
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಜೇಕ್ ಪ್ರೇಸರ್ ಮೆಕ್ಗುರ್ಕ್ ಸಿಡಿಲಬ್ಬರ ಮುಂದುವರೆದಿದೆ. ಈ ಬಾರಿಯ ಟೂರ್ನಿಯಲ್ಲಿ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ಪರ ಕಣಕ್ಕಿಳಿಯುತ್ತಿರುವ ಮೆಕ್ಗುರ್ಕ್ ಎಂಐ ನ್ಯೂಯಾರ್ಕ್ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಡಲ್ಲಾಸ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವ ದಾಂಡಿಗ ಬರೋಬ್ಬರಿ 7 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ. ಈ ಏಳು ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಕೇವಲ 26 ಎಸೆತಗಳಲ್ಲಿ 64 ರನ್ ಚಚ್ಚಿದ್ದಾರೆ.
ಇದಕ್ಕೂ ಮುನ್ನ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಜೇಕ್ ಪ್ರೇಸರ್ ಮೆಕ್ಗುರ್ಕ್ 38 ಎಸೆತಗಳಲ್ಲಿ 88 ರನ್ ಚಚ್ಚಿದರು. ಈ ವೇಳೆ ಅವರ ಬ್ಯಾಟ್ನಿಂದ ಮೂಡಿಬಂದ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 11. ಇದೀಗ ಮತ್ತೊಮ್ಮೆ ಅಬ್ಬರಿಸುವ ಮೂಲಕ ಮೆಕ್ಗುರ್ಕ್ ಸಂಚಲನ ಸೃಷ್ಟಿಸಿದ್ದಾರೆ.
ಇನ್ನು ಜೇಕ್ ಪ್ರೇಸರ್ ಮೆಕ್ಗುರ್ಕ್ ಅವರ ಸ್ಪೋಟಕ ಅರ್ಧಶತಕದ ನೆರವಿನೊಂದಿಗೆ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಿದ್ದು, ಈ ಮೂಲಕ ಎಂಐ ನ್ಯೂಯಾರ್ಕ್ ತಂಡಕ್ಕೆ 247 ರನ್ಗಳ ಕಠಿಣ ಗುರಿ ನೀಡಿದೆ.
ವಿಶೇಷ ಎಂದರೆ ಈ ಬಾರಿಯ ಐಪಿಎಲ್ನಲ್ಲಿ ಜೇಕ್ ಪ್ರೇಸರ್ ಮೆಕ್ಗುರ್ಕ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಮೆಕ್ಗುರ್ಕ್ ಕಲೆಹಾಕಿದ್ದು ಕೇವಲ 55 ರನ್ಗಳು ಮಾತ್ರ. ಅಂದರೆ ಕೇವಲ 9.17 ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದರು.
ಇನ್ನು 6 ಪಂದ್ಯಗಳಲ್ಲಿ ಬಾರಿಸಿದ ಸಿಕ್ಸರ್ಗಳ ಸಂಖ್ಯೆ ಕೇವಲ ಎರಡು. ಹಾಗೆಯೇ 7 ಫೋರ್ಗಳನ್ನು ಮಾತ್ರ ಸಿಡಿಸಿದ್ದರು. ಆದರೆ ಇದೀಗ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 20 ಸಿಕ್ಸ್ ಸಿಡಿಸಿ ಮಿಂಚಿದ್ದಾರೆ.