
ಕುಣಿಗಲ್ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಎಂ.ಕಾಂ. ತರಗತಿಯ ಸಂಯೋಜಕರಾದ ಟಿ.ಎನ್. ನರಸಿಂಹಮೂರ್ತಿ ರವರು, ಸುಶೃತಿ ಇನ್ಸಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಕೆ.ಆರ್.ಪುಂಡರೀಕ ವಿಠಲ ರವರ ಮಾರ್ಗದರ್ಶನದಲ್ಲಿ “ಎಂಪ್ಲಾಯೀಸ್ ಸ್ಟಾಕ್ ಆಪ್ಷನ್ ಪ್ಲಾನ್ಸ್ (ESOP) ಆಫ್ ಇನ್ಫರಮೇಶನ್ ಟೆಕ್ನಾಲಜಿ ಇಂಡಸ್ಟ್ರಿ” ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದ ಪಿ.ಹೆಚ್.ಡಿ. ಪದವಿಯನ್ನು ನೀಡಿದೆ.
ಟಿ.ಎನ್.ನರಸಿಂಹಮೂರ್ತಿ ರವರು ಮಧುಗಿರಿ ತಾಲ್ಲೂಕಿನ ತಿಪ್ಪಾಪುರ ಗ್ರಾಮದ ಟಿ.ಹೆಚ್.ನರಸಿಂಹಯ್ಯ ಮತ್ತು ರಾಮಲಕ್ಷ್ಮಮ್ಮ ರವರ ಜೇಷ್ಟ ಪುತ್ರರಾಗಿದ್ದು, ಈ ಹಿಂದೆ ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ. ತರಗತಿಯ ಸ್ಥಾಪಕ ಸಂಯೋಜಕರಾಗಿ, ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ, ನೂತನ ಕಟ್ಟಡ ನಿರ್ಮಾಣ, ಪ್ರವೇಶಾತಿ ಹೆಚ್ಚಳ, ಪರೀಕ್ಷಾ ಕೇಂದ್ರ ಮಂಜೂರಾತಿಗೆ ಶ್ರಮಿಸಿರುತ್ತಾರೆ. ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ, ತುಮಕೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದ ನಿರ್ದೇಶಕರಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಲು ಹಲವಾರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಾಣಿಜ್ಯಶಾಸ್ತ್ರ ವಿಷಯದಲ್ಲಿ ಏಳು ಪಠ್ಯ ಪುಸ್ತಕಗಳಿಗೆ ಸಹ ಲೇಖಕರಾಗಿ ಒಂದು ಅಭಿನಂದನ ಗ್ರಂಥ ಪ್ರಕಟಿಸಿದ್ದಾರೆ. ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.