
ಶಿರಾ : ಪ್ರಸ್ತುತ ಸಂದರ್ಭದಲ್ಲಿ ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾಗಿ ಬೆಲೆ ಸಿಗದೆ ಬೆಂಗಳೂರಿಗೆ ವಲಸೆ ಹೋಗಿ ಅಲ್ಲಿ ಜೀವನ ನಡೆಸುವ ಪರಿಸ್ಥಿತಿ ಬಂದೊದಗಿದ್ದು, ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಹೈನುಗಾರಿಕೆ ವರವಾಗಿದೆ. ಹೈನುಗಾರಿಕೆಯನ್ನು ಬಲಪಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಬರಡು ರಾಸುಗಳು ಗರ್ಭ ಧರಿಸುವಂತೆ ಮಾಡಲು ಕೃತಕ ಗರ್ಭದಾರಣ ಕಾರ್ಯಕರ್ತರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.
ಅವರು ಬುಧವಾರ ನಗರದ ನಂದಿನಿ ಕ್ಷೀರ ಭವನದಲ್ಲಿ ಕೃತಕ ಗರ್ಭಧಾರಣ ಕಾರ್ಯಕರ್ತರಿಗೆ ಆಯೋಜಿಸಿದ್ದ ತರಬೇತಿ ಹಾಗೂ ಮೃತ ರಾಸುಗಳ ಮರಣ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಶಿರಾ, ಪಾವಗಡ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಐದು ತಾಲೂಕುಗಳು ಅತಿ ಹಿಂದುಳಿದ ತಾಲೂಕುಗಳಾಗಿದ್ದು, ಈ ಭಾಗದ ರೈತರ ಜೀವನಕ್ಕೆ ಹೈನುಗಾರಿಕೆ ಆಸರೆಯಾಗಿದೆ. ಹೈನುಗಾರಿಕೆಯಿಂದ ಎಷ್ಟೋ ಕುಟುಂಬಗಳು ವಲಸೆ ಹೋಗದೆ ಗ್ರಾಮಗಳಲ್ಲೇ ಜೀವನ ನಡೆಸಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಸುಮಾರು ೧ ಲಕ್ಷ ಬರಡು ರಾಸುಗಳಿವೆ. ಈ ಬರಡು ರಾಸುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಿ ಅವುಗಳನ್ನು ಗರ್ಭ ಧರಿಸಿ ಕರುವನ್ನು ಹಾಕಿದರೆ ಅವುಗಳಿಂದ
ಸುಮಾರು 5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಇದರಿಂದ ರೈತರ ಬದುಕು ಹಸನಾಗುತ್ತದೆ. ಬರಡು ರಾಸುಗಳಿಗೆ ಚಿಕಿತ್ಸೆ ನೀಡಿ ಅವುಗಳು ಗರ್ಭ ಧರಿಸುವಂತೆ ಮಾಡುವುದಕ್ಕಾಗಿ ಕೃತಕ ಗರ್ಭದಾರಣ ಕಾರ್ಯಕರ್ತರಿಗೆ ತರಬೇತಿ ಆಯೋಜಿಸಲಾಗಿದೆ. ಕೃತಕ ಗರ್ಭದಾರಣ ಕಾರ್ಯಕರ್ತರು ರೈತರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ರಾಸುಗಳಿಗೆ ಯಶಸ್ವಿಯಾಗಿ ಗರ್ಭ ಧರಿಸುವಂತೆ ಮಾಡಬೇಕು. ಡೇರಿ ಕೇಂದ್ರಗಳ ವ್ಯಾಪ್ತಿಯಲ್ಲಿ ಇರುವ ಬರಡು ರಾಸುಗಳನ್ನು ಪತ್ತೆ ಹಚ್ಚಿ ಕೃತಕ ಗರ್ಭಧಾರಣೆ ಮಾಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಹಾಲು ಒಕ್ಕೂಟದ ಅಪರ ನಿರ್ದೇಶಕ ಡಾ. ರಾಘವನ್ ಅವರು ಹೈನುಗಾರರು ಹಾಲಿನ ಉತ್ಪಾದನೆಯಲ್ಲಿ ಹಿಂದುಳಿದಿರುವುದಕ್ಕೆ ಕಾರಣ ರಾಸುಗಳನ್ನು ಯಾವ ರೀತಿಯಲ್ಲಿ ಸಾಕಾಣಿಕೆ ಮಾಡಬೇಕು. ರಾಸುಗಳ ಬಗ್ಗೆ ಕಾಳಜಿ ವಹಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಶಿರಾ ತಾಲೂಕಿನ ಕೃತಕ ಗರ್ಭದಾರಣ ಕಾರ್ಯಕರ್ತರಿಗೆ ತರಬೇತಿ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ಶಿಬಿರದಲ್ಲಿ ನೀಡುವ ಮಾಹಿತಿಯನ್ನು ಕೃತಕ ಗರ್ಭದಾರಣ ಕಾರ್ಯಕತರು ಪಡೆದು ಬರಡು ರಾಸುಗಳು ಗರ್ಭ ಧರಿಸುವಂತೆ ಮಾಡಿ ಅವುಗಳು ಕರು ಹಾಕಿದರೆ. ನಮ್ಮ ತರಬೇತಿ ಯಶಸ್ವಿಯಾದಂತೆ. ಆದ್ದರಿಂದ ಕೃತಕ ಗರ್ಭದಾರಣ ಕಾರ್ಯಕರ್ತರು ಆಸಕ್ತಿಯಿಂದ ಮಾಹಿತಿ ಪಡೆಯಿರಿ ಎಂದರು.
ತುಮಕೂರು ಹಾಲು ಒಕ್ಕೂಟದ ಶಿರಾ ಉಪ ವ್ಯವಸ್ಥಾಪಕ ಬಿ.ಗಿರೀಶ್ ಅವರು ಮಾತನಾಡಿ ಹೈನುಗಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೃತಕ ಗರ್ಭದಾರಣ ಕಾರ್ಯಕರ್ತರಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ತರಬೇತಿಯನ್ನು ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗಿದೆ. ಇದರ ಅನುಕೂಲಗಳನ್ನು ಹೈನುಗಾರರು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಸುಮಾರು ೪೦ ಲಕ್ಷದ ಚೆಕ್‌ಗಳನ್ನು ವಿತರಿಸಲಾಯಿತು. ಹಾಲು ಒಕ್ಕೂಟದ ಡಾ.ಮೋಹನ್, ವ್ಯವಸ್ಥಾಪಕರಾದ ಶ್ರೀನಿವಾಸ್, ಚಂದ್ರಶೇಖರ್ ಕೇದನೂರ, ಉಪ ವ್ಯವಸ್ಥಾಪಕ ಬಿ.ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಡಾ. ಶ್ರುತಿ, ಪಶುವೈದ್ಯ ಡಾ. ಶ್ರೀಕಾಂತ್, ಸಮಾಲೋಚಕರಾದ ಪಿ.ಎಂ.ಬಾಬಾ ಫಕ್ರುದ್ದೀನ್, ದಯಾನಂದ್, ಪ್ರವೀಣ್, ಹನುಮಂತರಾಯಪ್ಪ ಸೇರಿದಂತೆ ಹಲವಾರು ಕೃತಕ ಗರ್ಭಧಾರಣ ಕಾರ್ಯಕರ್ತರು, ಶಿರಾ ತಾಲೂಕು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು, ಸದಸ್ಯರು ಭಾಗವಹಿಸಿದ್ದರು.