ಯುವತಿ ಮೇಲೆ ಹಲ್ಲೆ, ಬನ್ನೇರುಘಟ್ಟ ಪೊಲೀಸ್ ಠಾಣೆ
ಆನೆಕಲ್, ಜೂನ್ 23: ಆನೇಕಲ್ನ (Anekal) ರೇಣುಕಾ ಬಡವಾಣೆ ನಿವಾಸಿ ಯುವತಿ ಶಾಂತಿ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ಮಾಡಿದ ಪ್ರಮುಖ ಆರೋಪಿ ಜಾನ್ ರಿಚರ್ಡ್ನನ್ನು (26) ಪೊಲೀಸರು ಬಂಧಿಸಿ, ಬನ್ನೇರುಘಟ್ಟ ಠಾಣೆಗೆ (Bannerghatta Police) ಕರೆತಂದಿದ್ದಾರೆ. ಪ್ರಕರಣ ಸಂಬಂಧ ಯುವತಿ ಶಾಂತಿ ಮಾತನಾಡಿ, “ನನ್ನ, ಸ್ನೇಹಿತ ಮಂಜುನಾಥ್ ಅವರ ಮೇಲೆ ಕೌಂಟರ್ ಕೇಸ್ ಆಗಿರುವ ಬಗ್ಗೆ ಗೊತ್ತಿಲ್ಲ. ಮಂಜುನಾಥ್ ಸ್ನೇಹಿತನಾಗಿ ನನ್ನ ನೆರವಿಗೆ ಬಂದಿದ್ದರು ಅಷ್ಟೇ. ಕೇಸ್ ಸ್ಟ್ರಾಂಗ್ ಮಾಡಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಭರವಸೆ ಪೊಲೀಸರು ನೀಡಿದ್ದಾರೆ ಎಂದು ಹೇಳಿದರು.
ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಮೂಲತಃ ಬೆಂಗಳೂರಿನವರೇ ಆದ ಶಾಂತಿ ಭಾನುವಾರ (ಜೂ.22) ಸಂಜೆ ಅಂಗಡಿಗೆ ಹೋಗುವ ವೇಳೆ ಯುವಕರು ಅಡ್ಡ ಹಾಕಿದ್ದಾರೆ. ಬಲವಂತವಾಗಿ ತಳ್ಳಾಡಿ ಬರುತ್ತೀರಾ ಎಂದು ಕೇಳಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ 3-4 ನಾಲ್ಕು ಜನ ಇದ್ದರು. ಓರ್ವ ಮಾತ್ರ ಕಿರುಕುಳ ಕೊಟ್ಟು ಹಲ್ಲೆಗೈಯಲು ಬಂದಿದ್ದನು. ಎರಡ್ಮೂರು ಜನ ಆತನನ್ನು ಬಿಡಿಸಿದ್ದಾರೆ. ಹಲ್ಲೆ ಮಾಡಲು ಬಂದಿದ್ದವ ಪೊಲೀಸರ ವಶದಲ್ಲಿದ್ದಾನೆ. ಯುವತಿಗೆ ಗಂಭೀರ ಗಾಯಗಳು ಆಗಿಲ್ಲ ಎಂದು ತಿಳಿಸಿದರು.
ಸೋಮವಾರ (ಜೂ.23) ಬೆಳಿಗ್ಗೆ 11ಕ್ಕೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಮೊದಲ ಆರೋಪಿ ನಮ್ಮ ವಶದಲ್ಲಿಯೇ ಇದ್ದಾನೆ. ಜಿಮ್ ಟ್ರೈನರ್ ಸಹ ಹಲ್ಲೆ ಮಾಡಿದ್ದಾನೆ. ಜಿಮ್ ಟ್ರೈನರ್ ಮೇಲೆಯೂ ದೂರು ದಾಖಲಾಗಿದೆ. ಆತನನ್ನ ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ
ಪ್ರಕರಣ ಸಂಬಂಧ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಮಾತನಾಡಿ, ಘಟನೆ ಬಳಿಕ ದೂರುದಾರೆ ಮೊದಲು ಹುಳಿಮಾವು ಠಾಣೆಗೆ ಹೋಗಿದ್ದಾರೆ. ಅಷ್ಟೊತ್ತಿಗೆ ಹೊಯ್ಸಳ ಪೊಲೀಸರು ಸ್ಥಳಕ್ಕೆ ಹೋಗಿದ್ದರು. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾರೆ. ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ನಂತರ ಆರೋಪಿ, ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಯುವತಿ ನೆರವಿಗೆ ಧಾವಿಸಿದ ಮಂಜು ಎಂಬಾತನ ಮೇಲೆ ಕೌಂಟರ್ ಕೇಸ್ ದಾಖಲಾಗಿದೆ. ಓರ್ವ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದರು.
ಇದನ್ನೂ ಓದಿ: ಅಂಗಡಿಗೆ ತೆರಳುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಸಾಲದಕ್ಕೆ ಮನೆ ಬಳಿ ಹೋಗಿ ಗಲಾಟೆ
ಯುವತಿ ಹೇಳಿದ್ದೇನು?
ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಮಾತನಾಡಿ, ನಾನು (ಶಾಂತಿ) ಅಂಗಡಿ ಹೋಗುವ ಸಂದರ್ಭದಲ್ಲಿ ಯುವಕರು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಎಲ್ಲರೂ ಕುಡಿದಿದ್ದರು, ಗಾಂಜಾ ಹೊಡೆದಿದ್ದರು. ಆಗ, ಅವರು ನನ್ನ ಅಡ್ಡಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹೊಡೆಯಲು ಮತ್ತು ಮುಟ್ಟಲು ಬಂದರು. ಈ ವೇಳೆ ಸ್ಥಳೀಯರು ನನ್ನ ರಕ್ಷಿಸಿದರು ಎಂದು ಹೇಳಿದರು.
ಸ್ಥಳೀಯರು ಯುವಕರಿಗೆ ಹೊಡೆದರು. ನಾನೂ ಕೂಡ ಯುವಕರಿಗೆ ಹೊಡೆದೆ. ಸಾರ್ವಜನಿಕರಿಗೂ ಯುವಕರು ಹೊಡೆದರು. ಅಲ್ಲದೇ, ನನ್ನ ಮನೆ ಗೇಟ್ ಎಗರಿ ಒಳ ನುಗ್ಗಿದರು. ಏಳೆಂಟು ಜನ ಯುವಕರಿದ್ದರು. ಯುವಕರು ನಮ್ಮ ಮನೆ ಹಿಂದುಗಡೆ ವಾಸವಾಗಿದ್ದಾರಂತೆ. ಕಳೆದ ಒಂದು ವಾರದಿಂದ ಈ ಬಡವಾಣೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:30 pm, Mon, 23 June 25