ಬೆಂಗಳೂರು : ಜನಸ್ನೇಹಿ ಆಡಳಿತ ಅನುಷ್ಠಾನ ನಿಟ್ಟಿನಲ್ಲಿ ರೂಪಿಸಿರುವ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮವು ಯಶಸ್ವಿಯಾದರೆ ದೇಶದಲ್ಲೇ ರಾಜ್ಯದ ಪೊಲೀಸ್ ಇಲಾಖೆಗೆ ಕೀರ್ತಿ ಸಿಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ರಾಜ್ಯ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದ ಎರಡನೇ ದಿನದ ಸಭೆಯಲ್ಲಿ ಸಚಿವರು ಪಾಲ್ಗೊಂಡು ಪ್ರಗತಿ ಪರಿಶೀಲನೆ ನಡೆಸಿದರು.

ಜನರ ದುಃಖ ದುಮ್ಮಾನವನ್ನು ಆಲಿಸಲು ಪೊಲೀಸರೇ ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಇದಾಗಿದೆ. ಇದರಿಂದ ಸ್ಥಳೀಯ ಮಟ್ಟದಿಂದ ಸಮಸ್ಯೆಗಳೇನು ಎಂಬುದು ಪೊಲೀಸರಿಗೆ ಸ್ಪಷ್ಟವಾಗಿ ಅರಿವಾಗಲಿದೆ. ಅಲ್ಲದೆ ಪೊಲೀಸರ ಕುರಿತು ಜನ ಅಭಿಪ್ರಾಯ ಸಹ ಬದಲಾಗಲಿದ್ದು, ಅಪರಾಧ ಕೃತ್ಯಗಳಿಗೆ ತಡೆಗೆ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದ ಪೊಲೀಸರಿಗೆ ದೇಶದಲ್ಲಿ ಒಳ್ಳೆಯ ಹೆಸರಿದೆ. ಜನರ ಬಳಿಗೆ ಪೊಲೀಸ್ ಸೇವೆ ತೆಗೆದುಕೊಂಡು ಹೋಗಲಾಗುತ್ತದೆ. ಈ ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳು ಗಮನಹರಿಸಬೇಕು. ಈ ಕಾರ್ಯಕ್ರಮ ಯಶಸ್ವಿಯಾದರೆ ಇಲಾಖೆಗೆ ದೇಶದಲ್ಲಿ ಕೀರ್ತಿ ಸಿಗಲಿದೆ ಎಂದು ಕರೆ ನೀಡಿದರು. ಪ್ರತಿ ಜಿಲ್ಲಾ ಮಟ್ಟದಲ್ಲಿ ವಿಭಿನ್ನ ಸಮಸ್ಯೆಗಳಿವೆ. ಅಧಿಕಾರಿಗಳು ಫೀಲ್ಡ್‌ಗಿಳಿದು ಕೆಲಸ ಮಾಡಿದಾಗ ಸಮಸ್ಯೆ ಗೊತ್ತಾಗುತ್ತದೆ. ಗುಪ್ತವಾಗಿರುವ ದ್ವೇಷ ಹಾಗೂ ಕೋಮು ಸಂಘರ್ಷ ಸೇರಿದಂತೆ ಇತರೆ ಸಂಗತಿಗಳು ಬೆಳಕಿಗೆ ಬರುತ್ತವೆ ಎಂದರು.

ಈ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಐಎಸ್‌ಡಿ ಡಿಜಿಪಿ ಪ್ರಣವ್ ಮೊಹಂತಿ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಡಿಜಿ ಮಾಲಿನಿ ಕೃಷ್ಣಮೂರ್ತಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸಿ

ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷಾ ಪ್ರಮಾಣ ಕಡಿಮೆ ಇದೆ. ಈ ಪ್ರಕರಣಗಳ ಬಗ್ಗೆ ತನಿಖೆ ಸೂಕ್ತವಾಗಿ ನಡೆಯಬೇಕು. ಈ ಬಗ್ಗೆ ಸರ್ಕಾರಿ ಅಭಿಯೋಜಕರ ಜತೆ ಚರ್ಚಿಸಿ ತನಿಖಾ ಸುಧಾರಣೆ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ರಾಕೆಟ್ ಸೈನ್ಸ್ ಏನಲ್ಲ:ಪರಂ

ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ಮುಖ್ಯಮಂತ್ರಿ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಡ್ರಗ್ಸ್ ದಂಧೆಯನ್ನು ಮಟ್ಟಹಾಕುವುದು ಅಧಿಕಾರಿಗಳಿಗೆ ರಾಕೆಟ್ ಸೈನ್ಸ್ ಏನಲ್ಲ. ಇಲಾಖೆಯಲ್ಲಿ ಅಗತ್ಯ ಪೊಲೀಸ್ ಬಲವಿದೆ. ಮುಲಾಜಿಲ್ಲದೆ ಪೊಲೀಸರು ಕೆಲಸ ಮಾಡಿದರೆ ಡ್ರಗ್ಸ್ ಮುಕ್ತ ಮಾಡಬಹುದು ಎಂದು ಗೃಹ ಸಚಿವರು ಹೇಳಿದರು.

Source link
‘ಮನೆ ಮನೆಗೆ ಪೊಲೀಸ್’ ಯಶಸ್ಸಿಗೆ ಶ್ರಮಿಸಿ : ಅಧಿಕಾರಿಗಳಿಗೆ ಡಾ.ಜಿ.ಪರಮೇಶ್ವರ್ ಸೂಚನೆ