ಅಲ್ಲು ಅರ್ಜುನ್ (Allu Arjun), ‘ಪುಷ್ಪ’ ಸಿನಿಮಾ ಮೂಲಕ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ‘ಪುಷ್ಪ’ ಸಿನಿಮಾ ಅಲ್ಲು ಅರ್ಜುನ್ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳನ್ನು ದೊರಕಿಸಿಕೊಟ್ಟಿದೆ. ‘ಪುಷ್ಪ 2’ ಸಿನಿಮಾದ ಬಳಿಕ ಇದೀಗ ಅಲ್ಲು ಅರ್ಜುನ್, ಅಟ್ಲಿ ನಿರ್ದೇಶನದ ಹಾಲಿವುಡ್ ಮಾದರಿಯ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಾಯಕಿ. ಅಂದಹಾಗೆ, ‘ಪುಷ್ಪ’ ಮೊದಲ ಭಾಗದ ಬಳಿಕ ಅಲ್ಲು ಅರ್ಜುನ್ಗೆ ಬಾಲಿವುಡ್ನಿಂದಲೂ ಆಫರ್ಗಳು ಬರಲು ಆರಂಭವಾಗಿತ್ತು.
ಅಲ್ಲು ಅರ್ಜುನ್, ಸಂಜಯ್ ಲೀಲಾ ಬನ್ಸಾಲಿಯವರ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಸಂಜಯ್ ಲೀಲಾ ಬನ್ಸಾಲಿಯ ಕಚೇರಿಯಲ್ಲಿ ಅಲ್ಲು ಅರ್ಜುನ್ ಒಂದೆರಡು ಬಾರಿ ಕಾಣಿಸಿಕೊಂಡು ಸುದ್ದಿಗೆ ಪುಷ್ಠಿ ನೀಡಿದ್ದರು. ಆದರೆ ಆ ನಂತರ ಸುದ್ದಿ ಸುಳ್ಳಾಯ್ತು. ಆದರೆ ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ಸ್ಟಾರ್ ನಟರೊಬ್ಬರು ನಟಿಸಬೇಕಿದ್ದ ಸೂಪರ್ ಹೀರೋ ಸಿನಿಮಾನಲ್ಲಿ ಸ್ಟಾರ್ ನಟನ ಬದಲಿಗೆ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಭಾರತದ ಬಲು ಜನಪ್ರಿಯ ಸೂಪರ್ ಹೀರೋ ‘ಶಕ್ತಿಮಾನ್’ ಸಿನಿಮಾ ಆಗುತ್ತಿರವ ಸುದ್ದಿ ಕಳೆದ ವರ್ಷದಿಂದಲೂ ಹರಿದಾಡುತ್ತಿದೆ. ನಟ ರಣ್ವೀರ್ ಸಿಂಗ್ ಶಕ್ತಿಮಾನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ, ರಣ್ವೀರ್ ಸಿಂಗ್ ಬದಲಿಗೆ ಅಲ್ಲು ಅರ್ಜುನ್ ಅವರು ಶಕ್ತಿಮಾನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿದೆ. ಅಲ್ಲು ಅರ್ಜುನ್, ಶಕ್ತಿಮಾನ್ ಅವತಾರದಲ್ಲಿರುವ ಕೆಲವು ಎಐ ಜನರೇಟೆಡ್ ಪೋಸ್ಟರ್ಗಳು ಹರಿದಾಡುತ್ತಿವೆ.
ಇದನ್ನೂ ಓದಿ:ಮಲಯಾಳಂ ಯುವ ನಿರ್ದೇಶಕನಿಗೆ ಕಾಲ್ಶೀಟ್ ಕೊಟ್ಟ ಅಲ್ಲು ಅರ್ಜುನ್?
ಆದರೆ ಇದೀಗ ‘ಶಕ್ತಿಮಾನ್’ ಸಿನಿಮಾ ನಿರ್ದೇಶನ ಮಾಡಲಿರುವ ಮಲಯಾಳಂ ನಿರ್ದೇಶಕ ಬಾಸಿಲ್ ಜೋಸೆಫ್ ಈ ಬಗ್ಗೆ ಮಾತನಾಡಿದ್ದು, ‘ಶಕ್ತಿಮಾನ್’ ಸಿನಿಮಾಕ್ಕೆ ರಣ್ವೀರ್ ಸಿಂಗ್ ಅವರೇ ನಾಯಕನಾಗಿ ಇರಲಿದ್ದಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಅಂದಹಾಗೆ ಬಾಸಿಲ್ ಜೋಸೆಫ್ ಅವರು ಇತ್ತೀಚೆಗೆ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿ ಹೊಸ ಕತೆಯೊಂದನ್ನು ಹೇಳಿದ್ದರು. ಬಾಸಿಲ್ ಜೋಸೆಫ್ ಜೊತೆ ನಟಿಸಲು ಅಲ್ಲು ಅರ್ಜುನ್ ಎಸ್ ಎಂದಿದ್ದಾರೆ. ಆದರೆ ಆ ಸಿನಿಮಾ ಬಾಸಿಲ್ ಅವರ ‘ಶಕ್ತಿಮಾನ್’ ಪ್ರಾಜೆಕ್ಟ್ ಅಲ್ಲ ಎನ್ನಲಾಗುತ್ತಿದೆ.
ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ಜೊತೆಗೆ ಹಾಲಿವುಡ್ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಬಾಸಿಲ್ ಜೋಸೆಫ್ ಜೊತೆಗಿನ ಸಿನಿಮಾನಲ್ಲಿ ನಟಿಸಲಿದ್ದಾರೆ. ಇನ್ನು ರಣ್ವೀರ್ ಸಿಂಗ್ ಪ್ರಸ್ತುತ ‘ಡಾನ್ 3’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಫರ್ಹಾನ್ ಅಖ್ತರ್ ನಿರ್ದೇಶನ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