ನಾಳೆಯಿಂದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಜ.14 ರಿಂದ 26ರವರೆಗೆ ತೇಜಸ್ವಿ- ವಿಸ್ಮಯ ಫ್ಲವರ್‌ಶೋ | Tejaswi Vismaya Flower Show To Begin At Lalbagh From Tomorrow

ನಾಳೆಯಿಂದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಜ.14 ರಿಂದ 26ರವರೆಗೆ ತೇಜಸ್ವಿ- ವಿಸ್ಮಯ ಫ್ಲವರ್‌ಶೋ | Tejaswi Vismaya Flower Show To Begin At Lalbagh From Tomorrow



ನಾಳೆಯಿಂದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಜ.14 ರಿಂದ 26ರವರೆಗೆ ತೇಜಸ್ವಿ- ವಿಸ್ಮಯ ಫ್ಲವರ್‌ಶೋ | Tejaswi Vismaya Flower Show To Begin At Lalbagh From Tomorrow

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.14 ರಿಂದ 26ರವರೆಗೆ ನಡೆಯುವ 219ನೇ ಫಲಪುಷ್ಪ ಪ್ರದರ್ಶನ ಹೊಸತನ ಮತ್ತು ಹಲವು ವೈಶಿಷ್ಟ್ಯಗಳೊಂದಿಗೆ ಕೂಡಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ಬೆಂಗಳೂರು : ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.14 ರಿಂದ 26ರವರೆಗೆ ನಡೆಯುವ 219ನೇ ಫಲಪುಷ್ಪ ಪ್ರದರ್ಶನ ಹೊಸತನ ಮತ್ತು ಹಲವು ವೈಶಿಷ್ಟ್ಯಗಳೊಂದಿಗೆ ಕೂಡಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ತೋಟಗಾರಿಕೆ ಇಲಾಖೆ ಈ ಬಾರಿ ರಾಷ್ಟ್ರಕವಿ ಕುವೆಂಪು ಅವರ ಪುತ್ರ, ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತ ‘ತೇಜಸ್ವಿ ವಿಸ್ಮಯ’ ವಿಷಯ ಆಧರಿಸಿದ ಈ ಪ್ರದರ್ಶನದಲ್ಲಿ ಗಾಜಿನ ಮನೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ನೆಚ್ಚಿನ ಕಾಡನ್ನು ನಿರ್ಮಿಸುತ್ತಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಆರ್. ಗಿರೀಶ್, ಈ ಬಾರಿ, ಫಲಪುಷ್ಪ ಪ್ರದರ್ಶನಕ್ಕೆ 3.20 ಕೋಟಿ ರು.ಗಿಂತ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದ್ದು, ಈ ಬಾರಿ 12 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.14ರಂದು ಸಂಜೆ 4 ಗಂಟೆಗೆ ಪ್ರದರ್ಶನಕ್ಕೆ ಚಾಲನೆ ನೀಡುವರು, ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ್‌, ರಾಮಲಿಂಗಾರೆಡ್ಡಿ, ಶಾಸಕ ಉದಯ್‌ ಬಿ.ಗರುಡಾಚಾರ್‌ ಸೇರಿದಂತೆ ಇತರರು ಪಾಲ್ಗೊಳ್ಳುವರು ಎಂದರು.

