ಮಂಗಳೂರು: ಅಪಾಯ ಆಹ್ವಾನಿಸುವ ರನ್​ವೇ, ವಿಮಾನ ದುರಂತ ಸಂಭವಿಸಿ 15 ವರ್ಷವಾದರೂ ಈಡೇರಿಲ್ಲ ವಿಸ್ತರಣೆ ಬೇಡಿಕೆ

ಮಂಗಳೂರು: ಅಪಾಯ ಆಹ್ವಾನಿಸುವ ರನ್​ವೇ, ವಿಮಾನ ದುರಂತ ಸಂಭವಿಸಿ 15 ವರ್ಷವಾದರೂ ಈಡೇರಿಲ್ಲ ವಿಸ್ತರಣೆ ಬೇಡಿಕೆ


ಮಂಗಳೂರು, ಜೂನ್ 23: ಅದು 2010 ಮೇ 22ರ ಮುಂಜಾನೆ, ಗಲ್ಫ್‌ನಿಂದ ಮಂಗಳೂರಿಗೆ ಹಾರಿಬಂದ ವಿಮಾನ ಲ್ಯಾಂಡಿಂಗ್‌ ವೇಳೆ ಬಜ್ಪೆಯ ಕಿರಿದಾದ ರನ್‌ ವೇಯಲ್ಲಿ ಜಾರಿ ಕಣಿವೆಗೆ ಬಿದ್ದು ಭಯಾನಕ ದುರಂತ ಸಂಭವಿಸಿತ್ತು. 158 ಪ್ರಯಾಣಿಕರು ಸಜೀವ ದಹನವಾಗಿದ್ದರು. ಅಂದಿನಿಂದ ಶುರುವಾದ ಮಂಗಳೂರು ವಿಮಾನ ನಿಲ್ದಾಣದ (Mangaluru Airport) ರನ್‌ ವೇ ವಿಸ್ತರಣೆಯ ಕೂಗು ಇನ್ನೂ ಮೊಳಗುತ್ತಲೇ ಇದೆ. ಇದೀಗ ಅಹಮದಾಬಾದ್ ವಿಮಾನ ದುರಂತ ಬಳಿಕ ಮತ್ತೆ ರನ್​​ವೇ ವಿಸ್ತರಣೆಯ‌ ಕೂಗು ಜೋರಾಗಿದೆ.

ಮಂಗಳೂರು ವಿಮಾನ ನಿಲ್ದಾಣದ ರನ್​ವೇ ಪ್ರಸ್ತುತ 8,038 ಅಡಿ ಉದ್ದವಿದೆ. ದುರಂತ ನಡೆದ ಬಳಿಕ ಇದನ್ನು 11,600 ಅಡಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಗೆ 280 ಎಕರೆ ಜಾಗ ಹಾಗೂ 1,120 ಕೋಟಿ ರೂ. ವೆಚ್ಚ ಎಂದು ಅಂದಾಜಿಸಲಾಗಿತ್ತು. ಭೂ ಸ್ವಾಧೀನಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಆದರೆ, ಅಧಿಕ ಮೊತ್ತ ಅಗತ್ಯವಿದ್ದ ಕಾರಣ ವಿಸ್ತರಣೆಯನ್ನು 10,500 ಅಡಿಗೆ ಇಳಿಸಲಾಯಿತು. ಅದೂ ಹೊರೆ ಎಂದುಕೊಂಡು ಸದ್ಯ 32.97 ಎಕರೆ ಭೂ ಸ್ವಾಧೀನಕ್ಕೆ ಮಿತಗೊಳಿಸಲಾಗಿದೆ. ಆದರೆ ಸ್ವಾಧೀನ ಪ್ರಕ್ರಿಯೆಗಳು ಇನ್ನು ನಡೆದಿಲ್ಲ.

