ಶ್ರಾವಣಿ ಸುಬ್ರಮಣ್ಯ ಧಾರಾವಾಹಿಗೆ ಲಕ್ಷ್ಮೀ ನಿವಾಸದ ನಟ ಆಗಮಿಸುವ ಸಾಧ್ಯತೆಗಳಿವೆ. ಶ್ರಾವಣಿ ಕೊರಳಲ್ಲಿರುವ ತಾಳಿ ತಾಯಿಯದ್ದು ಎಂದು ತಿಳಿದು, ಅದನ್ನು ನೀಡಿದ ವ್ಯಕ್ತಿಯನ್ನು ಹುಡುಕುತ್ತಿದ್ದಾಳೆ.
ಬೆಂಗಳೂರು: ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ಗೆ ಲಕ್ಷ್ಮೀ ನಿವಾಸದ ನಟನ ಆಗಮನವಾಗುವ ಸಾಧ್ಯತೆಗಳಿವೆ. ಶುಕ್ರವಾರದ ಸಂಚಿಕೆಯಲ್ಲಿ ಈ ಬಗ್ಗೆ ವೀಕ್ಷಕರಿಗೆ ಮಹತ್ವದ ಸುಳಿವು ನೀಡಲಾಗಿದೆ. ಒಂದೇ ವಾಹಿನಿಯ ಸೀರಿಯಲ್‌ಗಳಲ್ಲಿ ಒಬ್ಬರು ಮತ್ತೊಬ್ಬರು ಇನ್ನೊಂದು ಧಾರಾವಾಹಿಗಳಿಗೆ ಅತಿಥಿಯಾಗಿ ತೆರಳುತ್ತಾರೆ. ಆದ್ರೆ ಇದೀಗ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ಗೆ ಬಿಗ್ ಟ್ವಿಸ್ಟ್ ನೋಡಲು ಲಕ್ಷ್ಮೀ ನಿವಾಸದ ವೆಂಕಿ ಆಗಮಿಸೋದು ಬಹುತೇಕ ಪಕ್ಕಾ ಆಗಿದೆ. ಇತ್ತೀಚಿನ ಸಂಚಿಕೆಯಲ್ಲಿ ಶ್ರಾವಣಿ ಕೊರಳಲ್ಲಿರೋದು ಮಗಳು ನಂದಿನಿದು ಎಂದು ಅಜ್ಜಿ ಕಂಡು ಹಿಡಿದಿದ್ದಾರೆ. ತನ್ನ ಕೊರಳಲ್ಲಿರೋದು ಅಮ್ಮನ ತಾಳಿ ಎಂದು ಶ್ರಾವಣಿ ಆಶ್ಚರ್ಯದ ಜೊತೆ ಖುಷಿಯಾಗಿದ್ದಾಳೆ. ಈ ಮೂಲಕ ಅಮ್ಮ ತನ್ನೊಂದಿಗೆ ಇದ್ದಾಳೆ ಎಂದು ಶ್ರಾವಣಿ ನಂಬಿದ್ದಾಳೆ.
ತಾನು ಧರಿಸಿರೋದು ಅಮ್ಮನ ಮಾಂಗಲ್ಯ ಎಂಬ ವಿಷಯವನ್ನು ಸುಬ್ಬು ಜೊತೆ ಶ್ರಾವಣಿ ಹಂಚಿಕೊಂಡಿದ್ದಾಳೆ. ಈ ತಾಳಿ ನಿಮಗೆ ತಂದು ಕೊಟ್ಟಿದ್ಯಾರು ಎಂಬುದನ್ನು ನೆನಪು ಮಾಡಿಕೊಳ್ಳುವಂತೆ ಸುಬ್ಬು ಹೇಳುತ್ತಾನೆ. ಇದಕ್ಕೆ ಶ್ರಾವಣಿ, ಅವರು ಮದುವೆಗೆ ಹೂವಿನ ಅಲಂಕಾರ ಮಾಡಲು ಬಂದಿದ್ದರು. ಆ ವ್ಯಕ್ತಿಗೆ ಮಾತು ಬರುತ್ತಿರಲಿಲ್ಲ, ಆತನಿಗೆ ಕಿವಿ ಕೇಳಿಸುತ್ತಿರಲಿಲ್ಲ. ಆತ ನಿನಗೆ ಗೊತ್ತಿರುವ ವ್ಯಕ್ತಿ ಎಂದು ಶ್ರಾವಣಿ ಕೆಲವೊಂದು ಮಾಹಿತಿ ನೀಡುತ್ತಾಳೆ.