ಗಾಜಿನ ಮನೆಯಲ್ಲಿ ಕಾಡಿನ ಆಕರ್ಷಣೆ

ತೋಟಗಾರಿಕೆ ಇಲಾಖೆ (ಪಾರ್ಕ್ಸ್‌ ಆ್ಯಂಡ್‌ ಗಾರ್ಡನ್ಸ್‌ ) ಅಪರ ನಿರ್ದೇಶಕ ಡಾ.ಎಂ. ಜಗದೀಶ್ ಮಾತನಾಡಿ, ತೇಜಸ್ವಿ ಅವರ ಕಾದಂಬರಿ, ಕಥೆಗಳಲ್ಲಿ ಕಂಡು ಬರುವ ಕಾಡಿನ ಮಾದರಿಯನ್ನು ಗಾಜಿನ ಮನೆಯಲ್ಲಿ ನಿರ್ಮಿಸಲಾಗಿದೆ. 45/45 ಅಡಿ ವ್ಯಾಸದ 25 ಅಡಿ ಎತ್ತರದ ಬೃಹತ್ ಬೆಟ್ಟ, ಜಲಪಾತದ ಮಾದರಿ ಇರಲಿದ್ದು ಅದರ ತಪ್ಪಲಿನಲ್ಲಿ ತೇಜಸ್ವಿ ಅವರ ಮೂಡಿಗೆರೆಯ ಹ್ಯಾಂಡ್‌ಪೋಸ್ಟ್‌ ಸಮೀಪವಿರುವ ‘ನಿರುತ್ತರ’ ಮನೆಯ ಪುಷ್ಪಮಾದರಿ ನಿರ್ಮಾಣಗೊಳ್ಳಲಿದೆ. ಅದರ ಮುಂದೆ ನಾಲ್ಕು ಅಡಿ ಎತ್ತರದ ತೇಜಸ್ವಿ-ರಾಜೇಶ್ವರಿಯವರ ಪ್ರತಿಮೆಗಳು ಇರಲಿವೆ ಎಂದರು.

ತೇಜಸ್ವಿಯವರ ಸ್ಕೂಟರ್ ಮತ್ತು ಕರ್ವಾಲೊ ಕಾದಂಬರಿಯಲ್ಲಿ ಬರುವ ಕಿವಿ ನಾಯಿ, ಕರಿಯಪ್ಪ, ಮಂದಣ್ಣ, ತೇಜಸ್ವಿಯವರ ಜೀರುಂಡೆ, ಏರೋಪ್ಲೇನ್ ಚಿಟ್ಟೆ ಮೊದಲಾದ ಪ್ರಾಣಿ ಪಕ್ಷಿ-ಕೀಟಗಳ ಪುಷ್ಪ ಮಾದರಿಗಳು ಇರಲಿವೆ. ಬೆಟ್ಟದ ಬಲಭಾಗದ ತಪ್ಪಲಿನಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕಟ್ಟಡದ ಪುಷ್ಪ ಮಾದರಿ ಇತ್ಯಾದಿಗಳು ಇರಲಿವೆ ಎಂದು ಹೇಳಿದರು

ನಿರುತ್ತರ ಮನೆ, ತೇಜಸ್ವಿ ಪ್ರತಿಷ್ಠಾನದ ಕಟ್ಟಡ, ಜೇನುಹುಳ, ಬಣ್ಣದ ಚಿಟ್ಟೆಗಳು, ಕಪ್ಪೆ, ಜೀರುಂಡೆ ಮತ್ತು ಬಸವನ ಹುಳಗಳ ಸೇರಿದಂತೆ ಹಲವು ಪುಷ್ಪಾಕೃತಿಗಳನ್ನು ನಿರ್ಮಿಸಲು ಒಂದು ಬಾರಿಗೆ 4.50 ಲಕ್ಷದಂತೆ ಎರಡು ಬಾರಿಗೆ ಒಂಬತ್ತು ಲಕ್ಷ ಹೂವುಗಳನ್ನು ಬಳಸಲಾಗುವುದು ಎಂದು ಜಗದೀಶ್ ತಿಳಿಸಿದರು.

ನಿತ್ಯವೂ ನಾಟಕ, ಸಂವಾದಗಳು: ಜ.15ರಿಂದ 26ರವರೆಗೆ ಲಾಲ್‌ಬಾಗ್‌ನಲ್ಲಿ ನಿತ್ಯವೂ ಸಂಜೆ 5 ರಿಂದ 7ರವರೆಗೆ ಮಳಿಗೆಗಳ ಪಕ್ಕದ ಹುಲ್ಲುಹಾಸಿನ ಮೇಲೆ ನನ್ನ ತೇಜಸ್ವಿ, ಕರ್ವಾಲೊ, ಜುಗಾರಿ ಕ್ರಾಸ್, ಕೃಷ್ಣೇಗೌಡನ ಆನೆ, ಯಮಳ ಪ್ರಶ್ನೆ ಸೇರಿದಂತೆ ತೇಜಸ್ವಿಯವರ ಪ್ರಸಿದ್ಧ ನಾಟಕಗಳು, ಸಿನಿಮಾ-ಸಾಹಿತ್ಯ ಕುರಿತಾದ ಸಂವಾದಗಳು ನಡೆಯಲಿವೆ. ಜತೆಗೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯೂ ಇರಲಿದೆ.

