India vs England 1st Test: ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಐವರು ಶತಕ ಸಿಡಿಸುವ ಮೂಲಕ ಎಂಬುದು ವಿಶೇಷ.
ಅಂದರೆ ಕಳೆದ 93 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಭಾರತ ತಂಡವು ಒಮ್ಮೆಯೂ ಟೆಸ್ಟ್ ಪಂದ್ಯವೊಂದರಲ್ಲಿ 5 ಶತಕಗಳನ್ನು ಬಾರಿಸಿರಲಿಲ್ಲ. ಆದರೆ ಈ ಬಾರಿ ಯಂಗ್ ಇಂಡಿಯಾ ಬ್ಯಾಟರ್ ಗಳು ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 101 ರನ್ ಬಾರಿಸಿದರೆ, 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಶುಭ್ ಮನ್ ಗಿಲ್ 147 ರನ್ ಸಿಡಿಸಿದ್ದರು. ಇನ್ನು 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಿಷಭ್ ಪಂತ್ 134 ರನ್ ಸಿಡಿಸಿ ಅಬ್ಬರಿಸಿದರು.
ಇನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಆರಂಭಿಕ ದಾಂಡಿಗ ಕೆಎಲ್ ರಾಹುಲ್ 137 ರನ್ ಬಾರಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 118 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಬ್ಯಾಟರ್ ಗಳು ಒಟ್ಟು 5 ಶತಕಗಳನ್ನು ಸಿಡಿಸಿದ್ದಾರೆ.
ಈ ಶತಕಗಳೊಂದಿಗೆ 93 ವರ್ಷಗಳಲ್ಲಿ ಸಾಧ್ಯವಾಗದ ವಿಶೇಷ ಸಾಧನೆಯನ್ನು ಟೀಮ್ ಇಂಡಿಯಾ ಬ್ಯಾಟರ್ ಗಳು ಮಾಡಿ ಮುಗಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಪಂದ್ಯವೊಂದರಲ್ಲಿ 5 ಸೆಂಚುರಿ ಸಿಡಿಸಿದ ಟೀಮ್ ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ಕೂಡ ಸೇರ್ಪಡೆಯಾದಂತಾಗಿದೆ.