ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು: ಕೆ.ಎನ್. ರಾಜಣ್ಣ

ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು: ಕೆ.ಎನ್. ರಾಜಣ್ಣ

ಮಧುಗಿರಿ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯ ನೇತೃತ್ವದಲ್ಲಿ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಎಂಬ ಘೋಷವಾಕ್ಯದೊಂದಿಗೆ ಪಟ್ಟಣದ ತುಮಕೂರು ಗೇಟ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ಟಿ.ವಿ.ವಿ ಪೆಟ್ರೋಲ್ ಬಂಕ್ ಸರ್ಕಲ್-ಡೊಂಲೈಟ್ ಸರ್ಕಲ್- ಮಲ್ಲೇಶ್ವರ ಸ್ವಾಮಿ ದೇವಸ್ಥಾನ-ಸಿವಿಲ್ ಬಸ್ ಸ್ಟಾಂಡ್ ಮುಖಾಂತರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣ ಅವರು, ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಪಾವಿತ್ರತೆ ಹಾಗೂ ಪೂಜ್ಯರ ಪ್ರಾಮಾಣಿಕತೆಯ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನೂ ಆಗ್ರಹಿಸುತ್ತೇನೆ. ಕೆಲವು ಯುಟೂಬ್‌ನಲ್ಲೂ ಈ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಅಂತಹ ಸುದ್ದಿ ಹರಡುವ ಕಿಡಿಗೇಡಿಗಳನ್ನು ಕಾನೂನು ರೀತಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮುಂದೆ ಇಂತಹ ಅಪಪ್ರಚಾರ ನಡೆಸುವ ಕೆಲಸಕ್ಕೆ ಕಠಿಣ ಕಾನೂನು ತರಬೇಕೆಂದು ಒತ್ತಾಯಿಸುತ್ತೇನೆ. ೮೦೦ ವರ್ಷಗಳ ಇತಿಹಾಸವುಳ್ಳ ಈ ಪುಣ್ಯ ಕ್ಷೇತ್ರದ ಬಗ್ಗೆ ಅಪಪ್ರಚಾರವನ್ನು ನಾನೂ ಖಂಡಿಸುತ್ತೇನೆ. ರಾಜ್ಯದಲ್ಲೇ ಅತಿಹೆಚ್ಚು ಸಂಚಲನ ಉಂಟು ಮಾಡಿರುವ ಈ ಘಟನೆಯಿಂದ ಮನಸ್ಸಿಗೆ ನೋವಾಗಿದ್ದು ಈ ಪ್ರಕರಣವು ಬೇಗ ಸುಖಾಂತ್ಯವಾಗಲಿ ಸತ್ಯಕ್ಕೆ ಜಯ ಸಿಗಲಿ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ, ಬಡವರಿಗೆ ಬ್ಯಾಂಕುಗಳಲ್ಲಿ ಸಾಲ ನೀಡದ ಈ ಕಾಲದಲ್ಲಿ ಗ್ರಾಮೀಣ ಕರ್ನಾಟಕದ ಕಲ್ಯಾಣವನ್ನು ಕನಸಾಗಿಸಿಕೊಂಡ ರಾಜರ್ಷಿ ಡಾ.ವಿರೇಂದ್ರ ಹೆಗ್ಗಡೆಯವರು ೬ ರಾಷ್ಟ್ರೀಯ ಬ್ಯಾಂಕುಗಳಿಗೆ ತಾವೇ ಶೂರಿಟಿ ನೀಡಿ ೬೫ ಲಕ್ಷ ಸದಸ್ಯರಿಗೆ ಸಾಲ ಸೌಲಭ್ಯ ಕೊಡಿಸಿ ಅವರ ಬದುಕಿಗೆ ಆಸರೆಯಾಗಿದ್ದಾರೆಂದು ಹೇಳಿದರು.

