ಚಿಕ್ಕಬಳ್ಳಾಪುರ, ಜನವರಿ 06: ಪೊಲೀಸ್ ಠಾಣೆಯಲ್ಲಿ ಪ್ರಿಯಕರನ ಬಂಡವಾಳ ಬಯಲಾಗಿದ್ದರಿಂದ ಆತ ಕಟ್ಟಿದ್ದ ತಾಳಿಯನ್ನೇ ಕಿತ್ತೆಸೆದು ಯುವತಿಯೋರ್ವಳು ಪೋಷಕರ ಜೊತೆಗೆ ಮರಳಿ ತೆರಳಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಕಾರು ಅಡ್ಡಗಟ್ಟಿದ್ದ ಅವರಿಗೆ ಪೊಲೀಸ್ ಠಾಣೆಗೆ ಕರೆದಿದ್ದರು. ಈ ವೇಳೆ ಪ್ರೇಮಿಯ ನವರಂಗಿ ಆಟಗಳೆಲ್ಲ ಆರಕ್ಷಕರ ಮುಂದೆಯೇ ಬಯಲಾಗಿದ್ದರೆ, ಪ್ರಿಯಕರನ ನಡೆ ಕಂಡು ಯುವತಿ ಬೆಚ್ಚಿಬಿದ್ದಿದ್ದಾಳೆ. ಇವನ ಸಹವಾಸವೇ ಸಾಕು ಎಂದು ಕೈಮುಗಿದಿದ್ದಾಳೆ.
ಘಟನೆ ಏನು?
ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಡಾವಣೆಯ ನಿವಾಸಿ, ಪೇಂಟ್ ಕೆಲಸಗಾರ ಸಂದೀಪ್ ಎಂಬ ವ್ಯಕ್ತಿ ಚಿಕ್ಕಬಳ್ಳಾಪುರ ನಗರದ ಕಂದವಾರ ಬಡಾವಣೆಯ ಶ್ರೀಮಂತ ಕುಟುಂಬದ 18 ವರ್ಷದ ಯುವತಿಗೆ ಗಾಳ ಹಾಕಿದ್ದ. ಆಕೆಯ ಜೊತೆ ಎರಡು ದಿನಗಳ ಹಿಂದೆ ಎಸ್ಕೇಪ್ ಆಗಿದ್ದ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ದೇವಸ್ಥಾನದಲ್ಲಿ ಆಕೆಗೆ ತಾಳಿಯನ್ನೂ ಕಟ್ಟಿದ್ದ. ಬಳಿಕ ಈ ಜೋಡಿ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾಗ ಜಿಲ್ಲೆಯ ಶಿಡ್ಲಘಟ್ಟದ ಯುವತಿಯ ಪ್ರಯಾಣಿಕರು ಅಡ್ಡಗಟ್ಟಿದ್ದರು. ಮಹಿಳಾ ಠಾಣೆಗೆ ಮಗಳು ಮತ್ತು ಆಕೆಯ ಪ್ರಿಯಕರನನ್ನು ನೇರವಾಗಿ ಕರೆದುಕೊಂಡು ಬಂದಿದ್ದರು. ತಾವು ಮದುವೆ ಮಾಡಿಕೊಂಡಿದ್ದು ತಮ್ಮ ಪಾಡಿಗೆ ತಾವು ಬಿಡುವಂತೆ ಈ ವೇಳೆ ಜೋಡಿ ಪೊಲೀಸರನ್ನು ಕೇಳಿಕೊಂಡಿತ್ತು. ಅಷ್ಟರಲ್ಲಿ ಸಂದೀಪ್ ನ ಒಂದೊಂದೇ ಪ್ರೇಮ ಪ್ರಕರಣಗಳು ಬಯಲಾಗಿವೆ.
ಇದನ್ನೂ ಓದಿ: ಹುಟ್ಟಿಸಿದ ಮಗನ ಬಲಿ ಪಡೆದ ತಂದೆ; ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣಪಕ್ಷಿ
20024ರಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ ಗ್ರಾಮದ ಅಪ್ರಾಪ್ರ ಬಾಲಕಿಯನ್ನು ಪ್ರೀತಿಸಿದ್ದ ಸಂದೀಪ್ ಆಕೆಯನ್ನು ಮದುವೆ ಮಾಡಿಕೊಂಡಿದ್ದ. ಪ್ರಶಾಂತ್ ಮತ್ತೋರ್ವ ಮಹಿಳೆಗೆ ವಂಚನೆ ಮಾಡಿದ್ದು, ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ. ಇವುಗಳ ಜೊತೆಗೆ ಸಾಕ್ಷಿ ಎಂಬಂತೆ ಸಂದೀಪ್ ಅವರ ಹಿಂದೆ ಮೋಸ ಹೋಗಿರುವ ಅಪ್ರಾಪ್ತೆಯೇ ಠಾಣೆಗೆ ಬಂದು ಆತನ ಇತಿಹಾಸ ಬಿಚ್ಚಿಟ್ಟಿದ್ದಾಳೆ. ಹೀಗಾಗಿ ಪ್ರಿಯಕರ ಕಟ್ಟಿದ್ದ ತಾಳಿಯನ್ನು ಕಿತ್ತು ಬಿಸಾಕಿ ಆತನಿಗೆ ಗುಡ್ ಬೈ ಹೇಳಿ ಯುವತಿ ತಂದೆ ತಾಯಿ ಜೊತೆ ಮನೆಗೆ ಹೋದ ಪ್ರಸಂಗ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 8:11 am, ಮಂಗಳವಾರ, 6 ಜನವರಿ 26