
ಕೋಲ್ಕತ್ತಾದ ಕಸ್ಬಾ ಪ್ರದೇಶದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿದೆ.
ಕೋಲ್ಕತ್ತಾ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ, ಪಶ್ಚಿಮ ಬಂಗಾಳದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಬಲಾತ್ಕಾರವೆಸಗಿ ಕೊಲೆ ಮಾಡಿದ ಪ್ರಕರಣ ಮಾಸುವ ಮೊದಲೇ ಈಗ ಇನ್ನೊಂದು ಇಂತಹದ್ದೇ ರೀತಿಯ ಪೈಶಾಚಿಕ ಘಟನೆಯೊಂದು ನಡೆದಿದೆ. ಕೋಲ್ಕತ್ತಾ ಕಸ್ಬಾ ಪ್ರದೇಶದಲ್ಲಿ ಕಾಲೇಜಿನಲ್ಲಿಯೇ ಕಾನೂನು ವಿದ್ಯಾರ್ಥಿಯೊಬ್ಬಳ ಮೇಲೆ ಸಾಮೂಹಿಕವಾಗಿ ಬಲಾತ್ಕಾರ ಮಾಡಿದ ಪ್ರಕರಣ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಕಾಲೇಜಿನ ಸಿಬ್ಬಂದಿಯೇ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ವೈದ್ಯಕೀಯ ಪರೀಕ್ಷೆ ಸೇರಿದಂತೆ ಪ್ರಾಥಮಿಕ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಬಲತ್ಕಾರವೆಸಗಿದ ಆರೋಪಿಗಳನ್ನು ಮನೋಜ್ ಮಿಶ್ರಾ(31), ಜೈಬ್ ಅಹ್ಮದ್(19), ಪ್ರಮಿತ್ ಮುಖ್ಯೋಪಾಧ್ಯಾಯ ಅಲಿಯಾಸ್ ಪ್ರಮೀತ್ ಮುಖರ್ಜಿ ಎಂದು ಗುರುತಿಸಲಾಗಿದೆ.
ಜೂನ್ 25ರಂದು ಸಂಜೆ 7.30ರಿಂದ ರಾತ್ರಿ 10.50ರ ನಡುವೆ ಘಟನೆ ನಡೆದಿದೆ. ಸಂತ್ರಸ್ತ ಯುವತಿ ದೂರಿನ ನಂತರ ಕಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಹಾಗೆಯೇ ಹಲವರನ್ನು ವಿಚಾರಣೆ ನಡೆಸಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗಾಗಿ ಆ ಸ್ಥಳವನ್ನು ಸೀಜ್ ಮಾಡಲಾಗಿದೆ.
ಜೂನ್ 25ರಂದು ಘಟನೆ ನಡೆದಿದ್ದು, ಜೂನ್ 26ರಂದು ತಲ್ಟಗನ್ ಕ್ರಾಸಿಂಗ್‌ನಲ್ಲಿರುವ ಸಿದ್ಧಾರ್ಥ್ ಶಂಕರ್ ಉದ್ಯಾನದ ಬಳಿ ಆರೋಪಿಗಳಾದ ಮನೋಜಿತ್ ಹಾಗೂ ಜೈಬ್ ಅಹ್ಮದ್‌ನನ್ನು ಬಂಧಿಸಲಾಗಿದ್ದು, ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ ಮೂರನೇ ಆರೋಪಿ ಪ್ರಮೀತ್‌ನನ್ನುಇಂದು ಮುಂಜಾನೆ ಬಂಧಿಸಲಾಗಿದೆ. ಬಳಿಕ ಮೂವರನ್ನು ದಕ್ಷಿಣ 24 ಪರಗಣದ ಅಲಿಪೋರ್‌ನಲ್ಲಿರುವ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವೂ ಆರೋಪಿಗಳನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಘಟನೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಂ ಈ ಬಗ್ಗೆ ತನಗೆ ಹೆಚ್ಚಿನ ಮಾಹಿತಿ ಇಲ್ಲ ಪೊಲೀಸರ ಬಳಿ ವಿವರ ಪಡೆದು ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ, ‘ಭಯಾನಕ, ಜೂನ್ 25 ರಂದು ಕೋಲ್ಕತ್ತಾದ ಉಪನಗರವಾದ ಕಸ್ಬಾದಲ್ಲಿರುವ ಕಾನೂನು ಕಾಲೇಜಿನೊಳಗೆ ಮಹಿಳಾ ಕಾನೂನು ವಿದ್ಯಾರ್ಥಿನಿಯೊಬ್ಬಳ ಮೇಲೆ ಮಾಜಿ ವಿದ್ಯಾರ್ಥಿ ಹಾಗೂ ಇಬ್ಬರು ಕಾಲೇಜು ಸಿಬ್ಬಂದಿ ಸಾಮೂಹಿಕ ಬಲತ್ಕಾರ ಎಸಗಿದ್ದಾರೆ.
ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಭಯಾನಕ ಘಟನೆಯೇ ಇನ್ನು ಮಾಸಿಲ್ಲ, ಆದರೂ ಬಂಗಾಳದಲ್ಲಿ ಇಂತಹ ಘೋರ ಅಪರಾಧಗಳು ದಿನನಿತ್ಯ ಹೆಚ್ಚುತ್ತಲೇ ಇವೆ. ಮಮತಾ ಬ್ಯಾನರ್ಜಿ ಅವರ ಆಳ್ವಿಕೆಯಲ್ಲಿ ಬಂಗಾಳ ಮಹಿಳೆಯರಿಗೆ ದುಃಸ್ವಪ್ನವಾಗಿದೆ. ಬಲತ್ಕಾರವು ದಿನಚರಿಯಾಗಿ ಮಾರ್ಪಟ್ಟಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಕೂಡ ಟಿಎಂಸಿ ವಿರುದ್ಧ ಎಕ್ಸ್‌ನಲ್ಲಿ ವಾಗ್ದಾಳಿ ನಡೆಸಿದ್ದು, ಇದು, ನಾಚಿಕೆಗೇಡಿನ ಸಂಗತಿ, ಟಿಎಂಸಿ ಆಡಳಿತದ ಬಂಗಾಳದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಜೂನ್ 25 ರಂದು, ಕಸ್ಬಾ ಕಾನೂನು ಕಾಲೇಜಿನಲ್ಲಿ ಕಾಲೇಜು ಹುಡುಗಿಯೊಬ್ಬಳ ಮೇಲೆ ಸಾಮೂಹಿಕ ಬಲತ್ಕಾರ ನಡೆದಿದೆ. ಇದರಲ್ಲಿ ಇಬ್ಬರು ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಒಬ್ಬ ಮಾಜಿ ವಿದ್ಯಾರ್ಥಿ ಭಾಗಿಯಾದ ಬಗ್ಗೆ ವರದಿಯಾಗಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.