ವಿನಾಕಾರಣ ಧಾರ್ಮಿಕ ಶದ್ದಾಕೇಂದ್ರಕ್ಕೆ ಘಾಸಿ ಉಂಟು ಮಾಡುತ್ತಿರುವುದು ಭಕ್ತರಾದ ನಮಗೆ ಸಹಿಸಲು ಸಾಧ್ಯವಿಲ್ಲ. ಎಸ್‌ಐಟಿ ರಚಿನೆಯಾಗಿ ತನಿಖೆ ಮಾಡುತ್ತಿರುವ ಬೆನ್ನಲ್ಲೇ ಈ ಯೂಟೂಬರ್‌ಗಳು ಸ್ವತಃ ನ್ಯಾಯಾಧೀಶರಂತೆ ವರ್ತಿಸಿ ರಾಜ್ಯದ ಭಕ್ತರಿಗೆ ಸುಳ್ಳು ಸುದ್ದಿ ನೀಡಿ ಗೊಂದಲ ಉಂಟು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ, ಬಿಜೆಪಿ ಮುಖಂಡ ಎಲ್. ಸಿ.ನಾಗರಾಜು ಮಾತನಾಡಿ, ಧರ್ಮಸ್ಥಳ ಎಂದರೆ ಸತ್ಯವನ್ನೇ ಮೈ ಹೊದ್ದು ಮಲಗಿರುವ ದೈವಗಳ ಬೀಡು. ಇಂತಹ ನಾಡಿನ ಸತ್ಯವಾದ ಕ್ಷೇತ್ರದ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನಿನಂತೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಸೌಜನ್ಯ ಎಂಬ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕೆಂಬ ಆಸೆ ನಮಗೂ ಇದೆ. ಅದಕ್ಕಾಗಿಯೇ ಎಸ್‌ಐಟಿ ರಚಿಸಿದ್ದಾರೆ. ಆದರೆ ಸತ್ಯ ಹೊರಬರುವ ಮುಂಚೆಯೇ ತಂತ್ರಜ್ಞಾನದಿಂದ ಕ್ಷೇತ್ರಕ್ಕೆ ಮಸಿ ಬಳೆಯುವ ಕೆಲಸ ಸರಿಯಲ್ಲ. ಸುಳ್ಳಿನ ವಿರುದ್ಧ ಸತ್ಯವನ್ನು ಮೆರೆಸಲು ಈ ಭಕ್ತರ ದಂಡು ಇಂದು ಬೀದಿಗಿಳಿದಿದೆ. ಮುಂದೆ ಇಂತಹ ಧರ್ಮಸ್ಥಳಕ್ಕೆ ಅಪಾಯ ತಂದೊಡ್ಡಲು ಮುಂದಾದರೆ ಸಹಿಸಲ್ಲ. ಅಂತಹ ದುಷ್ಟ ಶಕ್ತಿಯನ್ನು ಹತ್ತಿಕ್ಕಲು ನಾವೆಲ್ಲ ಯಾವ ತ್ಯಾಗಕ್ಕಾದರೂ ಸಿದ್ಧ ಎಂದರು.
ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿ ಹಣದ ಆಮಿಷದಿಂದ ಬಡತನ ನಿವಾರಿಸಲು ಕುತಂತ್ರದಿಂದ ಮತಾಂತರದಂತಹ ದುಷ್ಟ ಕೆಲಸಗಳು ನಡೆಯುತ್ತಿದ್ದು ಈಗ ಬಡವರಿಗೆ ೩ ರಿಂದ ೫ ಲಕ್ಷದವರೆಗೆ ಯಾವುದೇ ಷೂರಿಟಿಯಿಲ್ಲದೆ ಸಾಲ ಸೌಲಭ್ಯ ಸಿಗಲು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯ ವಿರೇಂದ್ರ ಹೆಗ್ಗಡೆಯವರ ಕಾರ್ಯಕ್ರಮಗಳು ನೆರವಾಗಿದ್ದು, ಸಾವಿರಾರು ದೇಗುಲಗಳ ಜೀರ್ಣೋದ್ಧಾರ ಮಾಡಿದ್ದಾರೆ. ಅದನ್ನು ಸಹಿಸದ ದುಷ್ಟಕೂಟ ಈಗ ಕ್ಷೇತ್ರದ ಹಾಗೂ ಪೂಜ್ಯರ ಮೇಲೆ ಪ್ರತಿದಿನ ಅಪಪ್ರಚಾರದಲ್ಲಿ ತೊಡಗಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಗ್ಗಿಹಳ್ಳಿಯ ಶ್ರೀರಾಮಕೃಷ್ಣ ಆಶ್ರಮದ ಶ್ರೀ ರಮಾನಂದ ಚೈತನ್ಯ ಸ್ವಾಮೀಜಿ, ಧಾರ್ಮಿಕ ಮುಖಂಡ ಡಾ.ಎಂ.ಜಿ. ಶ್ರೀನಿವಾಸಮೂರ್ತಿ, ಪುರಸಭೆ ಸದಸ್ಯ ಎಂ.ಆರ್. ಜಗನ್ನಾಥ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ಕಸಾಪ ಅಧ್ಯೆಕ್ಷೆ ಸಹನಾ ನಾಗೇಶ್ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *