ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ಬಳಿಕ ಇ-ಕಾಮರ್ಸ್, ಕ್ವಿಕ್ ಕಾಮರ್ಸ್ ಉದ್ದೇಶಕ್ಕೆ ಖಾಸಗಿ ವಾಹನ ಬಳಸುವವರಿಗೂ ಸಮಸ್ಯೆ ಕಾದಿದೆಯೇ ಎಂಬ ಆತಂಕ ಗಿಗ್ ಕಾರ್ಮಿಕರು ಮತ್ತು ಉದ್ಯಮಿಗಳಲ್ಲಿ ಮೂಡಿದೆ.
ಬೆಂಗಳೂರು : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ಬಳಿಕ ಇ-ಕಾಮರ್ಸ್, ಕ್ವಿಕ್ ಕಾಮರ್ಸ್ ಉದ್ದೇಶಕ್ಕೆ ಖಾಸಗಿ ವಾಹನ ಬಳಸುವವರಿಗೂ ಸಮಸ್ಯೆ ಕಾದಿದೆಯೇ ಎಂಬ ಆತಂಕ ಗಿಗ್ ಕಾರ್ಮಿಕರು ಮತ್ತು ಉದ್ಯಮಿಗಳಲ್ಲಿ ಮೂಡಿದೆ.
ಜೂ.10ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಂಚಾರ ನಿಯಮ ಉಲ್ಲಂಘನೆ, ಸಾರ್ವಜನಿಕ ಸುರಕ್ಷತಾ ಅಪಾಯ ಮತ್ತು ನಗರ ಸಂಚಾರ ದಟ್ಟಣೆ ಉಲ್ಲೇಖಿಸಿ, ಇ-ಕಾಮರ್ಸ್ ಮತ್ತು ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಗಿಗ್ ಕಾರ್ಮಿಕರು ಖಾಸಗಿ ವಾಹನ ಬಳಸುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದೆ. ವಿಮೆ, ತೆರಿಗೆ, ನೋಂದಣಿ ವಿಚಾರ, ಸಂಚಾರಿ ನಿಯಮ ಉಲ್ಲಂಘನೆ ವರದಿ ಆಗುತ್ತಿದೆ. ಈ ಸಂಬಂಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾರ್ವಜನಿಕ ಸುರಕ್ಷತೆ ಬಗ್ಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಠಿಣ ಮತ್ತು ಸಕಾಲಿಕ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ.
ಈಗಾಗಲೇ ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಿರುವ ರಾಜ್ಯ ಸರ್ಕಾರ, ಇದೀಗ ಕೇಂದ್ರದ ಈ ಸೂಚನೆಗೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂಬುದು ಗಿಗ್ ಕಾರ್ಮಿಕರು, ಉದ್ಯಮಿಗಳಲ್ಲಿ ಆತಂಕ ಮೂಡಿಸಿದೆ.
ಆಹಾರ, ದಿನಸಿ ಮತ್ತು ಪಾರ್ಸೆಲ್‌ಗಳನ್ನು ಸ್ವಂತ ವಾಹನದಲ್ಲಿ ತಲುಪಿಸುವ ಗಿಗ್ ಕಾರ್ಮಿಕರ ಮೇಲೆ ವಾಣಿಜ್ಯ ನೋಂದಣಿ ಮಾಡುವಂತೆ ಸೂಚಿಸುವುದು ಮತ್ತು ದಂಡ ವಿಧಿಸಿದಲ್ಲಿ ಇ-ಕಾಮರ್ಸ್ ಮತ್ತು ವಾಣಿಜ್ಯ ವಲಯಕ್ಕೆ ಸಮಸ್ಯೆ ಉಂಟಾಗಬಹುದು. ಇದರಿಂದಾಗಿ ಈ ಕಾರ್ಮಿಕರ ಉದ್ಯೋಗವೂ ಸಮಸ್ಯೆಗೆ ಸಿಲುಕಬಹುದು ಎಂದು ಆತಂಕ ಶುರುವಾಗಿದೆ.
ಗಿಗ್ ಕಾರ್ಮಿಕರ ಮೇಲೂ ಕ್ರಮಕ್ಕೆ ಮುಂದಾದಲ್ಲಿ ರಾಜ್ಯದಲ್ಲಿ ಕ್ವಿಕ್ ಕಾಮರ್ಸ್ ಉದ್ಯಮಕ್ಕೂ ಸಮಸ್ಯೆ ಎದುರಾಗಬಹುದು. ಇದರಿಂದ ಬಂಡವಾಳ ಹೂಡಿಕೆಗೂ ಹಿನ್ನಡೆ ಆಗಲಿದೆ. ಜತೆಗೆ ಹೂಡಿಕೆದಾರರು, ಸ್ಟಾರ್ಟ್ ಅಪ್ ಮತ್ತು ಯುವ ವೃತ್ತಿಪರರಿಗೆ ತೊಂದರೆ ಆಗಲಿದೆ. ಜತೆಗೆ, ಕರ್ನಾಟಕದಲ್ಲಿ ಗಿಗ್ ಕಾರ್ಮಿಕರ ಸಂಖ್ಯೆ ಸಾಕಷ್ಟಿದೆ. ಉದ್ಯೋಗಕ್ಕಾಗಿ ಖಾಸಗಿ ದ್ವಿಚಕ್ರ ವಾಹನಗಳನ್ನೇ ಅವರು ಅವಲಂಬಿಸಿದ್ದಾರೆ. ಇದಕ್ಕೂ ನಿಯಂತ್ರಣ ತರಲು ಮುಂದಾದರೆ ಲಕ್ಷಾಂತರ ಯುವಜನರ ಪ್ರಾಥಮಿಕ ಆದಾಯ ನಷ್ಟವಾಗಲಿದೆ. ಹೀಗಾಗಿ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಗಿಗ್ ಕಾರ್ಮಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಾವು ಪ್ರಯಾಣಿಕರನ್ನು ಮಾತ್ರ ಬೈಕ್‌ಗಳಲ್ಲಿ ಕರೆದೊಯ್ಯುವಂತಿಲ್ಲ ಎಂದು ಹೇಳಿದ್ದೇವೆ. ಉಳಿದಂತೆ ಝೊಮೆಟೋ, ಸ್ವಿಗ್ಗಿ ರೀತಿಯ ಆಹಾರ ಸೇರಿ ಇತರೆ ಇ-ಕಾಮರ್ಸ್ ವಸ್ತುಗಳ ಸಾಗಾಟಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಯಾಣಿಕರನ್ನು ಮಾತ್ರ ಬೈಕ್‌ಗಳಲ್ಲಿ ಕರೆದೊಯ್ಯುವಂತಿಲ್ಲ ಎಂದು ಸರ್ಕಾರದಿಂದ ಹೇಳಲಾಗಿದೆ. ರಾಜ್ಯ ಸರ್ಕಾರದಿಂದ ಇ-ಕಾಮರ್ಸ್, ಕ್ವಿಕ್ ಕಾಮರ್ಸ್ ಉದ್ದೇಶಕ್ಕೆ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ.
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವರು