ಶಿವಮೊಗ್ಗದಲ್ಲಿ ಮದುವೆಯಾಗದೆ ಗರ್ಭಿಣಿಯಾದ ಮಗಳನ್ನು ಕಾಡಿಗೆ ಕರೆದೊಯ್ದು ಕೊಲೆಗೆ ಯತ್ನಿಸಿದ ತಂದೆ. ಪ್ರಜ್ಞೆ ತಪ್ಪಿ ಬಿದ್ದ ಮಗಳನ್ನು ಸತ್ತಳೆಂದು ಬಿಟ್ಟು ಹೋದ ತಂದೆ. ನಂತರ ಪ್ರಜ್ಞೆ ಬಂದು ಸಹಾಯ ಪಡೆದು ಬದುಕುಳಿದ ಮಗಳು.
ಶಿವಮೊಗ್ಗ (ಜೂ.29): ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಉಳವಿ ಗ್ರಾಮದಲ್ಲಿ ಮಾನವೀಯತೆ ಮರೆತ ತಂದೆಯೊಬ್ಬರು ಮದುವೆಯಾಗದೇ ಗರ್ಭಿಣಿಯಾದ ಮಗಳನ್ನು ಕಾಡಿಗೆ ಕರೆದಯ್ದು ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ ಗಂಭೀರ ಘಟನೆ ನಡೆದಿದೆ. ಮಗಳು ಕುತ್ತಿಗೆ ಹಿಸುಕಿದಾಗ ಪ್ರಜ್ಞೆ ತಪ್ಪಿ ಬಿದ್ದಾಗ ಸತ್ತಿದ್ದಾಳೆಂದು ಕಾಡಿನಲ್ಲಿ ಬಿಟ್ಟು ಬಂದಾಗ ನಂತರ ಪ್ರಜ್ಞೆ ಬಂದು ಸಹಾಯಕ್ಕಾಗಿ ರಸ್ತೆಗೆ ಬಂದು ಬೇಡಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ಈ ಘಟನೆಯು ಸೊರಬ ತಾಲೂಕಿನ ಉಳವಿ ಗ್ರಾಮದಲ್ಲಿದೆ. ತಮ್ಮ ಮಗಳು ಗರ್ಭಿಣಿಯಾಗಿರುವ ವಿಷಯ ತಿಳಿದ ಧರ್ಮಾನಾಯ್ಕ ಎಂಬಾತನ ಮಗಳು ಮದುವೆಯಾಗದಿದ್ದರೂ ಮಗಳು ಗರ್ಭಿಣಿ ಆಗಿದ್ದಳು. ಮಗಳು ತುಂಬು ಗರ್ಭಿಣಿ ಆಗಿದ್ದರಿಂದ ಊರಿನವರಿಗೆ ಈ ವಿಚಾರ ತಿಳಿದು ಊರಿನಲ್ಲಿ ಮರ್ಯಾದೆ ಹಾಳಾಗಿತ್ತು. ಇನ್ನು ಊರಿನಲ್ಲಿ ತಲೆ ಎತ್ತಿಕೊಂಡು ಓಡಾಡಲಾಗದೇ ಜನರಿಂದ ತುಂಬಾ ಚುಚ್ಚು ಮಾತುಗಳನ್ನು ಕೇಳಿದ್ದಾನೆ. ಇದರಿಂದ ಮನನೊಂದಿದ್ದ ಧರ್ಮಾನಾಯ್ಕ ಇಂತಹ ಮಗಳು ಇದ್ದರೆಷ್ಟು, ಹೋದರೆಷ್ಟು ಎಷ್ಟು ಕೊಲೆ ಮಾಡಲು ತೀರ್ಮಾನಿಸಿದ್ದಾನೆ. ತನ್ನ ಯೋಜನೆಯಂತೆ ಪತ್ನಿ ಹಾಗೂ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ. ಆದರೆ, ಆಸ್ಪತ್ರೆ ಕಡೆಗೆ ಹೋಗುವ ಬದಲು, ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರು ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.
ಅಲ್ಲಿ, ಧರ್ಮಾನಾಯ್ಕ ತನ್ನ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲು ಮುಂದಾಗಿದ್ದಾನೆ. ಈ ದೃಶ್ಯವನ್ನು ನೋಡಿ ಬೆಚ್ಚಿಬಿದ್ದ ಪತ್ನಿ, ಮಗಳನ್ನ ಜೀವ ಸಮೇತ ಬಿಟ್ಟುಬಿಡುವಂತೆ ಪತಿಯ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾಳೆ. ಆದರೂ, ಆತನ ಮನಸ್ಸು ಕರಗದೇ ಮಗಳನ್ನು ಕುತ್ತಿಗೆ ಹಿಸುಕು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಗರ್ಭಿಣಿ ಮಗಳು ಪ್ರಜ್ಞೆ ತಪ್ಪಿದ್ದು, ಆಕೆ ಸತ್ತಿದ್ದಾಳೆ ಎಂದು ಭಾವಿಸಿ, ತಂದೆ-ತಾಯಿ ಸ್ಥಳದಿಂದ ಮನೆಯತ್ತ ಹೋಗಿದ್ದಾರೆ.
ಆದರೆ, ಕೆಲವು ಸಮಯದ ನಂತರ ಯುವತಿಗೆ ಪ್ರಜ್ಞೆ ಬಂದಿದೆ. ಆಗ ಕಾಡಿನಿಂದ ರಸ್ತೆಗೆ ಹೋಗುವ ಮಾರ್ಗವನ್ನು ಹುಡುಕೊಂಡು ನೋವಿನಲ್ಲಿಯೇ ವಾಹನ ಸಂಚಾರ ಮಾಡುವ ರಸ್ತೆಗೆ ಬಂದಿದ್ದಾಳೆ. ಅಲ್ಲಿ ದಾರಿಹೋಕರ ಸಹಾಯದಿಂದ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾಳೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ತಾಯಿ-ಮಗುವಿಗೆ ಯಾವುದೇ ಆತಂಕ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಮಗಳು ಗರ್ಭಿಣಿಯಾದಳೆಂಬ ತಪ್ಪಿಗೆ ಒಟ್ಟೊಟ್ಟಿಗೆ ಎರಡು ಜೀವ ಕಿತ್ತುಕೊಳ್ಳಲು ಮುಂದಾಗಿದ್ದ ಧರ್ಮಾನಾಯ್ಕನ ತಂತ್ರವೇ ಬೇರೆ ಆಗಿದ್ದರೆ, ಪವಾಡ ಸದೃಶದಂತೆ ಇಬ್ಬರೂ ಬದುಕಿದ್ದಾರೆ.
ಈ ಗಂಭೀರ ಘಟನೆಯ ಹಿನ್ನೆಲೆಯಲ್ಲಿ ಸೊರಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಶಿರಾಳಕೊಪ್ಪ ಸಮೀಪದ ಮಳವಳ್ಳಿ ತಾಂಡಾದ ನಿವಾಸಿ ಧರ್ಮನಾಯ್ಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.