ದಳಪತಿ ವಿಜಯ್ (ತಲಪತಿ ವಿಜಯ್) ನಟನೆಯ ‘ಜನ ನಾಯಕನ್’ ಸಿನಿಮಾ ಜನವರಿ 9 ರಂದು ಬಿಡುಗಡೆಯಾಗಲಿದೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಮಾತ್ರ ಸಿನಿಮಾ ಬಿಡುಗಡೆ ಆಗುತ್ತಿದೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿದ್ದು, ಸಿನಿಮಾಕ್ಕೆ ಭರ್ಜರಿ ಪ್ರಚಾರ ನೀಡಿದ್ದಾರೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಆರಂಭವಾಗಿದೆ. ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲವು ದಿನಗಳಾಗಿದ್ದರೆ, ಕೊಚ್ಚಿಯಲ್ಲಿ ಇತ್ತೀಚೆಗಷ್ಟೇ ಓಪನ್ ಆಗಿದೆ. ಆದರೆ ಬೆಂಗಳೂರಿನ ಟಿಕೆಟ್ ದರಕ್ಕೂ, ಕೊಚ್ಚಿಯ ಟಿಕೆಟ್ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಬೆಂಗಳೂರಿನಲ್ಲಿ ಪ್ರಸ್ತುತ ಸಿಂಗಲ್ ಚಿತ್ರಮಂದಿರಗಳ ಅಡ್ವಾನ್ಸ್ ಬುಕಿಂಗ್ ಮಾತ್ರವೇ ಓಪನ್ ಆಗಿದೆ. ಜನವರಿ 09 ರ ಮುಂಜಾನೆ 6 ಗಂಟೆಯ ವಿಶೇಷ ಶೋ ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶವಿದೆ. ಈ ಶೋಗಳಿಗೆ ಭಾರಿ ಮೊತ್ತದ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಪ್ರತಿ ಟಿಕೆಟ್‌ಗೆ 800 ಮತ್ತು 1000 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಸಾಮಾನ್ಯ ಟಿಕೆಟ್ಟಿಗೆ 800 ರೂಪಾಯಿ, ಬಾಲ್ಕನಿಗೆ 1000 ಬೆಲೆ ಇದೆ. ಕೆಲವು ಚಿತ್ರಮಂದಿರಗಳಲ್ಲಿ ಈ ಬೆಲೆ 1000 ಮತ್ತು 1200 ಸಹ ಇದೆ.
ಆದರೆ ಕೇರಳದ ಕೊಚ್ಚಿಯಲ್ಲಿ ಬೇರೆಯದ್ದೇ ಕತೆ ಇದೆ. ಕೇರಳದಲ್ಲಿಯೂ ಬೆಳಿಗ್ಗೆ 6 ಗಂಟೆ ಶೋ ಆಯೋಜನೆ ಮಾಡಲಾಗಿದೆ. ಆದರೆ ವಿಶೇಷ ಶೋ ಟಿಕೆಟ್ ನ ಪ್ರಾರಂಭಿಕ ಬೆಲೆ ಕೇವಲ 120 ರೂಪಾಯಿಗಳಿವೆ. ಕೆಲವು ಚಿತ್ರಮಂದಿರಗಳಲ್ಲಿ ಆರಂಭಿಕ ಬೆಲೆ 190 ರೂಪಾಯಿಗಳಿವೆ. ಗರಿಷ್ಟ ಬೆಲೆ 350 ರೂಪಾಯಿಗಳಷ್ಟೆ. ಬೆಂಗಳೂರಿನಲ್ಲಿ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ‘ಜನ ನಾಯಕ’ ಸಿನಿಮಾ ಟಿಕೆಟ್ಟುಗಳನ್ನು ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ:’ಜನ ನಾಯಕನ್’ ಆಡಿಯೋ ಲಾಂಚ್ ಕಾರ್ಯಕ್ರಮ ಒಟಿಟಿಯಲ್ಲಿ: ಎಲ್ಲಿ? ಯಾವಾಗ?
ಕೇರಳದ ಕೊಚ್ಚಿಯಲ್ಲಿ ವಿಶೇಷ ಶೋನ ಟಿಕೆಟ್‌ಗೆ ಹೆಚ್ಚು ಬೆಲೆ ಸಾಮಾನ್ಯ ಶೋಗೆ ಕಡಿಮೆ ಬೆಲೆ ಎಂಬ ವ್ಯತ್ಯಾಸವಿಲ್ಲ. ಯಾವುದೇ ಶೋನ ಟಿಕೆಟ್ ಖರೀದಿಸಿದರು ಒಂದೇ ಟಿಕೆಟ್ ಬೆಲೆ ಇದೆ. ಆದರೆ ಬೆಂಗಳೂರಿನಲ್ಲಿ ವಿಶೇಷ ಶೋಗೆ 1000 ರೂಪಾಯಿ ನೀಡಬೇಕಾಗಿದೆ. ಇದು ಅನ್ಯಾಯದ ಜೊತೆಗೆ ಮತ್ತೇನು ಎಂಬ ಪ್ರಶ್ನೆ ಬೆಂಗಳೂರಿನ ಸಿನಿಮಾ ಪ್ರೇಮಿಗಳದ್ದು.
‘ಜನ ನಾಯಕನ್’ ಸಿನಿಮಾದ ಅಡ್ವಾನ್ಸ್ ಪ್ರಸ್ತುತ ಕೊಚ್ಚಿ ಮತ್ತು ಬೆಂಗಳೂರಿನಲ್ಲಿ ಮಾತ್ರವೇ ಓಪನ್ ಆಗಿದೆ. ಹೈದರಾಬಾದ್, ಚೆನ್ನೈ ಮತ್ತು ಮುಂಬೈನಲ್ಲಿ ಇನ್ನಷ್ಟೆ ಓಪನ್ ಆಗಬೇಕಿದೆ. ಆದರೆ ಅಲ್ಲಿಯೂ ಸಹ ಟಿಕೆಟ್ ದರಗಳು ಕಡಿಮೆಯೇ ಇರಲಿ. ಆದರೆ ‘ಜನ ನಾಯಕನ್’ ನಿರ್ಮಾಪಕರು ಮತ್ತು ವಿತರಕರು ಹಣ ದೋಚಲು ಬೆಂಗಳೂರಿನ ಸಿನಿಮಾ ಪ್ರೇಮಿಗಳ ಗುರಿ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