷ್ಟಕ್ಕೂ ಪ್ರಕೃತಿಯೇ ವಿಸ್ಮಯ. ಯಾರ ಊಹೆಗೂ ನಿಲುಕದ ಅದೆಷ್ಟೋ ಘಟನೆಗಳು ದಿನನಿತ್ಯ ಈ ಪ್ರಕೃತಿಯಲ್ಲಿ ಆಗುತ್ತಲೇ ಇರುತ್ತವೆ. ವಿಜ್ಞಾನಕ್ಕೇ ಸವಾಲೆಸೆಯುವ, ಯಾವ ವಿಜ್ಞಾನಿಗಳಿಂದಲೂ ಕಂಡು ಹಿಡಿಯಲು ಸಾಧ್ಯವಾಗದ ಅದೆಷ್ಟೋ ವಿಚಿತ್ರಗಳಿವೆ. ಮನುಷ್ಯ ತಾನು ಎಷ್ಟೇ ಬುದ್ಧಿವಂತ ಎಂದುಕೊಂಡರೂ, ಯುಗಗಳು ಎಷ್ಟೇ ಬದಲಾದರೂ ಪ್ರಕೃತಿಯ ಮುಂದೆ ಎಲ್ಲವೂ ಗೌಣವೇ. ಅದರಲ್ಲಿಯೂ ಪ್ರಾಣಿ- ಪಕ್ಷಿಗಳ ಪ್ರಪಂಚದ ಬಗ್ಗೆ ತಿಳಿದಷ್ಟೂ ಕಡಿಮೆಯೇ. ಈಗ ಎಐ ಯುಗ ಆಗಿರುವ ಕಾರಣ ಏನನ್ನೋ ಸೃಷ್ಟಿಮಾಡುತ್ತಾರೆ. ಆದರೆ ನಿಜಕ್ಕೂ ಈ ಪ್ರಕೃತಿಯ ಬಗ್ಗೆ ಎಐಯಲ್ಲಿ ಕೂಡ ಮಾಡಲಾಗದಷ್ಟು ದೊಡ್ಡ ವಿಚಿತ್ರಗಳೇ ಇವೆ ಎನ್ನುವುದಂತೂ ಸತ್ಯ.