ಮಂಗಳೂರು: ಒಂದೇ ಮನೆಯ 7 ದನ ಕರುಗಳು ನರಳಿ ನರಳಿ‌ ನಿಗೂಢ ಸಾವು

ಮಂಗಳೂರು: ಒಂದೇ ಮನೆಯ 7 ದನ ಕರುಗಳು ನರಳಿ ನರಳಿ‌ ನಿಗೂಢ ಸಾವು


ಮಂಗಳೂರು, ಜೂನ್​ 23: ಮಂಗಳೂರು (Mangaluru) ನಗರ ಹೊರವಲಯದ ನೀರು ಮಾರ್ಗ ಸಮೀಪದ ಕೆಲರಾಯಿ ಎಂಬಲ್ಲಿ ವಿಚಿತ್ರವಾದ ಘಟನೆಯೊಂದು ನಡೆಯುತ್ತಿದೆ. ಕಳೆದ 50 ವರ್ಷಗಳಿಂದ ಹೈನುಗಾರಿಕೆಯನ್ನೇ ಮಾಡಿಕೊಂಡು ಬಂದಿರುವ ಪ್ರಕಾಶ್ ಅವರ ದನಗಳು (Cattle) ನಿಗೂಢವಾಗಿ ಸಾವಿಗೀಡಾಗಿವೆ. ಒಟ್ಟು 37 ದನಗಳಲ್ಲಿ 7 ದನಗಳು ಮೃತಪಟ್ಟಿವೆ. ಕೆಲ ದಿನಗಳ ಹಿಂದೆ ಮನೆ ಸಮೀಪದ ಗುಡ್ಡ ಪ್ರದೇಶಕ್ಕೆ ಮೇಯಲು ಹೋಗಿದ್ದ ದನಗಳು ಅಸ್ವಸ್ಥ ಸ್ಥಿತಿಯಲ್ಲಿ ವಾಪಾಸು ಕೊಟ್ಟಿಗೆಗೆ ಬಂದಿದ್ದವು. ಮೇಯಲು ಹೋಗಿದ್ದ 12 ದನಗಳಲ್ಲಿ ಎರಡು ಗರ್ಭ ಧರಿಸಿದ್ದ ದನ ಸೇರಿದಂತೆ ಒಟ್ಟು ಏಳು ಜಾನುವಾರುಗಳು ಸಾವನ್ನಪ್ಪಿವೆ.

ಈ ಜಾನುವಾರುಗಳು ನರಳಿ ನರಳಿ ಸಾವನ್ನಪ್ಪಿದ ದೃಶ್ಯ ಕರುಳು ಹಿಂಡುವಂತಿದೆ. ದನಗಳ ಕುತ್ತಿಗೆ ವಕ್ರವಾಗಿ ಕುಸಿದು ಬೀಳುತ್ತಿದ್ದು ಆಹಾರ ಸೇವಿಸಲು ಸಾಧ್ಯವಾಗದೆ ನರಳಿ ನರಳಿ‌ ಸಾವನ್ನಪ್ಪುತ್ತಿವೆ. ಈ ಜಾನುವಾರುಗಳ ಸಾವಿಗೆ ಯಾರೋ ವಿರೋಧಿಗಳು ವಿಷಪ್ರಾಶನ ಮಾಡಿರುವ ಅನುಮಾನ ಪ್ರಕಾಶ್ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನೂರಕ್ಕೆ ನೂರು ವಿಷಪ್ರಾಶನ ಆಗಿರುವ ಸಂಶಯ ವ್ಯಕ್ತಪಡಿಸಿರುವ ಅವರು ಕೃತ್ಯ ಎಸಗಿದರಿಗೆ ಹಿಡಿಶಾಪ ಹಾಕಿದ್ದಾರೆ. ಬಹಳ ಪ್ರೀತಿಯಿಂದ ದನ ಕರುಗಳನ್ನು ನೋಡಿಕೊಳ್ಳುತ್ತಿದ್ದ ಪ್ರಕಾಶ್ ಕುಟುಂಬ ಜಾನುವಾರುಗಳ ಅಕಾಲಿಕ ಸಾವಿನಿಂದ ಆಘಾತಕ್ಕೆ ಒಳಗಾಗಿದೆ. ಇತ್ತ ತಾಯಿಯನ್ನು ಕಳೆದುಕೊಂಡು ಕರುಗಳು ತಬ್ಬಲಿಯಾಗಿವೆ. ಯಾರದ್ದೋ ದ್ವೇಷಕ್ಕೆ ಮೂಕ ಪ್ರಾಣಿಗಳು ಬಲಿಯಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ

ಇದನ್ನೂ ಓದಿ: ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಕೇಸ್ ತನಿಖೆ ಚುರುಕು: ಆರೋಪಿಗಳು NIA ವಶಕ್ಕೆ

ಜಾನುವಾರುಗಳ ನಿಗೂಢವಾಗಿ ಸಾವನ್ನಪ್ಪಿದ ಸ್ಥಳಕ್ಕೆ ಪಶುಪಾಲನೆ ಇಲಾಖೆ ವೈದ್ಯರು ಭೇಟಿ ನೀಡಿ ಮೃತ ದನ ಕರುಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸದ್ಯ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಿದ್ದು ವರದಿ ಇನ್ನಷ್ಟೇ ಕೈ ಸೇರಬೇಕಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಜಾನುವಾರುಗಳ ನಿಗೂಢ ಸಾವಿಗೆ ಕಾರಣವೇನೆಂದು ತಿಳಿಯಲಿದೆ. ಕೊಟ್ಟಿಗೆಯ ಪಕ್ಕದಲ್ಲೇ ಮೃತ ಜಾನುವಾರುಗಳ ಅಂತ್ಯಕ್ರೀಯ ಕಾರ್ಯ ನೆರವೇರಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *