ಗದಗ , ಜ.8: ಟಿವಿ9 ಕನ್ನಡ ಮಾಡುತ್ತಿರುವ ಡಕೋಟಾ ಬಸ್ ರಿಯಾಲಿಟಿ ಚೆಕ್ ಅಭಿಯಾನದಲ್ಲಿ ಇದೀಗ ಗದಗ ಜಿಲ್ಲೆಯ ಬಸ್‌ಗಳ ದುಸ್ಥಿತಿ ಬಯಲಾಗಿದೆ. ಗದಗ ನಗರದ ಬಸ್ ನಿಲ್ದಾಣದಲ್ಲಿ ಗದಗ-ಹುಲಕೋಟಿ ಮತ್ತು ಹೊಸಳ್ಳಿಗೆ ಸಂಚರಿಸುವ ಬಸ್ಸುಗಳ ಸ್ಥಿತಿಗತಿ ಆತಂಕಕಾರಿಯಾಗಿದೆ. ಬಸ್‌ಗಳ ಪ್ರಮುಖ ಭಾಗಗಳಾದ ಶಾಕ್ ಅಬ್ಸಾರ್ಬರ್‌ಗಳು ಸಂಪೂರ್ಣವಾಗಿ ಕಿತ್ತು ಹೋಗಿದೆ. ಬಲೂನ್ ರೀತಿಯ ಶಾಕ್ ಅಬ್ಸಾರ್ಬರ್ ಗಳಿಗೆ ಸಪೋರ್ಟ್ ಆಗಿ ಇರಬೇಕಾದ ಭಾಗಗಳು ಹೊರಬಂದಿವೆ. ಹಿಂಭಾಗದ ಶಾಕ್ ಅಬ್ಸಾರ್ಬರ್‌ಗಳೂ ಕೂಡ ಇದೆ ಸ್ಥಿತಿಯಲ್ಲಿದೆ, ಅವುಗಳಿಗೆ ಇರಬೇಕಾದ ಬೆಂಬಲ ಕಳೆದುಹೋಗಿದೆ. ಇಂತಹ ದುಸ್ಥಿತಿಯಲ್ಲೂ ಸಾರಿಗೆ ಇಲಾಖೆಯು ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ ಎಂದು ವರದಿಯಾಗಿದೆ. ಗದಗ ಚಲಿಸುವ ಬಸ್ಸುಗಳು ಹಳೆಯದಾಗಿ, ಸಂಪೂರ್ಣವಾಗಿ ಹಾಳಾಗಿವೆ. ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಬಸ್ಸುಗಳು ನಿತ್ಯವೂ ಸಾವಿರಾರು ಜನರನ್ನು ಹೊತ್ತೊಯ್ಯುತ್ತವೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಹಳ್ಳಿಗಳಿಂದ ಗದಗಕ್ಕೆ ಮತ್ತು ಗದಗದಿಂದ ವಿವಿಧ ಹಳ್ಳಿಗಳಿಗೆ ಪ್ರಯಾಣಿಸುವವರು ಈ ಅಪಾಯಕಾರಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಬಸ್‌ಗಳ ಒಳಭಾಗದಲ್ಲಿ ಸೀಟ್‌ಗಳು ಕಿತ್ತುಹೋಗಿದ್ದು, ಕನಿಷ್ಠ ಸೌಜನ್ಯದಿಂದಲೂ ಅವುಗಳನ್ನು ದುರಸ್ತಿ ಮಾಡಲು ಪ್ರಯತ್ನಿಸಲಿಲ್ಲ. ಈ ಬಸ್ ಚಾಲಕರು ಮತ್ತು ಅಧಿಕಾರಿಗಳು ಕೂಡ ತಮ್ಮ ಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಬಸ್‌ಗಳಿಗೆ ಕ್ಲಚ್ ಇಲ್ಲ, ಬ್ರೇಕ್ ಇಲ್ಲ, ಕಂಡೀಷನ್ ಇಲ್ಲ. ದೇವರೇ ಗತಿ ಎಂದು ನಾವು ಇವುಗಳನ್ನು ಓಡಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇಂತಹ ಮಾತುಗಳು ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಮತ್ತು ನಿರ್ವಹಣಾ ಲೋಪಗಳನ್ನು ಎತ್ತಿ ತೋರಿಸುತ್ತವೆ. ಬಸ್‌ಗಳ ಹಿಂದಿನ ಚಕ್ರಗಳ ಭಾಗದಲ್ಲಿರುವ ಸಪೋರ್ಟಿವ್ ಶಾಕ್ ಅಬ್ಸಾರ್ಬರ್‌ಗಳೂ ಕಿತ್ತುಹೋಗಿದ್ದು, ಇಲಾಖೆಯ ನಿರ್ಲಕ್ಷ್ಯ ಅಥವಾ ಹಣಕಾಸಿನ ಕೊರತೆ ಕುರಿತು ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ. ಗದಗ ಜಿಲ್ಲೆಯಾದ್ಯಂತ ಸಂಚರಿಸುವ ಈ ಡಕೋಟಾ ಬಸ್‌ಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಇಂತಹ ಬಸ್ಸುಗಳು ಪ್ರಯಾಣಿಸುವುದು ದೊಡ್ಡ ದುರಂತಕ್ಕೆ ಎಂಬ ಆತಂಕವನ್ನುಂಟು ಮಾಡಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