ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಬಾದಾಮಿ ಅಭಿವೃದ್ಧಿಗೆ ಕೇಂದ್ರದಿಂದ ಸಹಾಯ ಪಡೆಯಲು ಸೂಚಿಸಿದ್ದಾಗಿ ತಿಳಿಸಿದರು. ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂದೂ ಅವರು ಹೇಳಿದರು.
ಬೆಂಗಳೂರು (ಜೂ.25): ಸರ್ಕಾರದ ಬಳಿ ಹಣ ಇಲ್ಲ ಅಂತಾ ನಾನು ಹೇಳಿಯೇ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು.
ಬಾಗಲಕೋಟೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಅಭಿವೃದ್ಧಿಗೆ ನಮ್ಮ ಬಳಿ ಹಣ ಇಲ್ಲ, ಸಿದ್ದರಾಮಯ್ಯರ ಬಳಿಯೂ ಇಲ್ಲ. ದೊಡ್ಡ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಿಕೊಡಿ ಎಂದಿದ್ದ ಪರಮೇಶ್ವರ್, ಪರಮೇಶ್ವರ್ ಈ ಹೇಳಿಕೆ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪರಮೇಶ್ವರ್ ತಮ್ಮ ಹೇಳಿಕೆ ಬಿಜೆಪಿಯವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಬಿಜೆಪಿಯವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.
ದುಡ್ಡಿಲ್ಲ ಎಂದು ನಾನು ಎಲ್ಲಿ ಹೇಳಿದೆ?
ಸರ್ಕಾರದ ಬಳಿ ದುಡ್ಡಿಲ್ಲ ಅಂತಾ ನಾನು ಎಲ್ಲಿಯೂ ಹೇಳಿಲ್ಲ. ಬಿಜೆಪಿಯವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು, ಬಾದಾಮಿ ಅಭಿವೃದ್ಧಿ ಮತ್ತು ಬಾದಾಮಿ ಗುಹೆಗಳ ರಕ್ಷಣೆಗೆ ಸಂಬಂಧಿಸಿದಂತೆ 1000 ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲು ಸೂಚಿಸಿದ್ದೆ. ಅಷ್ಟೊಂದು ದುಡ್ಡು ರಾಜ್ಯ ಸರ್ಕಾರವೇ ಕೊಡಲು ಸಾಧ್ಯವಿಲ್ಲ, ಆದ್ದರಿಂದ ಕೇಂದ್ರದಿಂದಲೂ ಸಹಾಯ ಪಡೆದರೆ ಅನುಕೂಲ ಎಂದಿದ್ದೆ. ಇಷ್ಟೇ ಹೇಳಿದ್ದು, ದುಡ್ಡೇ ಇಲ್ಲ ಎಂದು ನಾನು ಎಂದಿಗೂ ಹೇಳಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಬಜೆಟ್ ಗಾತ್ರ ಸಹಜವಾಗಿ ಗಣನೀಯವಾಗಿ ಹೆಚ್ಚಾಗಿದೆ ಎಂದ ಪರಮೇಶ್ವರ್ ಅವರು, ನೀರಾವರಿ, ಅಭಿವೃದ್ಧಿಗೆ ಹಣ ಒದಗಿಸಿದ್ದೇವೆ, ಗ್ಯಾರಂಟಿ ಯೋಜನೆಗಳಿಗೆ ಮಾತ್ರವೇ ಹಣ ಕೊಟ್ಟಿಲ್ಲ. ಸರ್ಕಾರದ ಬಳಿ ದುಡ್ಡಿಲ್ಲ ಎಂದು ನಾನು ಹೇಳುತ್ತೇನೆಯೇ? ನನಗೆ ಅಷ್ಟು ಪ್ರಜ್ಞೆ ಇಲ್ಲವೇ? ಎಂದು ಪರಮೇಶ್ವರ್ ಪ್ರಶ್ನಿಸಿದರು. ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ, ನನಗೆ ವಸ್ತುಸ್ಥಿತಿ ಗೊತ್ತಿದೆ. ನನಗಿಂತ ಚೆನ್ನಾಗಿ ಯಾರಿಗೆ ಅರ್ಥವಾಗುತ್ತದೆ? ಎಂದು ಪ್ರಶ್ನಿಸಿದರು.
ಶಾಸಕರೊಬ್ಬರು, ಮಂತ್ರಿಗಳು ತಮ್ಮನ್ನು ಭೇಟಿಯಾಗದಿರುವ ಬಗ್ಗೆ ಆರೋಪ ಮಾಡಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವರು, ಶಾಸಕರಿಗೆ ವೈಯಕ್ತಿಕವಾಗಿ ತೊಂದರೆಯಾಗಿರಬಹುದು. ಅವರೇ ಆರೋಪ ಮಾಡಿದ ಮೇಲೆ ನಾವು ಒಪ್ಪಿಕೊಳ್ಳಬೇಕಷ್ಟೇ. ಆದರೆ, ಇದನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ ಎಂದು ತಿಳಿಸಿದರು. ಈಗಾಗಲೇ ಸಿಎಲ್‌ಪಿ ಸಭೆಯಲ್ಲಿ ಶಾಸಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗಿತ್ತು. ಕೆಲವರು ಈ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಇದು ದೊಡ್ಡ ವಿಷಯವೇನಲ್ಲ, ಸಿಎಂ ಗಮನ ಹರಿಸಿ ಬಗೆಹರಿಸುತ್ತಾರೆ, ಎಂದರು.
ಎಲ್ಲ ಸರ್ಕಾರಗಳಲ್ಲೂ ಶಾಸಕರಲ್ಲಿ ಕೆಲವು ಅಸಮಾಧಾನಗಳಿರುತ್ತವೆ. ಎಲ್ಲ ಬೇಡಿಕೆಗಳನ್ನೂ ಸಂಪೂರ್ಣವಾಗಿ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಈ ವಿಷಯವನ್ನು ದೊಡ್ಡದಾಗಿ ಬಿಂಬಿಸದಂತೆ ಸಲಹೆ ನೀಡಿದರು.