ವಂದೇ ಭಾರತ್ ರೈಲಿನಲ್ಲಿ ಸೀಟು ಬಿಟ್ಟುಕೊಟ್ಟಿಲ್ಲ ಎಂದು ಶಾಸಕ ತನ್ನ ಬೆಂಬಲಿಗರ ಕರೆಯಿಸಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಲಖನೌ( ಜೂ.23) ರಾಜಕಾರಣಿಗಳ ಜೀವನದಲ್ಲಿ ಕುರ್ಚಿಗೆ ಎಲ್ಲಿದ್ದ ಪ್ರಾಮುಖ್ಯತೆ. ಕುರ್ಚಿ ಜಗಳದಲ್ಲಿ ಸರ್ಕಾರವೇ ಬಿದ್ದ ಉದಾಹರಣೆಗಳಿವೆ. ಹೀಗೆ ಕುರ್ಚಿ ಮದದಲ್ಲಿರುವ ಶಾಸಕನೊಬ್ಬ ತಾನು ವಂದೇ ಭಾರತ್ ರೈಲಿನಲ್ಲಿದ್ದೇನೆ ಅನ್ನೋದು ಮರೆತು ಪ್ರಯಾಣಿಕನಿಗೆ ಥಳಿಸಿದ ಘಟನೆ ನಡೆದಿದೆ. ಶಾಸಕ ಹಾಗೂ ಆತನ ಕುಟುಂಬಕ್ಕೆ ಸೀಟು ಬಿಟ್ಟುಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಶಾಸಕ ತನ್ನ ಬೆಂಬಲಿಗರನ್ನು ಕರೆಯಿಸಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಘಟನೆ ದೆಹಲಿ ಬೋಪಾಲ್ ವಂದೇ ಭಾರತ್ ರೈಲಿನಲ್ಲಿ ನಡೆದಿದೆ. ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಜೀವ್ ಸಿಂಗ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಸೀಟ್ ಬುಕ್ ಮಾಡಿ ಕುಳಿತ ಪ್ರಯಾಣಿಕನಿಗೆ ಥಳಿತ
ಉತ್ತರ ಪ್ರದೇಶಧ ಝಾನ್ಸಿ ಕ್ಷೇತ್ರದ ಶಾಸಕ ರಾಜೀವ್ ಸಿಂಗ್ ತನ್ನ ಕುಟುಂಬದೊಂದಿಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಆದರೆ ಶಾಸಕ ರಾಜೀವ್ ಕೆಲ ಸಾಲುಗಳ ಹಿಂದಿನ ಸೀಟಿನಲ್ಲಿ ಕುಳಿತಿದ್ದರೆ, ಪತ್ನಿ ಹಾಗೂ ಮಕ್ಕಳ ಸೀಟು ಮುಂದಿತ್ತು. ಕುಟುಂಬ ಸದಸ್ಯರ ಸೀಟಿನ ಪಕ್ಕದಲ್ಲೇ ಮತ್ತೊರ್ವ ಪ್ರಯಾಣಿಕನ ಸೀಟು ಬುಕ್ ಆಗಿತ್ತು. ತಕ್ಕ ಸಮಯಕ್ಕೆ ಬಂದ ಪ್ರಯಾಣಿಕ ತಾನು ಬುಕ್ ಮಾಡಿದ ಸೀಟಿನಲ್ಲಿ ಕುಳಿತುಕೊಂಡಿದ್ದಾನೆ. ಇತ್ತ ಕೆಲ ಹೊತ್ತಿನ ಬಳಿಕ ಶಾಸಕ ರಾಜೀವ್ ಸಿಂಗ್ ಹಾಗೂ ಆತನ ಕುಟುಂಬ ವಂದೇ ಭಾರತ್ ರೈಲು ಹತ್ತಿದೆ.