ಪಾರ್ಕಿಂಗ್ ವ್ಯವಸ್ಥೆ: ಡಬಲ್‌ ರೋಡ್‌ ಶಾಂತಿನಗರ ಬಸ್ ನಿಲ್ದಾಣದ ಬಳಿ ಇರುವ ಬಹುಮಹಡಿ ವಾಹನ ನಿಲುಗಡೆ, ಹಾಪ್‌ಕಾಮ್ಸ್‌ ಆವರಣ ಹಾಗೂ ಜೆ.ಸಿ ರಸ್ತೆಯಲ್ಲಿನ ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ. ದ್ವಿಚಕ್ರ ವಾಹನದಲ್ಲಿ ಬರುವವರು ಲಾಲ್‌ಬಾಗ್ ಮುಖ್ಯದ್ವಾರದ ಬಳಿ ಇರುವ ಅಲ್ ಅಮೀನ್ ಕಾಲೇಜು ಆವರಣದ ನಿಲ್ದಾಣ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಬಹುದು.

ಸ್ತಬ್ದ ಚಿತ್ರಗಳ ಆಕರ್ಷಣೆ

ಇದೇ ಮೊದಲ ಬಾರಿಗೆ ಪರಿಸರ ಮತ್ತು ಕಾಡು ಪ್ರಾಣಿಗಳ ಕುರಿತಾದ ಎರಡು ಬೃಹತ್ ಸ್ತಬ್ದ ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಒಂದರಲ್ಲಿ ಆನೆ, ಮತ್ತೊಂದರಲ್ಲಿ ಮಂಗಟೆಹಕ್ಕಿ (ಹಾರ್ನ್‌ಬಿಲ್‌) ಪ್ರತಿಕೃತಿ ಇರಲಿದೆ. ಜೊತೆಗೆ ವಿವಿಧ ಪ್ರಾಣಿ, ಪಕ್ಷಿಗಳ ಸಣ್ಣ, ಪುಟ್ಟ ವನ್ಯಪ್ರಾಣಿ, ಪಕ್ಷಿಗಳ ಪ್ರತಿಕೃತಿಗಳು ಚಲನವಲನದಿಂದ ಕೂಡಿರಲಿದ್ದು, ಇವು ಲಾಲ್‌ಬಾಗ್‌ನಾದ್ಯಂತ ಸಂಚರಿಸುತ್ತಾ ನೋಡುಗರಿಗೆ ಖುಷಿ ಕೊಡಲಿವೆ.

ವಿದ್ಯಾರ್ಥಿಗಳಿಗೆ ಉಚಿತ

ಶಾಲಾ ಸಮವಸ್ತ್ರ ಧರಿಸಿ ಬರುವ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶ ಇರಲಿದೆ. ಆದರೆ ಸರ್ಕಾರಿ ರಜಾ ದಿನಗಳಲ್ಲಿ ಇದು ಅನ್ವಯ ಆಗುವುದಿಲ್ಲ. ವಯಸ್ಕರಿಗೆ ವಾರದ ದಿನಗಳಲ್ಲಿ 80 ರು. ಹಾಗೂ ರಜಾ ದಿನಗಳಲ್ಲಿ ತಲಾ 100 ರು.12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನಗಳಲ್ಲೂ ತಲಾ 30 ರು. ಆನ್‌ಲೈನ್‌ ( https://hasiru.karnataka.gov.in/floweshow/login.aspx ) ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ.



Source link

Leave a Reply

Your email address will not be published. Required fields are marked *