ಈ ಹಿಂದಿನ ಸಂಚಿಕೆಯಲ್ಲಿ ಶ್ರಾವಣಿ ಮತ್ತು ಮದನ್ ಮದುವೆಗೆ ಹೂವಿನ ಅಲಂಕಾರ ಮಾಡಲು ವೆಂಕಿ-ಚೆಲುವಿಗೆ ಸುಬ್ಬು ಆರ್ಡರ್ ನೀಡಿರುತ್ತಾನೆ. ಇದೇ ವೇಳೆ ವಿಜಯಾಂಬಿಕೆ ಬಂಧನದಲ್ಲಿರುವ ವ್ಯಕ್ತಿ ತಪ್ಪಿಸಿಕೊಂಡು ಕಲ್ಯಾಣಮಂಟಪದತ್ತ ಬರುತ್ತಿರುತ್ತಾನೆ. ಆ ವ್ಯಕ್ತಿಯನ್ನು ವೆಂಕಿಯೇ ಕಲ್ಯಾಣಮಂಟಪಕ್ಕೆ ಕರೆದುಕೊಂಡು ಬರುತ್ತಾಳೆ. ಶ್ರಾವಣಿಯನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗದ ಹಿನ್ನೆಲೆ ತನ್ನ ಬಳಿಯಲ್ಲಿರುವ ಮಾಂಗಲ್ಯ ಸರವನ್ನು ವಧುವಿಗೆ ತಲುಪಿಸುವಂತೆ ವೆಂಕಿ ಬಳಿ ಮನವಿ ಮಾಡಿಕೊಳ್ಳುತ್ತಾನೆ.
ವೆಂಕಿ ಸಹ ಬಟ್ಟೆಯಲ್ಲಿರೋದು ಮಾಂಗಲ್ಯ ಸರ ಎಂದು ತಿಳಿಯದೇ ಶ್ರಾವಣಿ ಕೋಣೆಗೆ ತೆರಳಿ ನೀಡುತ್ತಾಳೆ. ಆದ್ರೆ ವೆಂಕಿ ಹೇಳಿದ ಮಾತುಗಳು ಶ್ರಾವಣಿಗೆ ಅರ್ಥವಾಗಲ್ಲ. ಮದನ್ ಜೊತೆಗಿನ ಮದುವೆ ನಿಲ್ಲಿಸಲು ಸಾಧ್ಯವಾಗದೇ ಅಸಹಾಯಕಳಾಗಿದ್ದ ಸಂದರ್ಭದಲ್ಲಿ ವೆಂಕಿ ನೀಡಿದ ಮಾಂಗಲ್ಯ ಶ್ರಾವಣಿ ಕೈಗೆ ಸಿಗುತ್ತದೆ. ಇದೇ ತಾಳಿಯನ್ನು ಧರಿಸಿಕೊಂಡು ಹೆಸೆಮಣೆ ಏರುತ್ತಾಳೆ. ಮದನ್ ತಾಳಿ ಕಟ್ಟುವ ಸಂದರ್ಭದಲ್ಲಿ ತಾಳಿ ತೋರಿಸಿ, ಸುಬ್ಬು ನನ್ನ ಗಂಡ ಎಂದು ಶ್ರಾವಣಿ ಹೇಳುತ್ತಾಳೆ.
ವೆಂಕಿಗಾಗಿ ಹುಡುಕಾಟ!
ಇದೀಗ ವೆಂಕಿ ನೀಡಿರುವ ತಾಳಿ ತನ್ನ ಅಮ್ಮನದು ಎಂಬ ವಿಷಯ ಶ್ರಾವಣಿಗೆ ಗೊತ್ತಾಗಿದೆ. ಇದೀಗ ಸುಬ್ಬು ಸಹಾಯದಿಂದಲೇ ವೆಂಕಿಯನ್ನು ಹುಡುಕಲು ಶ್ರಾವಣಿ ಮುಂದಾಗಿದ್ದಾಳೆ. ವೆಂಕಿ ಸಿಕ್ಕರೆ ಆ ಮಾಂಗಲ್ಯ ಸರ ನೀಡಿದ್ಯಾರು ಎಂಬ ವಿಷಯ ಶ್ರಾವಣಿಗೆ ಗೊತ್ತಾಗಲಿದೆ. ಹಾಗಾಗಿ ಶ್ರಾವಣಿ ಸುಬ್ರಮಣ್ಯದಲ್ಲಿ ವೆಂಕಿಯ ಪಾತ್ರ ಧಾರಾವಾಹಿಗೆ ರೋಚಕ ತಿರುವು ನೀಡಲಿದೆ. ಇದರಿಂದ ವಿಜಯಾಂಬಿಕೆ ಅಸಲಿ ಮುಖವೂ ಗೊತ್ತಾಗಲಿದೆ. ಈಗಾಗಲೇ ತನ್ನ ಜೊತೆಯಲ್ಲಿ ಅಮ್ಮ ಇದ್ದಾಳೆ ಎಂಬ ವಿಷಯವನ್ನು ವಿಜಯಾಂಬಿಕೆಗೆ ಶ್ರಾವಣಿ ತಿಳಿಸಿದ್ದಾಳೆ.