ಬೆಂಗಳೂರು: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲೂ ಆಕರ್ಷಕ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಡಿಂಗ್ಲೆ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಪಂತ್ ಶತಕ ಸಿಡಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದಷ್ಟೇ ಅಲ್ಲದೇ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರು.

ಆದರೆ ದುರಾದೃಷ್ಟವಶಾತ್ ರಿಷಭ್ ಪಂತ್ ಸಿಡಿಸಿದ ಶತಕದ ಹೊರತಾಗಿಯೂ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 5 ವಿಕೆಟ್ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ನಿರ್ಭೀತ ಹಾಗೂ ವಿಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ಟೀಕೆಗೆ ಗುರಿಯಾಗಿದ್ದರು.

ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ 5 ಪಂದ್ಯಗಳನ್ನಾಡಿ ಕೇವಲ 28.33ರ ಬ್ಯಾಟಿಂಗ್ ಸರಾಸರಿಯಲ್ಲಿ 255 ರನ್ ಗಳಿಸಿದ್ದರು. ಪಂತ್ ಆಸೀಸ್ ಎದುರು 24 ಬೌಂಡರಿ ಹಾಗೂ ಕೇವಲ ಒಂದು ಸಿಕ್ಸರ್ ಸಿಡಿಸಲಷ್ಟೇ ಶಕ್ತವಾಗಿದ್ದರು. ಈ ಟೆಸ್ಟ್ ಸರಣಿಯನ್ನು ಭಾರತ 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಇದರ ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಿತ್ತು. ಇನ್ನು ಇದೆಲ್ಲದರ ನಡುವೆ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ರ್ಯಾಂಪ್ ಶಾಟ್ ಬಾರಿಸುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದ್ದು ಸುನಿಲ್ ಗವಾಸ್ಕರ್ ಆಕ್ರೋಶಕ್ಕೆ ಕಾರಣವಾಗಿತ್ತು. ವೀಕ್ಷಕ ವಿವರಣೆಗಾರಿಕೆ ಮಾಡುತ್ತಿದ್ದ ಸನ್ನಿ, ರಿಷಭ್ ಪಂತ್ ಬ್ಯಾಟಿಂಗ್ ಸ್ಟೈಲ್ ಉಲ್ಲೇಖಿಸಿ, ‘ಸ್ಟುಪಿಡ್, ಸ್ಟುಪಿಡ್, ಸ್ಟುಪಿಡ್’ ಎಂದು ಅಸಮಾಧಾನ ಹೊರಹಾಕಿದ್ದರು.

ಇದೀಗ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮೆಲ್ಬರ್ನ್ ಟೆಸ್ಟ್ ಸೋಲಿನ ಬಳಿಕ ರಿಷಭ್ ಪಂತ್ ಕಠಿಣ ಅಭ್ಯಾಸ ಮಾಡಲು ತೀರ್ಮಾನಿಸಿದ್ದರು. ಪ್ರಾಕ್ಟೀಸ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಏಕಾಗ್ರತೆ ಸಾಧಿಸಲು ರಿಷಭ್ ಪಂತ್ ವಾಟ್ಸ್‌ಅಪ್ ಅನ್‌ಇನ್‌ಸ್ಟಾಲ್ ಮಾಡಿದ್ದರು ಹಾಗೆಯೇ ಮೊಬೈಲ್ ಸ್ವಿಚ್ಡ್‌ಆಪ್ ಮಾಡಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ.

’ಮೆಲ್ಬರ್ನ್ ಟೆಸ್ಟ್ ಮುಗಿದ ಬಳಿಕ ಅವರು ಪ್ರತಿನಿತ್ಯ ಕ್ರಿಕೆಟ್ ಅಭ್ಯಾಸ ಮಾಡಲಾರಂಭಿಸಿದರು. ಅವರು ಬಿಡುವಿದ್ದಾಗಲೆಲ್ಲಾ ನನ್ನನ್ನು ಜಿಮ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ವರ್ಕ್‌ಲೋಡ್ ಬಗ್ಗೆಯಾಗಲಿ, ಆಯಾಸದ ಬಗ್ಗೆಯಾಗಲಿ ಹೆಚ್ಚು ತಲೆಕೆಡಿಸಿಕೊಳ್ಳಲೇ ಇಲ್ಲ’ ಎಂದು ಟೀಂ ಇಂಡಿಯಾ ಮಾಜಿ ಸ್ಟ್ರೆಂಥ್ ಅಂಡ್ ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಹೇಳಿದ್ದಾರೆ.

ಹೆಡಿಂಗ್ಲೆ ಟೆಸ್ಟ್‌ನಲ್ಲಿ ರಿಷಭ್ ಪಂತ್ ಆಕರ್ಷಕ ಶತಕ ಸಿಡಿಸುತ್ತಿದ್ದಂತೆಯೇ ಅದೇ ಸುನಿಲ್ ಗವಾಸ್ಕರ್, ಪಂತ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಷ್ಟೇ ಅಲ್ಲದೇ ಪಂತ್ ಬ್ಯಾಟಿಂಗ್ ಬಗ್ಗೆ ಸೂಪರ್, ಸೂಪರ್, ಸೂಪರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿರುವುದರಿಂದ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ. ವಿಕೆಟ್ ಕೀಪರ್ ಬ್ಯಾಟರ್ ಜತೆಗೆ ಉಪನಾಯಕನಾಗಿಯೂ ರಿಷಭ್ ಪಂತ್ ತಂಡಕ್ಕೆ ಆಸರೆಯಾಗಬೇಕಿದೆ. ರಿಷಭ್ ಪಂತ್ ಇದೇ ಫಾರ್ಮ್ ಮುಂದುವರೆಸಿಕೊಂಡು ಹೋಗ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Source link
ಸನ್ನಿ ಆ ಒಂದು ಮಾತಿಗೆ ವಾಟ್ಸ್‌ಆಪ್ ಅನ್ಇನ್‌ಸ್ಟಾಲ್, ಫೋನ್ ಸ್ವಿಚ್ ಆಫ್ ಮಾಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ!