
ಶಿರಾ : ನೀರಾವರಿ ಹರಿಕಾರ,
ಪ್ರಬುದ್ಧ ರಾಜಕಾರಣಿ, 50 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಅತ್ಯಂತ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ, ಅಭಿವೃದ್ಧಿಯಲ್ಲಿ ಯುವ ರಾಜಕಾರಣಿಗಳಿಗೆ ಆದರ್ಶವಾಗಿರುವ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರರವರಿಗೆ ಸಂಪುಟ ಪುನರ್ ರಚನೆಯಲ್ಲಿ ಸಚಿವ ಸ್ಥಾನ ನೀಡುವಂತೆ ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.
ಶಿರಾ ತಾಲೂಕಿನ ಓಜುಗುಂಟೆ ಗ್ರಾಮದಲ್ಲಿ ಶುಕ್ರವಾರ ನಡೆದ ಜೀರಿಗೆ ಅಮ್ಮಾಜಿಗೆ ಸೇರಿದ ಓಜು ಗುಂಟೆ ಅಮಾವಾಸ್ಯೆ ಬುಡಕಟ್ಟಿಗೆ ಸೇರಿದ ಶ್ರೀ ಮಹಾಲಕ್ಷ್ಮಿ ಅಮ್ಮನವರ ನೂತನ ಚರಬಿಂಬ ಪ್ರತಿಷ್ಠಾಪನೆ ಮತ್ತು ನೇತ್ರೋನ್ಮಿಲನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.
ಒಬ್ಬ ಮನುಷ್ಯ ದೇವಸ್ಥಾನಕ್ಕೆ ಹೋದ ಮೇಲೆ ತನ್ನೆಲ್ಲ ಅಂಧಕಾರ ಅಜ್ಞಾನ ದೂರ ಮಾಡಿಕೊಂಡು ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳುವಂತಹ ಸಂಕಲ್ಪ ಮಾಡಬೇಕು.
ಇದ್ದಷ್ಟು ದಿನ ಒಳ್ಳೆಯ ಕೆಲಸ ಮಾಡಬೇಕು, ತನ್ನತನವನ್ನು ಬಿಟ್ಟು ಮನುಷ್ಯ ಬದುಕಬಾರದು.
ಹಬ್ಬ ,ಜಾತ್ರೆ, ದೇವತಾ ಉತ್ಸವಗಳು ಮನಸ್ಸಿನ ಗೊಂದಲ ದೂರ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತವೆ. ಎಲ್ಲರೂ ನಮ್ಮವರೇ ಎಂಬ ಭಾವನೆ ಯೊಂದಿಗೆ ಬದುಕು ಕಟ್ಟು ಕೊಂಡಾಗ, ಸಮಾಜ ನಮ್ಮನ್ನು ಗೌರವಿಸಲಿದ್ದು ಯಶಸ್ವಿ ಜೀವನ ನಿಮ್ಮದಾಗಲಿದೆ.
ಶ್ರೀ ಮಹಾಲಕ್ಷ್ಮಿ ತಾಯಿ ನಾಡಿಗೆ ಸುಭಿಕ್ಷೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಕಾಂಗ್ರೆಸ್ ಯುವ ನಾಯಕ ಸಂಜಯ್ ಜಯಚಂದ್ರ ಮಾತನಾಡಿ ಶಿರಾ ಕ್ಷೇತ್ರದ ಬರ ನೀಗಿಸಬೇಕೆಂಬ ದೂರ ದೃಷ್ಟಿ ಆಲೋಚನೆಯೊಂದಿಗೆ 22 ವರ್ಷಗಳಿಂದ ಸತತವಾಗಿ ಹೇಮಾವತಿ ನೀರು ಶಿರಾ ಕ್ಷೇತ್ರಕ್ಕೆ ಹರಿದು ಕೆರೆಗಳು ಭರ್ತಿಯಾದ ಕಾರಣ, ಇಂತಹ ಮಳೆಯ ಕೊರತೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉದ್ದವಾಗಿಲ್ಲ, ದೂರ ದೃಷ್ಟಿ ಅಭಿವೃದ್ಧಿಯ ಹರಿಕಾರ ಶಾಸಕ ಟಿ.ಬಿ. ಜಯಚಂದ್ರರವರು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ರಾಜ್ಯಕ್ಕೆ ಮಾದರಿ. ಗ್ರಾಮಗಳಲ್ಲಿ ನೂತನ ದೇವಸ್ಥಾನ ಸ್ಥಾಪನೆ ಮಾಡಿ ದೇವರಿಗೆ ಶ್ರದ್ಧೆ ಭಕ್ತಿ ಹಾಗೂ ಮುಗ್ಧ ಮನಸ್ಸಿನಿಂದ ಆರಾಧಿಸಿದರೆ ತಮ್ಮೆಲ್ಲ ಇಷ್ಟಾರ್ಥಗಳು ಸಿದ್ಧಿಗೊಳಲಿವೆ. ಶ್ರೀ ಮಹಾಲಕ್ಷ್ಮಿ ತಾಯಿ ಸರ್ವರಿಗೂ ಒಳಿತನ್ನು ಮಾಡಲಿ ಎಂದರು.
ಶ್ರೀ ಮಹಾಲಕ್ಷ್ಮಿ ಅಮ್ಮನವರಿಗೆ ನೂರಾರು ಮಹಿಳೆಯರು ಆರತಿ ಉತ್ಸವ ನೆರವೇರಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಪೂಜಾರ್ ಗಿರಿಯಪ್ಪ, ಓಜುಗುಂಟೆ, ಮಂಚಲ ದೊರೆ ಮಠ, ಜೋಗಿಹಳ್ಳಿ, ಯರಬಳ್ಳಿ, ಕುಂಟೆ ರಾಮನ ಹಟ್ಟಿ, ಮತೀಕೆರೆ ಗ್ರಾಮಗಳ ಅಣ್ಣ- ತಮ್ಮಂದಿರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.