IND vs ENG: ಕೇವಲ ಒಮ್ಮೆ ಮಾತ್ರ… ಲೀಡ್ಸ್​ನಲ್ಲಿ ಗೆಲ್ಲಲಿದೆಯಾ ಟೀಮ್ ಇಂಡಿಯಾ

IND vs ENG: ಕೇವಲ ಒಮ್ಮೆ ಮಾತ್ರ… ಲೀಡ್ಸ್​ನಲ್ಲಿ ಗೆಲ್ಲಲಿದೆಯಾ ಟೀಮ್ ಇಂಡಿಯಾ


ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಕುತೂಹಲಘಟ್ಟದತ್ತ ಸಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಯಶಸ್ವಿ ಜೈಸ್ವಾಲ್ (101), ಶುಭ್​​ಮನ್ ಗಿಲ್ (147) ಹಾಗೂ ರಿಷಭ್ ಪಂತ್ (134) ಶತಕ ಸಿಡಿಸಿದ್ದರು. ಈ ಶತಕಗಳ ನೆರವಿನೊಂದಿಗೆ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 471 ರನ್​ ಕಲೆಹಾಕಿತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ ಪರ ಬೆನ್ ಡಕೆಟ್ 62 ರನ್ ಬಾರಿಸಿದರೆ, ಒಲೀ ಪೋಪ್ 101 ರನ್​ಗಳ ಶತಕ ಸಿಡಿಸಿದರು. ಇನ್ನು ಹ್ಯಾರಿ ಬ್ರೂಕ್ 99 ರನ್​ಗಳ ಇನಿಂಗ್ಸ್ ಆಡಿದರು. ಈ ಮೂಲಕ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 465 ರನ್​ಗಳಿಸಿ ಆಲೌಟ್ ಆಯಿತು.

6 ರನ್​ಗಳ ಮುನ್ನಡೆ:

ಮೊದಲ ಇನಿಂಗ್ಸ್​ನಲ್ಲಿ ಕೇವಲ 6 ರನ್​ಗಳ ಮುನ್ನಡೆ ಪಡೆದ ಟೀಮ್ ಇಂಡಿಯಾ ಪರ ದ್ವಿತೀಯ ಇನಿಂಗ್ಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 137 ರನ್ ಬಾರಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ 118 ರನ್​ ಸಿಡಿಸಿದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಪರಿಣಾಮ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ 364 ರನ್​ಗಳಿಸಿ ಆಲೌಟ್ ಆಯಿತು.

371 ರನ್​ಗಳ ಗುರಿ:

ಮೊದಲ ಇನಿಂಗ್ಸ್​ನಲ್ಲಿನ 6 ರನ್​ಗಳ ಹಿನ್ನಡೆಯೊಂದಿಗೆ ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್​ನಲ್ಲಿ 371 ರನ್​​ಗಳ ಗುರಿ ಪಡೆದುಕೊಂಡಿದೆ. ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಂಗ್ಲರು ನಾಲ್ಕನೇ ದಿನದಾಟದ ಮುಕ್ತಾಯದ ವೇಳೆಗೆ 6 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್​​ ಕಲೆಹಾಕಿದೆ. ಇನ್ನು ಒಂದು ದಿನದಾಟ ಮಾತ್ರ ಬಾಕಿಯಿದ್ದು, ಈ ವೇಳೆ 350 ರನ್​ಗಳಿಸಿದರೆ ಮಾತ್ರ ಇಂಗ್ಲೆಂಡ್ ಗೆಲ್ಲಬಹುದು.

ಚೇಸಿಂಗ್ ಸಾಧ್ಯನಾ?

ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ಚೇಸಿಂಗ್ ಕಷ್ಟಕರವೇನಲ್ಲ. ಈ ಮೈದಾನದಲ್ಲಿ ಆಡಿದ ಕೊನೆಯ 5 ಟೆಸ್ಟ್ ಪಂದ್ಯಗಳಲ್ಲೂ ನಾಲ್ಕನೇ ಇನಿಂಗ್ಸ್ ಆಡಿದ ತಂಡವೇ ಗೆದ್ದಿದೆ. ಅಲ್ಲದೆ ಈ ಮೈದಾನದಲ್ಲಿ 1948 ರಲ್ಲಿ ಆಸ್ಟ್ರೇಲಿಯಾ ತಂಡವು 404 ರನ್​ಗಳನ್ನು ಚೇಸ್ ಮಾಡಿ ಗೆದ್ದ ಇತಿಹಾಸವಿದೆ. ಇದಲ್ಲದೆ 2019 ರಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧ 362 ರನ್​ಗಳನ್ನು ಬೆನ್ನತ್ತಿ ಗೆದ್ದಿದೆ.

ಇನ್ನು ಇತ್ತೀಚಿನ ಚೇಸಿಂಗ್ ದಾಖಲೆಗಳನ್ನು ನೋಡುವುದಾದರೆ, 2022 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ 296 ರನ್​ಗಳನ್ನು ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಹಾಗೆಯೇ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 254 ರನ್​ಗಳನ್ನು ಚೇಸ್ ಮಾಡಿದೆ.

ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಹೆಡಿಂಗ್ಲೆ ಮೈದಾನದಲ್ಲಿ ಬೆನ್ನತ್ತಿ ಗೆದ್ದ ಗರಿಷ್ಠ ಸ್ಕೋರ್. ಅಂದರೆ ನಾಲ್ಕನೇ ಇನಿಂಗ್ಸ್​ನಲ್ಲಿ 370+ ಸ್ಕೋರ್ ಅನ್ನು ಬೆನ್ನತ್ತಿ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಅದು ಕೂಡ 1948 ರಲ್ಲಿ.

ಅಂದರೆ ಕಳೆದ 76 ವರ್ಷಗಳಲ್ಲಿ ಯಾವುದೇ ತಂಡ ಈ ಮೈದಾನದಲ್ಲಿ 370+ ಕ್ಕಿಂತ ಹೆಚ್ಚಿನ ಮೊತ್ತ ಚೇಸ್ ಮಾಡಿಲ್ಲ. ಇತ್ತ ಟೀಮ್ ಇಂಡಿಯಾ ನೀಡಿರುವುದು 371 ರನ್​ಗಳ ಗುರಿ. ಹೀಗಾಗಿ ಇತಿಹಾಸವನ್ನು ಗಣನೆಗೆ ತೆಗೆದುಕೊಂಡರೆ ಅದೃಷ್ಟವು ಭಾರತದ ಕೈ ಹಿಡಿಯುವ ಸಾಧ್ಯತೆಯಿದೆ.

ಟೀಮ್ ಇಂಡಿಯಾ ಗೆಲ್ಲುತ್ತಾ?

ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ ಉತ್ತಮ ದಾಳಿ ಸಂಘಟಿಸಿತ್ತು. ಇದಾಗ್ಯೂ ಕಳಪೆ ಫೀಲ್ಡಿಂಗ್​ನಿಂದಾಗಿ ಇಂಗ್ಲೆಂಡ್ 465 ರನ್​ಗಳಿಸಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು. ಇದೀಗ 371 ರನ್​ಗಳ ಗುರಿ ಪಡೆದಿರುವ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಲು ಟೀಮ್ ಇಂಡಿಯಾ ಬಳಿ ಬುಮ್ರಾಸ್ತ್ರವಿದೆ. ಅಷ್ಟೇ ಅಲ್ಲದೆ 350+ ರನ್​ಗಳನ್ನು ನೀಡಿ ಟೀಮ್ ಇಂಡಿಯಾ ಟೆಸ್ಟ್ ಪಂದ್ಯವನ್ನು ಸೋತಿರುವುದು ಕೇವಲ ಒಮ್ಮೆ ಮಾತ್ರ.

ಭಾರತ ತಂಡವು ಈವರೆಗೆ 59 ಟೆಸ್ಟ್​ ಪಂದ್ಯಗಳಲ್ಲಿ ಕೊನೆಯ ಇನಿಂಗ್ಸ್​ನಲ್ಲಿ 350+ ರನ್​ಗಳ ಟಾರ್ಗೆಟ್ ನೀಡಿದೆ. ಈ ವೇಳೆ 42 ಬಾರಿ ಟೀಮ್ ಇಂಡಿಯಾ ಗೆದ್ದಿದೆ. ಇನ್ನು 16 ಪಂದ್ಯಗಳನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಸೋತಿರುವುದು ಕೇವಲ ಒಂದು ಬಾರಿ ಮಾತ್ರ.

ಅಂದರೆ ಟೀಮ್ ಇಂಡಿಯಾ 350+ ರನ್​ಗಳ ಗುರಿ ನೀಡಿ ಸೋತಿರುವುದು ಕೇವಲ ಒಮ್ಮೆ ಮಾತ್ರ. ಇದೀಗ ಇಂಗ್ಲೆಂಡ್ ಮುಂದಿರುವ ಗುರಿ 371 ರನ್​ಗಳು. ಇತ್ತ ಟೆಸ್ಟ್ ಇತಿಹಾಸದಲ್ಲಿ 350+ ರನ್​ಗಳ ಟಾರ್ಗೆಟ್ ನೀಡಿ ಒಮ್ಮೆ ಮಾತ್ರ ಸೋತಿರುವ ಭಾರತ ತಂಡದಿಂದ ಲೀಡ್ಸ್​ನಲ್ಲೂ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹದು. ಈ ಭರ್ಜರಿ ಪ್ರದರ್ಶನದೊಂದಿಗೆ ಟೀಮ್ ಇಂಡಿಯಾ ಬೌಲರ್​ಗಳು ಆಂಗ್ಲರನ್ನು ಕಟ್ಟಿ ಹಾಕಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: RCB ಕೋಚ್​ನ ವಿಶ್ವ ದಾಖಲೆ ಸರಿಗಟ್ಟಿದ ರಿಷಭ್ ಪಂತ್

ಫೈನಲ್ ಪಾಯಿಂಟ್ಸ್​:

  • ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ 370+ ಸ್ಕೋರ್​ ಚೇಸ್ ಮಾಡಿ ಗೆದ್ದಿರುವುದು ಒಮ್ಮೆ ಮಾತ್ರ.
  • ಟೀಮ್ ಇಂಡಿಯಾ 350+ ರನ್​ಗಳ ಗುರಿ ನೀಡಿ ಸೋತಿರುವುದು ಕೇವಲ ಒಮ್ಮೆ ಮಾತ್ರ.
  • ಇಂಗ್ಲೆಂಡ್ ತಂಡದ ಮುಂದಿರುವ ಗುರಿ 371 ರನ್​ಗಳು.



Source link

Leave a Reply

Your email address will not be published. Required fields are marked *