ಸಿದ್ ಶ್ರೀರಾಮ್ ಹಾಡಿರುವ ‘ಅಂದೊಂದಿತ್ತು ಕಾಲ’ (Andondittu Kaala) ಸಿನಿಮಾದ ‘ಮುಂಗಾರು ಮಳೆಯಲ್ಲಿ..’ ಹಾಡು ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿದೆ. 36 ಮಿಲಿಯನ್ಗಿಂತಲೂ ಅಧಿಕ ವೀಕ್ಷಣೆ ಕಂಡಿದೆ. ಆ ಯಶಸ್ಸಿನ ಬಳಿಕ ಚಿತ್ರತಂಡದವರು 2ನೇ ಹಾಡನ್ನು ಈಗ ರಿಲೀಸ್ ಮಾಡಿದ್ದಾರೆ. ಮಲ್ಲಸಂದ್ರದ ಬಿ .ಎನ್.ಆರ್. ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ರಿಲೀಸ್ ಮಾಡಿಸಿದ್ದು ವಿಶೇಷವಾಗಿತ್ತು. ಈ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ನಟ ವಿನಯ್ ರಾಜ್ಕುಮಾರ್ (Vinay Rajkumar) ಅವರು ಮಾತನಾಡಿದರು. ಮೊದಲ ಸಾಂಗ್ ಹಿಟ್ ಆಗಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಎರಡನೇ ಹಾಡು ಸಹ ಹಿಟ್ ಆಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
‘ಇದು ನನ್ನ ಇಷ್ಟದ ಗೀತೆ. ಈ ಹಾಡನ್ನೇ ಮೊದಲು ಬಿಡುಗಡೆ ಮಾಡಿ ಎಂದು ನಾನು ನಿರ್ದೇಶಕ ಕೀರ್ತಿಗೆ ಹೇಳಿದ್ದೆ. ಈ ಸಿನಿಮಾದಲ್ಲಿ ನಾನು 16 ವರ್ಷದ ಹುಡುಗನ ಗೆಟಪ್ನಲ್ಲಿ ಕಾಣಿಸಿಕೊಳ್ಳುವುದು ಚಾಲೆಂಜಿಂಗ್ ಆಗಿತ್ತು. ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿಜ ಜೀವನದಲ್ಲಿ 10ನೇ ತರಗತಿ ಓದುವಾಗ ನಾನು ಬಹಳ ಮುಗ್ಧ ಹುಡುಗ. ಮೂರು ಶೇಡ್ಗಳಲ್ಲಿ ನನ್ನ ಪಾತ್ರ ಸಾಗುತ್ತದೆ’ ಎಂದು ಅವರು ಹೇಳಿದರು.
ನಟಿ ನಿಶಾ ರವಿಕೃಷ್ಣನ್ ಅವರು ಈ ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ ಜೊತೆ ಶಾಲಾ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಕೂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಈ ಸಿನಿಮಾದಲ್ಲಿ ನನ್ನದು ಒಂದು ಸಣ್ಣ ಪಾತ್ರವಾದರೂ ಬಹಳ ಪ್ರಾಮುಖ್ಯತೆ ಇದೆ. ನಿರ್ದೇಶಕರು, ನಿರ್ಮಾಪಕರು ತುಂಬಾ ಸಹಕಾರ ನೀಡಿದರು. ವಿನಯ್ ರಾಜ್ಕುಮಾರ್ ಅವರ ಜೊತೆ ನಟಿಸಿದ್ದು ಖುಷಿ ತಂದಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ
ಈ ಸಿನಿಮಾಗೆ ಕೀರ್ತಿ ಕೃಷ್ಣಪ್ಪ ನಿರ್ದೇಶನ ಮಾಡಿದ್ದಾರೆ. ಇದು ಅವರ ನಿರ್ದೇಶನದಲ್ಲಿ ಬರುತ್ತಿರುವ ಮೊದಲ ಸಿನಿಮಾ. ‘ಸಿನಿಮಾ ಉತ್ತಮವಾಗಿ ಮೂಡಿಬರಲು ನಿರ್ಮಾಪಕ ಭುವನ್ ಸುರೇಶ್ ಬಹಳಷ್ಟು ಸಪೋರ್ಟ್ ಮಾಡುತ್ತಿದ್ದಾರೆ. ನಮ್ಮ ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ ಬಹಳ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ’ ಎಂದರು ನಿರ್ದೇಕರು.

Andondittu Kaala Movie Team
‘ಅರೇರೇ ಯಾರೋ ಇವಳು..’ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದಾರೆ. ರಾಘವೇಂದ್ರ ವಿ. ಅವರು ಸಂಗೀತ ನೀಡಿದ್ದಾರೆ. 90ರ ಕಾಲಘಟ್ಟವನ್ನು ಈ ಹಾಡು ನೆನಪಿಸುತ್ತದೆ. ಸಿನಿಮಾದಲ್ಲಿ ಇನ್ನೂ ಮೂರು ಹಾಡುಗಳಿವೆ. ಒಂದೊಂದಾಗಿಯೇ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಸದ್ಯದಲ್ಲೇ ಟ್ರೇಲರ್ ಬರಲಿದೆ. ಆಗಸ್ಟ್ 29ರಂದು ಸಿನಿಮಾ ರಿಲೀಸ್ ಆಗಲಿದೆ.
ಇದನ್ನೂ ಓದಿ: ಸಿನಿಮಾ ಸೋಲು, ವಿವಾದದ ನಡುವೆಯೂ ಕಮಲ್ ಹಾಸನ್ಗೆ ಸಿಕ್ತು ಆಸ್ಕರ್ ಗೌರವ
ವಿನಯ್ ರಾಜ್ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್ ಜೊತೆ ಅರುಣಾ ಬಾಲರಾಜ್, ಜಗ್ಗಪ್ಪ ಮುಂತಾದವರು ನಟಿಸಿದ್ದಾರೆ. ರವಿಚಂದ್ರನ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ‘ಭುವನ್ ಮ್ಯೂವಿಸ್’ ಮೂಲಕ ಭುವನ್ ಸುರೇಶ್ ನಿರ್ಮಾಣ ಮಾಡಿದ್ದಾರೆ. ಅಭಿಷೇಕ್ ಕಾಸರಗೋಡು ಅವರು ಛಾಯಾಗ್ರಹಣ ಮಾಡಿದ್ದಾರೆ. ಕೀರ್ತಿ ಅವರ ಸಂಕಲನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.