ರಾಜೀವ್ ಸಿಂಗ್ ಸೀಟು ಹಿಂಭಾಗದಲ್ಲಿದ್ದರೆ, ಕುಟುಂಬಸ್ಥರ ಸೀಟುು ಮುಂಭಾಗದಲ್ಲಿತ್ತು. ಇದು ಹೊಸ ವಿಚಾರವಲ್ಲ. ಬಹುತೇಕರು ಮನವಿ ಮಾಡಿಕೊಂಡು ಸೀಟು ಬದಲಾಯಿಸುತ್ತಾರೆ. ಆದರೆ ಇಲ್ಲಿ ಶಾಸಕ ತನ್ನ ಅಧಿಕಾರ, ದರ್ಪ ತೋರಿಸಿದ್ದಾನೆ. ಸೀಟು ಬಿಟ್ಟುಕೊಡುವಂತೆ ಗದರಿಸಿದ್ದಾನೆ. ಈ ಸೀಟು ತನಗೆ ಬಿಟ್ಟುಕೊಡು ಎಂದು ಗದರಿಸಲು ಆರಂಭಿಸಿದ್ದಾನೆ. ಶಾಸಕ ಒಂದು ಮನವಿ ಮಾಡಿದ್ದರೆ, ಪ್ರಯಾಣಿಕ ಸೀಟು ಬಿಟ್ಟುಕೊಡುತ್ತಿದ್ದ. ಆದರೆ ಗದರಿಸಿದ ಕಾರಣ ಸೀಟು ಬಿಟ್ಟುಕೊಡುವುದಿಲ್ಲ ಎಂದಿದ್ದಾನೆ.
Scroll to load tweet…
ಬೆಂಬಲಿಗರ ಕರೆಯಿಸಿದ ಶಾಸಕ
ಆಕ್ರೋಶಗೊಂಡ ಶಾಸಕ ರಾಜೀವ್ ಸಿಂಗ್ ತನ್ನ ಬೆಂಬಲಿಗರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ವಂದೇ ಭಾರತ್ ರೈಲು ಝಾನ್ಸಿ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಶಾಸಕನ ಬೆಂಬಲಿಗರು, ಗೂಂಡಾಗಳು ಹಾಜರಾಗಿದ್ದರು. ರೈಲು ನಿಲ್ದಾಣಲ್ಲಿ ನಿಲುಗಡೆಯಾಗುತ್ತಿದ್ದಂತೆ ಶಾಸಕನ ಕೆಲ ಬೆಂಬಲಿಗರು ರೈಲು ಬೋಗಿಗೆ ಹತ್ತಿ ಪ್ರಯಾಣಿಕನ ಮೇಲೆ ಹಿಗ್ಗಾ ಮುಗ್ಗಾ ದಾಳಿ ಮಾಡಿದ್ದಾರೆ. ಮುಖ ಮೂತಿ ನೋಡದೆ ಥಳಿಸಿದ್ದಾರೆ. ಸಿಕ್ಕ ಸಿಕ್ಕ ವಸ್ತುಗಳಿಂದ ಥಳಿಸಿದ್ದಾರೆ. ಬಳಿಕ ಝಾನ್ಸಿ ನಿಲ್ದಾಣದಲ್ಲೇ ರೈಲಿನಿಂದ ಹೊರಹಾಕಿದ್ದಾರೆ. ಶಾಸನಕ ಬೆಂಬಲಿಗರೂ ಗೂಂಡಾ ವರ್ತನೆ ವಿಡಿಯೋ ಸೆರೆಯಾಗಿದೆ.
ದೂರು ದಾಖಲಿಸಿದ ಶಾಸಕ
ಶಾಸಕ ರಾಜೀವ್ ಈ ಕುರಿತು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಸಹ ಪ್ರಯಾಣಿಕ ಕುಟುಂಬಸ್ಥರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ ಕೆಲವರು ಥಳಿಸಿದ್ದಾರೆ ಎಂದಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಆದರೆ ರೈಲಿನ ಹಲವು ಪ್ರಯಾಣಿಕರು ಸೀಟಿಗಾಗಿ ನಡೆದ ಜಗಳ ಎಂದಿದ್ದಾರೆ.