
ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್‌ಗಳು, ಏರ್‌ಸೈಡ್ ಕಾರ್ಯಾಚರಣೆಗಳು, ವಾಣಿಜ್ಯ ಮಳಿಗೆಗಳು ಮತ್ತು ಇತರೆ ಸೌಲಭ್ಯಗಳಿಂದ ಒಟ್ಟಾರೆ ಪ್ರತಿದಿನ ಸುಮಾರು 24 ರಿಂದ 26 ಟನ್ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದಕ್ಕಾಗಿ ಸ್ಥಾಪಿಸಲಾಗಿರುವ ಸಂಯೋಜಿತ ಘನತ್ಯಾಜ್ಯ ನಿರ್ವಹಣಾ ಕೇಂದ್ರವು (ISWMC), ತ್ಯಾಜ್ಯ ಉತ್ಪತ್ತಿಯಾಗುವ ಮೂಲದಲ್ಲೇ ವೈಜ್ಞಾನಿಕವಾಗಿ ಮತ್ತು ಸಂಪೂರ್ಣವಾಗಿ ಸಂಸ್ಕರಿಸಲು ನೆರವಾಗುತ್ತದೆ. ಇದು ಕಾರ್ಯಾಚರಣೆಯ ಮೇಲಿನ ನಿಯಂತ್ರಣವನ್ನು ಹೆಚ್ಚಿಸುವುದಲ್ಲದೆ, ಹೊರಗಿನ ಸಂಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ತ್ಯಾಜ್ಯ ಸಾಗಾಣಿಕೆಯಿಂದ ಉಂಟಾಗುವ ಪರಿಸರ ಅಪಾಯಗಳನ್ನು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುತ್ತದೆ. ಜೊತೆಗೆ, ನಿಯಮಗಳ ಪಾಲನೆ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಇದು ಉತ್ತಮಪಡಿಸುತ್ತದೆ. ಈ ಸೌಲಭ್ಯದ ಮೂಲಕ, ವಿಮಾನ ನಿಲ್ದಾಣವು ಒಟ್ಟು ತ್ಯಾಜ್ಯದ 97-98% ಭಾಗವನ್ನು ತನ್ನದೇ ಆದ ಸಂಸ್ಕರಣಾ ಘಟಕಗಳು ಮತ್ತು ಅಧಿಕೃತ ಪಾಲುದಾರರ ಮೂಲಕ ಮರುಬಳಕೆ (Recycle) ಅಥವಾ ಪುನರ್ಬಳಕೆ (Recovery) ಮಾಡಲಿದೆ. ಇನ್ನುಳಿದ ಕೇವಲ 2-3% ರಷ್ಟನ್ನು ಮಾತ್ರ ಭೂಭರ್ತಿ ಮಾಡಲು ಯೋಜಿಸಿದೆ.