ಟೇಬಲ್ ಟಾಪ್ ರನ್​ವೇ ಹೊಂದಿರುವ ಮಂಗಳೂರು ಏರ್​ಪೋರ್ಟ್

Mangalore Airport

ಇದನ್ನೂ ಓದಿ

ಮಂಗಳೂರು ವಿಮಾನ ನಿಲ್ದಾಣ ಬೆಟ್ಟದ ಮೇಲಿದ್ದು, ಟೇಬಲ್ ಟಾಪ್ ರನ್​ವೇ ಹೊಂದಿದೆ. ಇದು ಅಪಾಯಕಾರಿ ಎಂಬ ಅಭಿಪ್ರಾಯ ಇದೆ. ಭಾರಿ ಮಳೆಯ ಸಂದರ್ಭದಲ್ಲಿ ಪೈಲೆಟ್‌ಗಳಿಗೆ ಸರಿಯಾಗಿ ಕಾಣುವುದಿಲ್ಲ. ಹೀಗಾಗಿ ಕೆಲವೊಂದು ಸಂದರ್ಭದಲ್ಲಿ ಮತ್ತೆ ಟೇಕಾಫ್ ಮಾಡಿ ಲ್ಯಾಂಡ್ ಮಾಡಿದ ಸನ್ನಿವೇಶವೂ ಇದೆ.

ಭೂಸ್ವಾಧೀನ ಕೆಲಸ ನಮ್ಮದಲ್ಲವೆಂದ ರಾಜ್ಯ ಸರ್ಕಾರ

ಸದ್ಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಿದ ಕಾರಣ, ಭೂಸ್ವಾಧೀನ ಕಾರ್ಯ ನಮ್ಮದಲ್ಲ ಎಂದು ರಾಜ್ಯ ಸರಕಾರ ಹೇಳಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ ಭೂ ಸ್ವಾಧೀನಕ್ಕೆ 50 ಕೋಟಿ ರೂ. ನೀಡುವುದಾಗಿ ವಿಮಾನ ನಿಲ್ದಾಣ ನಿರ್ವಹಣೆ ಮಾಡುತ್ತಿರುವ ಕಂಪೆನಿ ಹೇಳಿದೆ ಎನ್ನಲಾಗಿದೆ. ಈ ಬಗ್ಗೆ ಪುತ್ತೂರು ಶಾಸಕ ಅಶೋಕ್ ರೈ ಸಹ ಕಳೆದ ಬಾರಿಯ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ, ರನ್​ವೇ ವಿಸ್ತರಣೆಗೆ ಒತ್ತಾಯಿಸಿದ್ದರು.

ಇದನ್ನೂ ಓದಿ: Plane Crash: ಅಹಮದಾಬಾದ್ ವಿಮಾನ ಅಪಘಾತದ ವೇಳೆ ಹಾಸ್ಟೆಲ್​ನಿಂದ ಹಾರಿದ ವೈದ್ಯಕೀಯ ವಿದ್ಯಾರ್ಥಿಗಳು; ಹೊಸ ವಿಡಿಯೋ ಇಲ್ಲಿದೆ

ಸದ್ಯ ರನ್​ವೇ ವಿಸ್ತರಣೆ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ. ಆದರೆ ಕೇಂದ್ರ, ರಾಜ್ಯ ಸರ್ಕಾರ ಈ ಬಗ್ಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಈ ಬಾರಿಯಾದರೂ ರನ್​ವೇ ವಿಸ್ತರಣೆ ಮಾಡಬೇಕಾಗಿದೆ. ಈ ಮೂಲಕ ಮಂಗಳೂರು ವಿಮಾನ ನಿಲ್ದಾಣವನ್ನು ಅವಲಂಬಿಸಿರುವ ಪ್ರಯಾಣಿಕರ ಆತಂಕವನ್ನು ‌ನಿವಾರಣೆ ಮಾಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:31 am, Mon, 23 June 25



Source link

Leave a Reply

Your email address will not be published. Required fields are marked *