ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವ ಕುರಿತ ‘ಆರ್‌ಟಿಇ (ಕರ್ನಾಟಕ ತಿದ್ದುಪಡಿ)-2015’ ಸೇರಿ ರಾಜ್ಯಪಾಲರು ಅನುಮತಿ ನಿರಾಕರಿಸಿ ರಾಷ್ಟ್ರಪತಿಯವರಿಗೆ ಕಳುಹಿಸಿರುವ ರಾಜ್ಯದ ಐದು ಪ್ರಮುಖ ವಿಧೇಯಕಗಳ ಕುರಿತು ಚರ್ಚೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ.
ಬೆಂಗಳೂರು : ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವ ಕುರಿತ ‘ಆರ್‌ಟಿಇ (ಕರ್ನಾಟಕ ತಿದ್ದುಪಡಿ)-2015’ ಸೇರಿ ರಾಜ್ಯಪಾಲರು ಅನುಮತಿ ನಿರಾಕರಿಸಿ ರಾಷ್ಟ್ರಪತಿಯವರಿಗೆ ಕಳುಹಿಸಿರುವ ರಾಜ್ಯದ ಐದು ಪ್ರಮುಖ ವಿಧೇಯಕಗಳ ಕುರಿತು ಚರ್ಚೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ.
ಮಂಗಳವಾರ ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಅವರ ಅಂಕಿತ ಬಾಕಿ ಇರುವ ರಾಜ್ಯದ ವಿಧೇಯಕಗಳ ಕುರಿತು ಚರ್ಚಿಸಲಿದ್ದಾರೆ. ರಾಷ್ಟ್ರಪತಿಗಳನ್ನು ಭೇಟಿಯಾಗುವ ಹಿನ್ನೆಲೆಯಲ್ಲಿ ಭಾನುವಾರ ಅಧಿಕೃತ ನಿವಾಸ ಕಾವೇರಿಯಿಂದ ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಅವರು, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚೆ ನಡೆಸಿದರು.
ಐದು ವಿಧೇಯಕಗಳಿಗೆ ಸಹಿ ಹಾಕಲು ನಿರಾಕರಿಸಿ ರಾಷ್ಟ್ರಪತಿಯವರಿಗೆ ಕಳುಹಿಸುವಾಗ ರಾಜ್ಯಪಾಲರು ನೀಡಿರುವ ಕಾರಣ, ನಮೂದಿಸಿರುವ ಅಂಶಗಳೇನು ಎಂಬ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ರಾಷ್ಟ್ರಪತಿಯವರ ಭೇಟಿ ವೇಳೆ ರಾಜ್ಯ ಸರ್ಕಾರ ರೂಪಿಸಿರುವ ವಿಧೇಯಕಗಳನ್ನು ಹೇಗೆ ಸಮರ್ಥಿಸಿಕೊಳ್ಳಬೇಕು, ಯಾವ ರೀತಿಯ ಸಮಜಾಯಿಷಿ ನೀಡಬೇಕು. ಅವುಗಳ ಜಾರಿಯ ಅವಶ್ಯಕತೆ ಕುರಿತು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿಸಲು ರಾಜ್ಯಪಾಲರ ಆಕ್ಷೇಪಿತ ಅಂಶಗಳ ಮಾಹಿತಿ ಪಡೆಯುವುದು ಅವಶ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಮಾಹಿತಿ ಪಡೆದರು ಎಂದು ತಿಳಿದು ಬಂದಿದೆ.
ಐದು ವಿಧೇಯಕ ಯಾವ್ಯಾವು?:
ರಾಜ್ಯದಲ್ಲಿನ ಶಾಲೆಗಳಲ್ಲಿ 1 ರಿಂದ 5ನೇ ತರಗತಿವರೆಗೆ ಮಾತೃ ಭಾಷೆ ಮಾಧ್ಯಮದಲ್ಲೇ ಶಿಕ್ಷಣ ಕಡ್ಡಾಯವಾಗಿ ಕಲಿಸುವ ಕುರಿತ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಕರ್ನಾಟಕ ತಿದ್ದುಪಡಿ) -2015’, ಮುಸ್ಲಿಮರಿಗೆ ಶೇ.4 ಗುತ್ತಿಗೆ ಮೀಸಲಾತಿ ನೀಡುವ ಸಂಬಂಧದ ‘ಅಲ್ಪಸಂಖ್ಯಾತರಿಗೆ ಗುತ್ತಿಗೆ ಹಾಗೂ ಖರೀದಿಯಲ್ಲಿ ಮೀಸಲಾತಿ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ತಿದ್ದುಪಡಿ ಕಾಯಿದೆ (ಕೆಟಿಪಿಪಿ)- 2025’,
ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯ ಶ್ರೀಮಂತ ದೇವಾಲಯಗಳು ಅಂದರೆ ‘ಎ’ ವರ್ಗದ ದೇವಾಲಯಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯ ಶೇ. 5ರಿಂದ ಶೇ.10ರಷ್ಟು ಆದಾಯವನ್ನು ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ’,
‘ಕರ್ನಾಟಕ ನೋಂದಣಿ ತಿದ್ದುಪಡಿ ಕಾಯಿದೆ-2025’ ಮತ್ತು ‘ನೋಟರಿ ಕರ್ನಾಟಕ ತಿದ್ದುಪಡಿ ಕಾಯದೆ – 2025’ ಈ ಐದೂ ವಿಧೇಯಕಗಳನ್ನು ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಅನುಮೋದಿಸಿ ಸರ್ಕಾರ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು. ಆದರೆ, ರಾಜ್ಯಪಾಲರು ಸಹಿ ಹಾಕಲು ನಿರಾಕರಿಸಿ ರಾಷ್ಟ್ರಪತಿ ಅವರಿಗೆ ಕಳಹಿಸಿದ್ದಾರೆ. ಹಾಗಾಗಿ ದೆಹಲಿಯಲ್ಲಿ ಮಂಗಳವಾರ ರಾಷ್ಟ್ರಪತಿ ಅವರನ್ನು ಭೇಟಿಯಾಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಧೇಯಕಗಳ ಬಗ್ಗೆ ವಿವರಣೆ ನೀಡಿ ಅಂಗೀಕರಿಸಲು ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗಿದೆ.
ಅವಕಾಶ ಸಿಕ್ಕರೆ ಪ್ರಧಾನಿ ಭೇಟಿ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಯವರ ಭೇಟಿ ಬಳಿಕ ಮಂಗಳವಾರ ಸಂಜೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ 16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಕ್ರಮ ವಹಿಸುವಂತೆ ಮನವಿ ಮಾಡಲಿದ್ದಾರೆ.
ಬುಧವಾರ ಪ್ರಧಾನಮಂತ್ರಿ ಮೋದಿ ಅವರ ಭೇಟಿಗೂ ಅನುಮತಿ ಕೋರಿದ್ದು, ಅವಕಾಶ ದೊರೆತರೆ ಭೇಟಿ ಮಾಡಿ ರಾಜ್ಯದ ವಿವಿಧ ಬೇಡಿಕೆಗಳು, ನೀರಾವರಿ ಯೋಜನೆಗಳ ಬಗ್ಗೆ ಹಾಗೂ ಅನುದಾನ ತಾರತಮ್ಯದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.