ಬಾಗಲಕೋಟೆ ಜಿಲ್ಲೆಯ ಕಮತಗಿ ಬಳಿ ನಡೆದ ಟ್ರ್ಯಾಕ್ಟರ್ ಅಪಘಾತದಲ್ಲಿ ಗಾಯಗೊಂಡಿದ್ದ ಅಕ್ಕ-ತಮ್ಮ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರೊಂದಿಗೆ, ವಿಜಯನಗರ ಜಿಲ್ಲೆಯ ತಾಂಡಾಗಳಿಗೆ ಮರಳುತ್ತಿದ್ದ ಕಬ್ಬು ಕಟಾವು ಕಾರ್ಮಿಕರ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಬಾಗಲಕೋಟೆ/ವಿಜಯನಗರ (ಜ.14): ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಬಳಿ ಕಳೆದ ಜನವರಿ 10ರಂದು ಸಂಭವಿಸಿದ ಭೀಕರ ಟ್ರ್ಯಾಕ್ಟರ್ ಅಪಘಾತದ ಗಾಯಾಳುಗಳ ಪೈಕಿ ಇಂದು ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಕಾರ್ಮಿಕ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ.

ಕಳೆದ ಜನವರಿ 10ರಂದು ಕಬ್ಬು ಕಟಾವು ಕಾರ್ಮಿಕರು ಕೆಲಸ ಮುಗಿಸಿಕೊಂಡು ತಮ್ಮದೇ ಆದ ಟ್ರ್ಯಾಕ್ಟರ್‌ನಲ್ಲಿ ವಿಜಯನಗರ ಜಿಲ್ಲೆಯ (ಹೊಸಪೇಟೆ) ಹಗರಿಬೊಮ್ಮನಹಳ್ಳಿ ತಾಲೂಕಿನ ಆನೆಕಲ್ ತಾಂಡಾ ಹಾಗೂ ತಾಳೆಬಸಾಪುರ ತಾಂಡಾ ಕಡೆಗೆ ಮರಳುತ್ತಿದ್ದರು. ಈ ವೇಳೆ ಕಮತಗಿ ಪಟ್ಟಣದ ಬಳಿ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಟ್ರ್ಯಾಕ್ಟರ್ ಎಂಜಿನ್‌ನ ಬಂಪರ್ ಹಠಾತ್ ಕಟ್ ಆಗಿ ಕೆಳಗೆ ಬಿದ್ದಿದೆ. ಇದರ ಪರಿಣಾಮವಾಗಿ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಅದರ ಮೇಲೆಯೇ ಏರಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿತ್ತು.

ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪಾರ್ವತಿಬಾಯಿ (30) ಹಾಗೂ ಆಕೆಯ ತಮ್ಮ ಪಾಂಡು ನಾಯಕ್ (26) ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಇಂದು ಅಕ್ಕ-ತಮ್ಮ ಇಬ್ಬರೂ ಸಾವನ್ನಪ್ಪಿರುವುದು ಆ ತಾಂಡಾಗಳಲ್ಲಿ ನೀರವ ಮೌನಕ್ಕೆ ಕಾರಣವಾಗಿದೆ.

ಅಪಘಾತ ಸಂಭವಿಸಿದ ದಿನದಂದು ಸ್ಥಳದಲ್ಲೇ ರುಕ್ಮಿಣಿಬಾಯಿ ನಾಯಕ್ (36), ಆಕೆಯ ಪುತ್ರಿ ಶಿವಾನಿ ನಾಯಕ್ (6) ಹಾಗೂ ಪಾರ್ವತಿಬಾಯಿ ಅವರ ಪುತ್ರ ರೋಷನ್ ನಾಯಕ್ (4) ಮೃತಪಟ್ಟಿದ್ದರು. ಒಂದೇ ಕುಟುಂಬದ ತಾಯಿ-ಮಗಳು ಹಾಗೂ ಮತ್ತೊಂದು ಮಗು ಅಂದು ಬಲಿಯಾಗಿದ್ದರು. ಇಂದು ಪಾರ್ವತಿಬಾಯಿ ಮತ್ತು ಪಾಂಡು ಅವರ ಸಾವಿನೊಂದಿಗೆ ಎರಡು ಕುಟುಂಬಗಳ ಒಟ್ಟು ಐವರು ಸದಸ್ಯರು ಈ ದುರ್ಘಟನೆಯಲ್ಲಿ ಮಣ್ಣಾಗಿದ್ದಾರೆ.

ದುಡಿಯಲು ಹೋಗಿ ಹಸನ್ಮುಖಿಯಾಗಿ ಊರಿಗೆ ಮರಳುತ್ತಿದ್ದ ಬಡ ಕಾರ್ಮಿಕರು ಅರ್ಧದಾರಿಯಲ್ಲೇ ಹೆಣವಾಗಿರುವುದು ಅತೀವ ನೋವು ತಂದಿದೆ. ಘಟನಾ ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತೀ ವೇಗ ಅಥವಾ ಯಾಂತ್ರಿಕ ದೋಷ ಈ ಘಟನೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಬಡ ಕಬ್ಬು ಕಾರ್ಮಿಕರ ಸಾವಿಗೆ ಜಿಲ್ಲೆಯಾದ್ಯಂತ ಸಂತಾಪ ವ್ಯಕ್ತವಾಗುತ್ತಿದ್ದು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Source link
ಕಬ್ಬು ಕಟಾವು ಕಾರ್ಮಿಕರ ಟ್ರ್ಯಾಕ್ಟರ್ ಅಪಘಾತ; ಇಂದು ಅಕ್ಕ-ತಮ್ಮ ಸಾವು, ಮೃತರ ಸಂಖ್ಯೆ 5ಕ್ಕೆ ಏರಿಕೆ!